ಬ್ಯಾರಿ ಎಂಬ ಸ್ವತಂತ್ರ ಭಾಷೆ

ಬಿ.ಎಂ. ಹನೀಫ್

೨೦ನೇ ಶತಮಾನದ ಕೊನೆಯಲ್ಲಿ ಬ್ಯಾರಿ ಭಾಷೆಯ ಕುರಿತು ಇದ್ದ ಕೀಳರಿಮೆಗಳು ಕಣ್ಮರೆಯಾಗಿ ಬ್ಯಾರಿ ಭಾಷೆಗೆ ಒಳ್ಳೆಯ ದಿನಗಳು ಬಂದಿರುವುದು ಸ್ಪಷ್ಟ. ೧೯೬೨ರಲ್ಲಿ ಹುಟ್ಟಿದ ನಾನು ನನ್ನ ಶಾಲಾ-ಕಾಲೇಜು ದಿನಗಳಲ್ಲಿ ದಾಖಲೆಯಲ್ಲಿ ಮಲಯಾಳಿ ಮುಸ್ಲಿಂ' ಎಂದು ಬರೆದುಕೊಳ್ಳುತ್ತಿದ್ದೆ. ನನ್ನ ತಂದೆಯವರುಮಾಪ್ಳಾ ಮುಸ್ಲಿಂ’ ಎಂದು ಬರೆದುಕೊಂಡದ್ದುAಟು. ಮಾತೃಭಾಷೆ ಎನ್ನುವ ಕಾಲಂನಲ್ಲಿ ನನ್ನ ತಂದೆ ಮಾಪ್ಳಾ ಮಲಯಾಳಂ ಎಂದೂ, ನಾನು `ಲೋಕಲ್ ಮಲಯಾಳಂ’ ಎಂದೂ ಬರೆಯುತ್ತಿದ್ದುದು ನನಗೆ ಇನ್ನೂ ನೆನಪಿದೆ. ಇನ್ನಷ್ಟು ಸೂಕ್ಷö್ಮವಾಗಿ ನೋಡಿದರೆ ಹಾಗೆ ಬರೆಯುವ ಆಯ್ಕೆಯೂ ನಮ್ಮದಾಗಿರಲಿಲ್ಲ. ಖಾನೇಷುಮಾರಿಗೋ, ಇನ್ಯಾವ ಗಣತಿಗೋ ಬಂದ ಸರ್ಕಾರಿ ನೌಕರರು ಹಾಗೆ ಅವರೇ ನಿರ್ಧರಿಸಿ ಬರೆದುಕೊಂಡು ಹೋಗುತ್ತಿದ್ದರು. ಅದನ್ನೇ ನಾವೂ ಬಳಸುತ್ತಿದ್ದೆವು.

ಬ್ಯಾರಿ ಎನ್ನುವ ಶಬ್ದ ಆಗ ಬೈಗುಳವೂ ಆಗಿತ್ತು. ದಾನೆಯ ಬ್ಯಾರಿ' ಎಂದು ಯಾರಾದರೂ ತುಳುವಿನಲ್ಲಿ ಸಹಜವಾಗಿ ಕೇಳಿದರೂ, ಅದು ನಮಗೆ ಅಪಮಾನವೆಂಬAತೆ ಕೇಳಿಸುತ್ತಿತ್ತು. ನನ್ನ ಅಪ್ಪನ ಅಜ್ಜ ದೊಡ್ಡ ಜಮೀನ್ದಾರರಾಗಿದ್ದು, ಮೂಲ್ಕಿ-ಮಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ಬ್ರಿಟಿಷ್ ಅಧಿಕಾರಿಗಳು ಅವರ ಕೋರಿಕೆಯ ಮೇರೆಗೆ ನಮ್ಮ ಮನೆಯ ಮುಂದೆ ನಿಂತು ಎಳನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದರೂ, ನಮ್ಮ ಕಾಲದಲ್ಲಿ ತುಳುನಾಡಿನ ಸಾಮಾಜಿಕ ಸಂರಚನೆಯಲ್ಲಿ ಬ್ಯಾರಿ ಎನ್ನುವುದು ಅಪಮಾನದ ಶಬ್ದವೆಂಬ ಭಾವ ದಟ್ಟವಾಗಿತ್ತು. ಹಾಗೆಂದೇ ನನ್ನ ಅಜ್ಜ ಹಸನಬ್ಬ ಬ್ಯಾರಿಗೆ ದೊಡ್ಡ ಹೆಸರಿದ್ದರೂ, ಅಪ್ಪ ಮತ್ತು ನನ್ನ ಕಾಲಕ್ಕೆ ಹೆಸರಿನಲ್ಲಿ ಬ್ಯಾರಿ ಎನ್ನುವಸರ್‌ನೇಮ್’ ಪ್ರಜ್ಞಾಪೂರ್ವಕವಾಗಿಯೇ ಕಣ್ಮರೆಯಾಗಿತ್ತು. ಇದಕ್ಕೆ ನನ್ನ ಅಪ್ಪ ಆ ಕಾಲದಲ್ಲೇ ಎಸೆಸೆಲ್ಸಿ ಮತ್ತು ಡಿಪ್ಲೊಮಾವರೆಗೆೆ ಪಡೆದ ವಿದ್ಯಾಭ್ಯಾಸವೂ ಒಂದು ಕಾರಣ ವಾಗಿತ್ತು! ನನ್ನ ಸಮಕಾಲೀನರೆಲ್ಲರ ವಿಷಯವೂ ಹಾಗೆಯೇ ಇತ್ತು. ಈಗ ೨೧ನೇ ಶತಮಾನದ ಎರಡನೇ ದಶಕದಲ್ಲಿ `ಬ್ಯಾರಿ’ ಎನ್ನುವ ಶಬ್ದವನ್ನು ನಾನು ಮತ್ತು ನನ್ನ ನಂತರದವರು ಅತ್ಯಂತ ಹೆಮ್ಮೆಯಿಂದ ಹೇಳುವ ಪರಿಸರ ನಮ್ಮದಾಗಿದೆ. ಕೊಂಕಣಿ, ತುಳು, ಕೊಡವ, ಕನ್ನಡದ ಜತೆಗೇ ಬ್ಯಾರಿ ಎನ್ನುವ ಭಾಷೆಯೂ ಸರಿಸಮಾನವಾದದ್ದು ಎನ್ನುವ ನಂಬಿಕೆ ಗಟ್ಟಿಯಾಗಿದೆ. ಹೀಗೆ ಭಾಷೆ-ಸಂಸ್ಕೃತಿಯೊAದು ಘನವಾದ ಅಸ್ಮಿತೆಯನ್ನು ಮತ್ತೆ ಪಡೆದುಕೊಂಡದ್ದು ಭಾಷಾ ಚರಿತ್ರೆಯಲ್ಲಿ ಒಂದು ವಿಶಿಷ್ಟ ಸಂಗತಿಯೇ ಸರಿ. ಈ ಪರಿವರ್ತನೆಯ ಇತಿಹಾಸವನ್ನು ಗುರುತಿಸಿ ದಾಖಲಿಸಿದರೆ ಅದೊಂದು ಅನನ್ಯ ಚರಿತ್ರೆಯೇ ಆಗುತ್ತದೆ.

ಬ್ಯಾರಿ ಭಾಷೆ ಹುಟ್ಟಿದ್ದು ಯಾವಾಗ? ಕನ್ನಡ ಕರಾವಳಿಗೆ ಇಸ್ಲಾಂ ಪ್ರವೇಶಿಸುವುದಕ್ಕಿಂತಲೂ ಮುಂಚಿನಿAದಲೇ ಬ್ಯಾರಿ ಭಾಷೆ ಇತ್ತೆ? ಬ್ಯಾರಿ ಭಾಷೆ ಮಾತನಾಡುವ ಎಲ್ಲರೂ ಮುಸ್ಲಿಮರೇ ಏಕೆ? ಕರಾವಳಿಯ ಹಿಂದುಳಿದ ಜನಾಂಗದ ಕೆಲವರು ಈಗಲೂ ಮಾತನಾಡುವ ಮೋಯ, ತೀಯ ಭಾಷೆಗಳೂ ಬ್ಯಾರಿ ಭಾಷೆಯಿಂದ ಹೊರಟ ಕವಲುಗಳೆ? ಬ್ಯಾರಿ ಭಾಷೆ ಸ್ವತಂತ್ರ ಭಾಷೆಯಾಗಿದ್ದರೆ, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲಯಾಳಂ ಮತ್ತು ತುಳು ಶಬ್ದಗಳು ಇರುವುದೇಕೆ? ದ್ರಾವಿಡ ಭಾಷೆಯ ಕವಲೊಡೆದ ಭಾಷೆಯಾಗಿ ಬ್ಯಾರಿ ಸ್ವತಂತ್ರ ರೂಪ ಪಡೆದ ನಿರ್ದಿಷ್ಟ ಅವಧಿ ಯಾವುದು? ಈ ಎಲ್ಲ ಪ್ರಶ್ನೆಗಳ ಬೆನ್ನುಹತ್ತಿ ಹೋದರೆ ಸಂಶೋಧಕರಿಗೆ ಪುಷ್ಕಳ ಭೋಜನವೇ ಕಾದಿದೆ. ಈ ರೀತಿಯ ಸಂಶೋಧನೆಗೆ ಆಕರಗ್ರಂಥಗಳು ಮಾತ್ರವಲ್ಲ ಕ್ಷೇತ್ರಕಾರ್ಯಗಳೂ ನೆರವಾಗಬೇಕಾಗುತ್ತದೆ. ಆದರೆ ಬ್ಯಾರಿ ಭಾಷೆಯ ದುರಂತವೆAದರೆ, ಈ ಮಾತೃಭಾಷೆಯ ಅಸ್ಮಿತೆಯ ಹುಡುಕಾಟ ಗಟ್ಟಿ ಧ್ವನಿ ಪಡೆದುಕೊಂಡದ್ದು ೨೦ನೇ ಶತಮಾನದ ಕೊನೆಯಲ್ಲಿ. ಭಾಷೆಯ ಕುರಿತ ಕೀಳರಿಮೆಯನ್ನು ತೊಡೆದುಹಾಕುವ ಪ್ರಯತ್ನ ಸುಮಾರು ೩೦-೪೦ ವರ್ಷಗಳ ಹಿಂದೆ ಆರಂಭವಾಯಿತು. ಈ ಕೆಲಸ ಇನ್ನೂ ೫೦ ವರ್ಷಗಳಿಗೆ ಮುಂಚೆಯೇ ಶುರುವಾಗಿದ್ದರೆ, ಬಹುಶಃ ನಮಗೆ ಕ್ಷೇತ್ರಕಾರ್ಯ ನಡೆಸಲು ಬೇಕಾದ ಸಂಪನ್ಮೂಲ ವ್ಯಕ್ತಿಗಳು ಸಿಗುತ್ತಿದ್ದರೇನೋ. ಕಳೆದ ಶತಮಾನದ ೬೦ರ ದಶಕದ ಆರಂಭದಲ್ಲಿ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಅವರು ಬ್ಯಾರಿ ಭಾಷೆ ಮತ್ತು ಜಾನಪದ ಕಥೆಗಳ ಕುರಿತು ಬರೆದ ಮಹಾಪ್ರಬಂಧ ಪೂನಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ಗೆ ಪಾತ್ರವಾಯಿತು. (ಅದರಲ್ಲೂ ಅವರು ಮಾಪ್ಳಾ ಮುಸ್ಲಿಂ ಎಂಬ ಪದಪ್ರಯೋಗವನ್ನೇ ಮಾಡಿದ್ದಾರೆ.) ೬೦ರ ದಶಕದಲ್ಲಿ ಅಹ್ಮದ್ ನೂರಿ ಅವರು ಬ್ಯಾರಿ ಭಾಷೆಯ ಹಾಡುಗಳನ್ನು, ಭಾಷೆಯ ಮಹತ್ವವನ್ನೂ ಕುರಿತು ಬರೆದಿದ್ದರು. ೭೦ರ ದಶಕದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದ ಬಿ.ಎಂ.ಇಚ್ಲAಗೋಡು ಅವರು ಬಿಡಿ ಬಿಡಿಯಾಗಿ ಬ್ಯಾರಿ ಭಾಷೆ, ಸಂಸ್ಕೃತಿ, ಲಿಪಿಯ ಕುರಿತು ಲೇಖನಗಳನ್ನು ಬರೆದಿದ್ದರು. ಆ ಹೊತ್ತಿಗೆ ಅಷ್ಟು ಬಿಡಿಪ್ರಯತ್ನಗಳು ಬಿಟ್ಟರೆ, ಬೇರೆ ಆಕರಗಳು ರಚನೆಯಾಗಲಿಲ್ಲ. ಹಾಗಾಗಿ ಇವತ್ತಿಗೂ ಬ್ಯಾರಿ ಭಾಷೆಯ ಕುರಿತು ವಿದ್ವಾಂಸರಲ್ಲಿ ಹಲವು ಭಿನ್ನ ಅಭಿಪ್ರಾಯಗಳು ಕಾಣಸಿಗುತ್ತವೆ.

ಏಳನೇ ಶತಮಾನದ ಮಧ್ಯೆ ಅವಧಿಯಲ್ಲಿ ಕನ್ನಡ ಕರಾವಳಿಗೆ ಇಸ್ಲಾಂ ಧರ್ಮದ ಪ್ರವೇಶವಾಯಿತೆಂದು ಬಹುತೇಕ ಇತಿಹಾಸಜ್ಞರು ಗುರುತಿಸಿದ್ದಾರೆ. ವ್ಯಾಪಾರಕ್ಕಾಗಿ ಬಂದ ಅರಬ್ಬರು ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ನೆಲೆ ನಿಂತು ಸ್ಥಳೀಯರೊಂದಿಗೆ ವೈವಾಹಿಕ ಸಂಬAಧ ಬೆಳೆಸಿದ್ದು ಹೊಸ ಜನಾಂಗವೊAದರ ಉದಯಕ್ಕೆ ಕಾರಣವಾಯಿತು. ಊಳಿಗಮಾನ್ಯ ವ್ಯವಸ್ಥೆ ಮತ್ತು ಜಾತಿಪದ್ಧತಿ ಬಲವಾಗಿದ್ದ ಆ ದಿನಗಳಲ್ಲಿ ಕರಾವಳಿಗೆ ಬಂದ ಅರಬ್ಬರು ಬಹುತೇಕ ಕೆಳವರ್ಗದ ಜನರನ್ನು ಇಸ್ಲಾಮಿನತ್ತ ಆಕರ್ಷಿಸಿದ್ದು ಸಹಜವೇ ಆಗಿತ್ತು. ವ್ಯಾಪಾರದಲ್ಲಿ ಅರಬ್ಬರ ಔದಾರ್ಯ, ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧ ಜೀವನಶೈಲಿ ಸ್ಥಳೀಯರನ್ನು ಸೆಳೆದದ್ದೂ ಸುಳ್ಳಲ್ಲ. ಅರಬ್ಬರ ಸಂಪರ್ಕದಿAದಾಗಿಯೇ ದಕ್ಷಿಣದ ಕರಾವಳಿಯಲ್ಲಿ ಹೊಸ ಜನಾಂಗಗಳು ಜನ್ಮ ತಳೆದವು ಎಂದು ಇತಿಹಾಸಕಾರ ತಾರಾಚಂದ್ ಅವರೂ ಗುರುತಿಸಿದ್ದಾರೆ.೧ ಅರಬ್ಬರ ಸಂಪರ್ಕವಾಗಿ ಇಸ್ಲಾಂ ಸ್ವೀಕರಿಸುವುದಕ್ಕಿಂತ ಮುಂಚೆ ಮಲಯಾಳಂ ಮತ್ತು ತುಳು ಭಾಷೆಗಳನ್ನು ಆಡುತ್ತಿದ್ದ ಜನವರ್ಗ ಆ ಬಳಿಕ ಅರೆಬಿಕ್ ಭಾಷೆಯ ಸಂಪರ್ಕಕ್ಕೂ ಬರುವಂತಾಯಿತು. ಈ ವರ್ಣಸಂಕರ ಮಾತಿನ ಕ್ರಮ, ಶಬ್ದಬಳಕೆಗಳಲ್ಲಿ ವ್ಯತ್ಯಾಸವನ್ನು ಉಂಟು ಮಾಡಿ, ಕ್ರಮೇಣ ಬ್ಯಾರಿ ಭಾಷೆಯೆಂಬ ಸ್ವತಂತ್ರ ಭಾಷೆ ಉದ್ಭವವಾಯಿತು. (ಆದರೆ ಇಸ್ಲಾಂ ಸ್ವೀಕಾರಕ್ಕೂ ಮುನ್ನವೇ ಬ್ಯಾರಿ ಭಾಷೆ ಸ್ವತಂತ್ರವಾಗಿಯೇ ಇತ್ತು; ಆಗ ಹಿಂದೂಗಳು ಬ್ಯಾರಿ ಭಾಷೆ ಮಾತನಾಡುತ್ತಿದ್ದರು ಎನ್ನುವವರೂ ಇದ್ದಾರೆ. ಆದರೆ ಈ ವಾದದ ತರ್ಕಬದ್ಧತೆ ಸಾಕಷ್ಟು ದುರ್ಬಲವಾಗಿದೆ. ಈ ನಿಟ್ಟಿನಲ್ಲಿ ದೃಢ ಸಂಶೋಧನೆಗಳೂ ನಡೆದಿಲ್ಲ.)

ಇವತ್ತು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಬೆಂಗಳೂರು, ಪಣಜಿ, ಮುಂಬೈ-ಮುAತಾಗಿ ಹಲವು ಕಡೆಗಳಲ್ಲಿ ಬ್ಯಾರಿಗಳು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ದುಬೈ, ಸೌದಿ ಅರೇಬಿಯ ಸಹಿತ ಕೊಲ್ಲಿ ದೇಶಗಳಲ್ಲಿ ದುಡಿಯಲು ಹೋಗಿ ನೆಲೆಸಿರುವ ಬ್ಯಾರಿಗಳ ಜನಸಂಖ್ಯೆಯೂ ದೊಡ್ಡದಿದೆ. ಅಮೆರಿಕ, ಆಸ್ಟೆçÃಲಿಯಾ ಸಹಿತ ಜಗತ್ತಿನ ಅನೇಕ ದೇಶಗಳಲ್ಲಿ ಬ್ಯಾರಿಗಳು ಕಂಡುಬರುತ್ತಾರೆ. ೨೦೧೫ರ ಸಾಮಾಜಿಕ- ಆರ್ಥಿಕ ಗಣತಿಯ ಅಧಿಕೃತ ವಿವರಗಳು ಇನ್ನೂ ಬಿಡುಗಡೆಯಾಗಿಲ್ಲ. ಈ ಹೊತ್ತಿನಲ್ಲಿ ಬ್ಯಾರಿ ಭಾಷಿಕರ ಜನಸಂಖ್ಯೆ ಸುಮಾರು ೧೫ ಲಕ್ಷ ದಾಟಿದೆ ಎನ್ನುವುದು ಇಂದು ಅಂದಾಜು.

ಬ್ಯಾರಿ ಎನ್ನುವ ಶಬ್ದವು ತುಳುಮೂಲವಾದದ್ದು ಎನ್ನುವುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ತುಳುವಿನಲ್ಲಿ ಬ್ಯಾರ' ಎಂದರೆ ವ್ಯಾಪಾರ. ಬಹುತೇಕ ಎಲ್ಲ ರೀತಿಯ ವ್ಯಾಪಾರಗಳಲ್ಲೂ ಪಳಗಿದವರಾದ್ದರಿಂದಬ್ಯಾರಿ’ ಎಂಬ ಹೆಸರು ಬಂತು ಎನ್ನುತ್ತಾರೆ ಬಿ.ಎಂ.ಇಚ್ಲAಗೋಡು. ಆದರೆ ಸಂಶೋಧಕ ಡಾ.ವಹಾಬ್ ದೊಡ್ಡಮನೆಯವರ ಪ್ರಕಾರ, ಇನ್ನೂ ಒಂದು ವಾದವಿದೆ. ಅವರ ಪ್ರಕಾರ, ಅರೆಬಿಕ್‌ನಲ್ಲಿ `ಬಹಾರ್’ ಎಂದು ಸಮುದ್ರಕ್ಕೆ ಹೇಳುತ್ತಾರೆ. ಸಮುದ್ರ ದಾಟಿ ಬಂದವರ ಜತೆಗೆ ಉಂಟಾದ ಸಂಪರ್ಕದಿAದಾಗಿ ಹುಟ್ಟಿದ ಜನಸಮುದಾಯವಾದ್ದರಿಂದ ಆ ಶಬ್ದದಿಂದಲೇ ಬ್ಯಾರಿ ಶಬ್ದ ಹುಟ್ಟಿರಲೂಬಹುದು.೨ (ತುಳುವಿನ ಬ್ಯಾರದಿಂದಲೇ ಬ್ಯಾರಿ ಶಬ್ದ ಹುಟ್ಟಿದೆ ಎನ್ನುವ ವಾದಕ್ಕೆ ಹೆಚ್ಚಿನ ಸಂಶೋಧಕರು ಒಲವು ವ್ಯಕ್ತಪಡಿಸಿದ್ದಾರೆ.)

ದಕ್ಷಿಣ ಭಾರತದ ತಮಿಳು, ಮಲಯಾಳಂ, ಕನ್ನಡ, ತುಳು ಮುಂತಾದ ಭಾಷೆಗಳು ದ್ರಾವಿಡ ಬುಡಕಟ್ಟಿಗೆ ಸೇರಿದ ಭಾಷೆಗಳು ಎನ್ನುವುದು ಸರ್ವವೇದ್ಯ. ಬ್ಯಾರಿ ಭಾಷೆಯೂ ದಕ್ಷಿಣ ದ್ರಾವಿಡ ಕುಟುಂಬಕ್ಕೆ ಸೇರಿದ ಇನ್ನೊಂದು ಸ್ವತಂತ್ರ ಭಾಷೆ. ಕಳೆದ ಶತಮಾನದ ಕೊನೆಯವರೆಗೂ ಇದನ್ನು ಮಲಯಾಳಂನ ಉಪಭಾಷೆ ಎಂದೇ ಪಂಡಿತರು ಗುರುತಿಸಿದ್ದು, ಕ್ಷೇತ್ರಕಾರ್ಯಗಳ ಕೊರತೆಯಿಂದ ಉಂಟಾದ ನಿರ್ಲಕ್ಷö್ಯದ ಧೋರಣೆ ಎಂದರೆ ತಪ್ಪಾಗಲಿಕ್ಕಿಲ್ಲ. ಮುಖ್ಯವಾಗಿ ಕೇರಳದಿಂದ ವಲಸೆ ಬಂದ ಮಲಯಾಳಂ ಮಾತೃಭಾಷೆಯ ಧಾರ್ಮಿಕ ವಿದ್ವಾಂಸರು, ಬ್ಯಾರಿ ಸಮುದಾಯದ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿದ್ದುದೂ ಇದಕ್ಕೆ ಒಂದು ಕಾರಣ ಎಂದು ಈಗ ವಿಶ್ಲೇಷಿಸಲಾಗುತ್ತಿದೆ. ೬೦ರ ದಶಕದಲ್ಲಿ ಬ್ಯಾರಿಗಳ ಕುರಿತು ಮೊತ್ತಮೊದಲ ಡಾಕ್ಟರೇಟ್ ಪ್ರಬಂಧ ಬರೆದ ಡಾ. ಸುಶೀಲಾ ಉಪಾಧ್ಯಾಯ ಅವರೂ ತಮ್ಮ ಪ್ರಬಂಧದಲ್ಲಿ `ಮಾಪಿಳ್ಳೆ ಮುಸ್ಲಿಮರು’ ಎಂಬ ಪದಪ್ರಯೋಗವನ್ನೇ ಮಾಡಿದ್ದಾರೆ.

ಹಾಗೆ ಮಲಯಾಳಂನ ಉಪಭಾಷೆ ಎಂದು ಗುರುತಿಸಲು ಕಾರಣಗಳೂ ಇದ್ದವು ಎನ್ನುವುದನ್ನು ಒಪ್ಪಬಹುದು. ಬಹಳ ಮುಖ್ಯವಾದ ಕಾರಣ ಮಲಯಾಳಂ ಭಾಷೆಯ ಬಹುತೇಕ ಲಕ್ಷಣಗಳು ಬ್ಯಾರಿ ಭಾಷೆಯಲ್ಲಿ ಕಾಣುವುದು. ಬ್ಯಾರಿ ಭಾಷೆಯಲ್ಲಿ ಶೇಕಡಾ ೫೦ರಷ್ಟು ಶಬ್ದಗಳು ಇವತ್ತೂ ಮಲಯಾಳಂ ಭಾಷೆಯದ್ದೇ ಇವೆ. ಆದರೆ ಈ ಕಾರಣಕ್ಕಾಗಿಯೇ ಬ್ಯಾರಿ ಭಾಷೆಯನ್ನು ಮಲಯಾಳಂನ ಉಪಭಾಷೆ ಎನ್ನುವುದಾದರೆ, ಮಲಯಾಳಂ ಅನ್ನೂ ಸ್ವತಂತ್ರ ಭಾಷೆಯೆಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಮಲಯಾಳಂ ಭಾಷೆ ಹುಟ್ಟಿದಾಗಲೂ ಹೀಗೆಯೇ ತಮಿಳಿನ ಭಾಷಾ ಪ್ರಭಾವ ಅದರ ಮೇಲೆ ಗಾಢವಾಗಿತ್ತು. ಹಾಗೆ ನೋಡಿದರೆ ಬ್ಯಾರಿ ಭಾಷೆಯಲ್ಲಿ ಮಲಯಾಳಂ ಶಬ್ದಸಂಪತ್ತು ಹೆಚ್ಚಿದ್ದರೂ, ಬ್ಯಾರಿ ಭಾಷೆಯ ಧ್ವನಿವ್ಯವಸ್ಥೆ ಮತ್ತು ವ್ಯಾಕರಣ ತುಳು ಭಾಷೆಗೆ ಹೆಚ್ಚು ಸಮೀಪದಲ್ಲಿದೆ. ಹಾಗೆಂದು ಇದನ್ನು ತುಳುವಿನ ಉಪಭಾಷೆ ಎನ್ನಲೂ ಬರುವುದಿಲ್ಲ. ಅರಬ್ ವರ್ತಕರ ಸಂಪರ್ಕದಿAದ ಭಾಷೆಯಲ್ಲಾದ ಪಲ್ಲಟ, ಸಾವಿರಾರು ಹೊಸ ಶಬ್ದಗಳ ಸೃಷ್ಟಿಗೂ ಕಾರಣವಾಗಿದೆ. ಹಾಗಾಗಿ ಇದನ್ನು ಮಲಯಾಳಂನಿAದ ಮತ್ತು ತುಳುವಿನಿಂದ ಬೇರ್ಪಟ್ಟ ಭಾಷೆ ಎಂದು ಕರೆಯಬಹುದು. (ಮಲಯಾಳಂ ಅನ್ನು ತಮಿಳಿನಿಂದ ಬೇರ್ಪಟ್ಟ ಹೊಸ ಭಾಷೆ ಎಂದು ಕರೆಯುವ ಹಾಗೆ.)

೧೩ನೇ ಶತಮಾನದಲ್ಲಿ ಬಂದ ಮಾರ್ಕೊಪೋಲೊ ಮಂಗಳೂರಿನಲ್ಲಿರುವ ಮುಸ್ಲಿಂ ವರ್ತಕರ ಬಗ್ಗೆ ಉಲ್ಲೇಖಿಸಿದ್ದು, ಅವರು ತಮ್ಮದೇ ಆದ ಭಾಷೆಯನ್ನು ಮಾತನಾಡುತ್ತಾರೆ ಎಂದು ತಿಳಿಸಿದ್ದು ದಾಖಲೆಗಳಲ್ಲಿದೆ. ವಿದೇಶೀ ಪ್ರವಾಸಿಗನಾದ ಇಬನ್ ಬತೂತ ಮಂಗಳೂರಿನಲ್ಲಿ ಮುಸ್ಲಿಂ ವರ್ತಕರು ದೊಡ್ಡ ಸಂಖ್ಯೆಯಲ್ಲಿ ಇದ್ದುದನ್ನು ಬರೆದಿದ್ದಾನೆ. ಕ್ರಿ.ಶ. ೧೬೨೩ರಲ್ಲಿ ಮಂಗಳೂರಿಗೆ ಆಗಮಿಸಿದ ವಿದೇಶಿ ಪ್ರವಾಸಿ ಡೆಲ್ಲಾವೆಲ್ಲಿ ಮಂಗಳೂರಿನ ಮೂಸಾ ಬ್ಯಾರಿ ಬಗ್ಗೆ ಪ್ರಸ್ತಾಪಿಸಿದ್ದಾನೆ.೩ ಇವೆಲ್ಲವೂ ಬ್ಯಾರಿ ಭಾಷೆ ಸ್ವತಂತ್ರ ಭಾಷೆಯಾಗಿತ್ತು ಎಂಬುದನ್ನೇ ಸೂಚಿಸುತ್ತದೆ.

ಕನ್ನಡದಂತೆ ಬ್ಯಾರಿ ಭಾಷೆಯಲ್ಲೂ ಹಲವು ಪ್ರಾದೇಶಿಕ ವೈವಿಧ್ಯಗಳಿವೆ. ಬಿ.ಎಂ.ಇಚ್ಲAಗೋಡು ಅವರು, ಈ ವೈವಿಧ್ಯಗಳನ್ನು ನಾಲ್ಕು ಗುಂಪುಗಳಲ್ಲಿ ಪ್ರದೇಶವಾರು ಗುರುತಿಸುತ್ತಾರೆ.೪

೧) ಮಂಗಳೂರು-ಉಳ್ಳಾಲ-ಬAಟ್ವಾಳವರೆಗಿನ ಪ್ರದೇಶ ೨) ಸುರತ್ಕಲ್, ಬಜಪೆ, ಮೂಲ್ಕಿ ಪ್ರದೇಶ ೩) ಪುತ್ತೂರು, ವಿಟ್ಲ, ಉಪ್ಪಿನಂಗಡಿ ಪ್ರದೇಶ ೪) ಮಂಜೇಶ್ವರದಿAದ ಕಾಸರಗೋಡುವರೆಗಿನ ಪ್ರದೇಶ.

ಪ್ರದೇಶವಾರು ವೈವಿಧ್ಯವನ್ನೇ ಮಾನದಂಡವಾಗಿ ಇಟ್ಟುಕೊಳ್ಳುವುದಾದರೆ ಕೋಡಿ-ಕುಂದಾಪುರದ ವೈವಿಧ್ಯವನ್ನೂ, ಮಡಿಕೇರಿ ಸಹಿತ ಕೊಡಗಿನ ಹಲವು ಪ್ರದೇಶಗಳ ವೈವಿಧ್ಯವನ್ನೂ ಇನ್ನೆರಡು ಗುಂಪುಗಳಾಗಿ ಗುರುತಿಸಬಹುದು. ಉಚ್ಚಾರ ಮತ್ತು ಪದಬಳಕೆಗಳಲ್ಲಿ ಈ ಪ್ರದೇಶಗಳಲ್ಲಿ ಎದ್ದು ಕಾಣಿಸುವ ಭಿನ್ನತೆಗಳಿವೆ ಎನ್ನುವುದು ಕುತೂಹಲಕರ ಅಂಶ. ದಕ್ಷಿಣ ಭಾಗದಲ್ಲಿ ಮಲಯಾಳಂನ ಪ್ರಭಾವ ದಟ್ಟವಾಗಿರುವ ಹಿನ್ನೆಲೆಯಲ್ಲಿ ಬ್ಯಾರಿ ಭಾಷೆಯನ್ನು `ಮಲಾಮೆ’ ಎಂದೂ ಕರೆಯುವುದಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರುವ ಬ್ಯಾರಿ ಭಾಷೆಯ ಈ ವೈವಿಧ್ಯದ ಹಿನ್ನೆಲೆಯಲ್ಲಿಯೇ ಡಾ.ಅಮೃತ ಸೋಮೇಶ್ವರ ಅವರು, ವಿಭಿನ್ನ ವಾದವನ್ನು ಮುಂದಿಡುತ್ತಾರೆ. ಅವರ ಪ್ರಕಾರ, “ಮೋಯ ಭಾಷೆಯಂತೆಯೇ ಬ್ಯಾರಿ ಭಾಷೆ ಕೂಡಾ ಈಚೆಗೆ ವ್ಯವಹಾರಕ್ಕಾಗಿ ಬಂದ ಹೆಸರು. ಈ ನುಡಿಯ ಅನನ್ಯತೆಯನ್ನು ಎತ್ತಿಹಿಡಿಯಲಿಕ್ಕೆಂದೇ ಇದು ಮಲೆಯಾಳದ ಉಪಭಾಷೆಯಲ್ಲ, ಇದೊಂದು ಸ್ವತಂತ್ರ ಭಾಷೆ ಎಂಬ ಅಭಿಪ್ರಾಯವನ್ನು ಪ್ರಚುರ ಪಡಿಸಲಾಗಿದೆ. ಕರೆನಾಡಿನ ಮುಸ್ಲಿಂ ಆಡುನುಡಿಗಳಲ್ಲಿ ಮಂಗಳೂರು, ಉಳ್ಳಾಲ ಮುಂತಾದ ಕಡೆಗಳ ಭಾಷೆ, ಇತರ ಕಡೆಯ (ಕುಂಬಳೆ, ಕಾಸರಗೋಡು) ಬ್ಯಾರಿ ಆಡುನುಡಿಗಳಿಗಿಂತ ತುಸು ಸ್ವರೂಪಭೇದವುಳ್ಳದ್ದಾಗಿದೆ. ಮಂಗಳೂರು, ಉಳ್ಳಾಲ, ಸುರತ್ಕಲ್‌ನ ಪ್ರಾದೇಶಿಕ ಆಡುನುಡಿಯನ್ನು ಮಾತ್ರ ಬ್ಯಾರಿ ಭಾಷೆಯೆಂದು ಕರೆಯಬಹುದು. ಉಳಿದ ಭಾಗದ ಆಡುನುಡಿಗಳು ನಿಸ್ಸಂದೇಹವಾಗಿಯೂ ಮಲೆಯಾಳದ ಉಪಭಾಷೆಗಳೆಂದೇ ತಿಳಿಯಬೇಕಾಗುತ್ತದೆ. ಮಲಾಮೆ ಎಂಬ ಹೆಸರನ್ನು ಬೇಕಿದ್ದರೆ ಬಳಸಬಹುದು. ಮಂಗಳೂರು ಕಡೆಯ ಮುಸ್ಲಿಂ ಭಾಷೆಯನ್ನು ಮೈಕಾಲ ಭಾಷೆ ಎಂದೂ ಕರೆಯಬಹುದು.”೫

ಉಡುಪಿಯ ಹಿರಿಯ ಭಾಷಾಶಾಸ್ತçಜ್ಞರಾದ ಡಾ.ಯು.ಪಿ.ಉಪಾಧ್ಯಾಯ ಅವರ ಪ್ರಕಾರ, ಬ್ಯಾರಿ ಒಂದು ಸ್ವತಂತ್ರ ಭಾಷೆ. “ಬ್ಯಾರಿ ಭಾಷೆಯಲ್ಲಿ ಮಲಯಾಳ ಭಾಷೆಯ ಲಕ್ಷಣಗಳೂ ಹಲವಾರು ಇರುವುದರಿಂದ ಅದು ಮಲಯಾಳದ ಉಪಭಾಷೆಯೇ ಎಂಬ ಸಂದೇಹ ಬರುವುದು ಸಹಜ. ಅಂತೆಯೇ ತುಳು ಭಾಷೆಯ ಅಂಶಗಳೂ ಇರುವುದರಿಂದ ಅದು ತುಳುಭಾಷೆಯ ಉಪಭಾಷೆಯೇ ಎಂಬ ಸಂಶಯಕ್ಕೂ ಕಾರಣಗಳಿವೆ. ಆದರೆ ಅದು ಈ ಎರಡು ಭಾಷೆಗಳಿಗಿಂತಲೂ ಭಿನ್ನವಾಗಿದ್ದು, ಎರಡೂ ಭಾಷೆಗಳ ಕೆಲವು ಅಂಶಗಳನ್ನು ಸ್ವೀಕರಿಸಿ ಬೆಳೆದ ಒಂದು ಸ್ವತಂತ್ರ ಭಾಷೆ” ಎಂದು ಅವರು ಸ್ಪಷ್ಟವಾಗಿ ಬರೆದಿದ್ದಾರೆ.೬

ಎಲ್ಲ ಆಧುನಿಕ ದ್ರಾವಿಡ ಭಾಷೆಗಳಂತೆ ಬ್ಯಾರಿ ಭಾಷೆಯಲ್ಲೂ ಮಹಾಪ್ರಾಣಗಳಿಲ್ಲ. ಎರವಲು ಪದಗಳನ್ನು ಬಳಸುವಾಗ ಮಾತ್ರ ಮಹಾಪ್ರಾಣಗಳ ಬಳಕೆಯಾಗುತ್ತದೆ- ಅದೂ ಇತರ ದ್ರಾವಿಡ ಭಾಷೆಗಳಂತೆಯೇ. ಅರ್ಧ ಸ್ವರಗಳಾದ ಯ, ವ, ರೇಫ, ಪಾರ್ಶ್ವಿಕ ಲ, ಕಂಠ್ಯ ಹ ಇವುಗಳೂ ಬ್ಯಾರಿ ಭಾಷೆಯಲ್ಲಿವೆ. ಮಲಯಾಳದ ಎರಡು ಬಗೆಯ ತಕಾರಗಳೂ, ಎರಡು ಬಗೆಯ ನಕಾರಗಳೂ (ದಂತ್ಯ ಮತ್ತು ವತ್ಸÀ ್ರ್ಯ) ಬ್ಯಾರಿ ಭಾಷೆಯಲ್ಲಿ ಇಲ್ಲ. ಒಂದು ಭಾಷೆಯಿಂದ ಕವಲೊಡೆದು ಇನ್ನೊಂದು ಭಾಷೆ ಸ್ವತಂತ್ರವಾಗುವಾಗ ಸಹಜವಾಗಿ ಆಗುವ ಧ್ವನಿ ಪರಿವರ್ತನೆಗಳು ಬ್ಯಾರಿ ಭಾಷೆಯಲ್ಲೂ ಸಹಜವಾಗಿಯೇ ಆಗಿದೆ.

ಬ್ಯಾರಿ ಭಾಷೆಯಲ್ಲಿ ಬಹುವಚನ ಪ್ರತ್ಯಯ ಙ, ಅಲ್ ರೂಪದಲ್ಲಿದೆ. ಸ್ತಿçÃವಾಚಕವಾಗಿ ಇ, ಇತ್ತಿ ಬಳಕೆಯಲ್ಲಿದೆ. ಸರ್ವನಾಮಗಳಾಗಿ ನಾನ್, ನಙ, ನಙಲ್, ನೀನ್, ನಿಙ, ನಿಙಲ್, ಓಲು, ಅಙ, ಅದ್, ಅದ್‌ಙ ಬಳಕೆಯಲ್ಲಿದೆ. ಸ್ತಿçÃಲಿಂಗ ವಾಚಕ ಸರ್ವನಾಮದೊಂದಿಗೆ ನಪುಂಸಕ ಲಿಂಗ ಕ್ರಿಯಾರೂಪಗಳನ್ನು ಪ್ರಯೋಗಿಸುವ ಸಂಪ್ರದಾಯವೂ ಇದೆ. (ಉದಾಹರಣೆಗೆ ಐಮ ಬಂತ್= ಆ ಮಹಿಳೆ ಬಂದರು.) ಇದು ಇತರ ಕೆಲವು ದ್ರಾವಿಡ ಭಾಷೆಗಳನ್ನು ಹೋಲುವಂತಿದೆ.

ಬ್ಯಾರಿ ಭಾಷೆಯಲ್ಲಿ ಮಲಯಾಳಂ, ತುಳುವಿನಿಂದ ಬಂದ ಶಬ್ದಗಳು ಇರುವಂತೆಯೇ ತಮಿಳು, ಅರಬ್ಬಿ, ಪರ್ಶಿಯನ್ ಮೂಲದ ಶಬ್ದಗಳೂ ಇವೆ. ಜತೆಗೆ ಕನ್ನಡ-ಸಂಸ್ಕೃತ ಮೂಲದ ಶಬ್ದಗಳೂ ಇವೆ. ಇದರ ಹೊರತಾಗಿಯೂ ಶೇಕಡಾ ೨೫ರಷ್ಟು ಸ್ವತಂತ್ರ ಶಬ್ದಗಳನ್ನೂ ಗುರುತಿಸಬಹುದು. ಕೋಲ್‌ಕ್ಕಳಿಯಂತಹ ಜಾನಪದ ನೃತ್ಯ ಪ್ರ‍್ರಕಾರದಲ್ಲಿ ಎಷ್ಟೋ ಮೂಲ ಬ್ಯಾರಿ ಶಬ್ದಗಳಿವೆ. ಒಂದು ಹಂತದಲ್ಲಿ ಕನ್ನಡ, ತುಳು ಸಹಿತ ಹಲವು ಭಾಷೆಗಳಿಂದ ಕಡ ಪಡೆದ ಶಬ್ದಗಳನ್ನು ಹೆಚ್ಚಾಗಿ ಬಳಸಿದ್ದಕ್ಕೆ ಬ್ಯಾರಿಗಳಲ್ಲಿ ಇದ್ದ ಕೀಳರಿಮೆಯೂ ಕಾರಣವಾಗಿದೆ. ಆದರೆ ಕಾಲಾನುಕ್ರಮದಲ್ಲಿ ವಿವಿಧ ಭಾಷೆಗಳ ಸಂಕರದಿAದ ಹುಟ್ಟಿದ ಹೊಸ ಶಬ್ದಗಳು ಬ್ಯಾರಿ ಭಾಷೆಯ ಅಸ್ತಿತ್ವವನ್ನು ಗಟ್ಟಿಗೊಳಿಸಿರುವುದೂ £ಜ. ಬ್ಯಾರಿ ಭಾಷೆಗೆ ಇಂತಹ ಧಾರಣಾಶಕ್ತಿ ಇಲ್ಲವಾಗಿದ್ದಲ್ಲಿ, ಶತಮಾನಗಳ ಕಾಲ ಲಿಖಿತ ಸಾಹಿತ್ಯದ ಬಲವಿಲ್ಲದೆ, ಕೇವಲ ಆಡುಮಾತಿ£ಂದಲೇ ಈ ಭಾಷೆ ಉಳಿದುಕೊಂಡು ಬರುವುದು ಸಾಧ್ಯವೂ ಇರಲಿಲ್ಲ.

ಹಲವು ಭಾಷೆಗಳ ಮೂಲಶಬ್ದಗಳು ಬ್ಯಾರಿ ಭಾಷೆಯಲ್ಲಿ ಸೇರಿಕೊಂಡಿರುವುದರಿAದ ಇದನ್ನೊಂದು ಮಿಶ್ರಭಾಷೆ ಎಂದು ಪರಿಗಣಿಸುವವರೂ ಇದ್ದಾರೆ. ಆದರೆ ಯಾವುದೇ ಭಾಷೆಯಾದರೂ ಬೆಳೆಯುತ್ತಾ ಹೋದಂತೆ ಬೇರೆ ಭಾಷೆಗಳಿಂದ ಶಬ್ದಗಳನ್ನು ಎರವಲು ಪಡೆಯುವುದು ಸಹಜ. ಬ್ಯಾರಿಗಳು ವ್ಯಾಪಾರಿಗಳಾಗಿ ದೇಶಾದ್ಯಂತ ಓಡಾಡುವುದರಿಂದ, ದೇಶ ವಿದೇಶಗಳನ್ನು ಸುತ್ತುವುದರಿಂದ ಈ ರೀತಿಯ ಶಬ್ದಸಂಕರಗಳು ಹೆಚ್ಚಾಗಿ ಕಾಣಿಸುತ್ತಿವೆ. ಇತ್ತೀಚೆಗಂತೂ ಕೊಲ್ಲಿ ದೇಶಗಳ ಒಡನಾಟ ಹೆಚ್ಚಾಗಿದ್ದು ಅರೆಬಿಕ್‌ನ ನೂರಾರು ಶಬ್ದಗಳು ಬ್ಯಾರಿ ಭಾಷೆಗೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಸೇರಿಕೊಳ್ಳುತ್ತಿವೆ. ಇಂಗ್ಲಿಷ್ ಭಾಷೆಯಲ್ಲೂ ಅದರ ಮೂಲ ಶಬ್ದಗಳಿರುವುದು ಶೇಕಡಾ ೧೫-೨೦ ರಷ್ಟು ಮಾತ್ರ. ಕನ್ನಡ- ಮಲಯಾಳಂಗಳಲ್ಲೂ ಅರ್ಧಕ್ಕಿಂತ ಹೆಚ್ಚು ಸಂಸ್ಕೃತ ಶಬ್ದಗಳಿವೆ. ಈ ಹಿನ್ನೆಲೆಯಲ್ಲಿ ಬ್ಯಾರಿ ಭಾಷೆಯನ್ನು ಅಥವಾ ಅದರ ಪುತ್ತೂರು, ಸುಳ್ಯ, ಕಾಸರಗೋಡುಗಳ ಪ್ರಾದೇಶಿಕ ವಿಭಿನ್ನತೆಯನ್ನು ಮಲೆಯಾಳದ ಉಪಭಾಷೆ ಎಂದು ವಾದಿಸಿದರೆ ಒಪ್ಪಲಾಗದು.

ಇತ್ತೀಚಿನ ವರ್ಷಗಳಲ್ಲಿ ಬ್ಯಾರಿ ಭಾಷೆಯ ಮೇಲೆ `ಪಾನ್ ಇಸ್ಲಾಮಿಕ್ ಚಳವಳಿ’ಯು ಪ್ರಭಾವ ಬೀರಲು ಯತ್ನಿಸುತ್ತಿದೆ. ಅರೇಬಿಯಾದ ಜತೆಗೆ ಬ್ಯಾರಿಗಳ ವ್ಯಾಪಾರ ವಹಿವಾಟುಗಳು ಹೆಚ್ಚಾದ ಬಳಿಕ ಈ ಪ್ರವೃತ್ತಿ ಕಂಡುಬರುತ್ತಿದೆ. ಶಬ್ದಗಳನ್ನು ಏಕರೂಪಕ್ಕೆ ತರುವುದು, ಸ್ಥಳೀಯ ಸಾಂಸ್ಕೃತಿಕ ಅಂಶಗಳನ್ನು ನಿರ್ಲಕ್ಷಿಸಿ ಒಂದೇ ರೀತಿಯ ಆಚರಣೆಗಳನ್ನು ರೂಢಿಸುವುದು, ಹಬ್ಬ, ಮದುವೆ ಮತ್ತಿತರ ಸಮಾರಂಭಗಳಲ್ಲಿ ಸ್ಥಳೀಯ ಆಚರಣೆಗಳನ್ನು ನಿರಾಕರಿಸುವುದು- ಈ ಹೊಸ ವಿದ್ಯಮಾನದ ಕಾರ್ಯಸೂಚಿಗಳಾಗಿವೆ. ಈ ಪ್ರವೃತ್ತಿ ಭಾಷೆಯ ಬಳಕೆಯ ಮೇಲೂ ಪ್ರಭಾವ ಬೀರುತ್ತಿದೆ. ಸ್ಥಳೀಯ ಆಚರಣೆಗಳ ಜತೆಗೆ ಸಂಬAಧ ಹೊಂದಿದ್ದ ಎಷ್ಟೋ ಶಬ್ದಗಳು ಇದರಿಂದ ಕಣ್ಮರೆಯಾಗುತ್ತಿವೆ. ಇನ್ನೊಂದೆಡೆ ಪ್ರಾದೇಶಿಕ ಭಿನ್ನತೆಗಳನ್ನು ಮರೆತು ಮಂಗಳೂರು ಕೇಂದ್ರಿತ ಬ್ಯಾರಿ ಭಾಷೆಯನ್ನೇ ಸಮುದಾಯದ ಮೇಲೆ ಹೇರುವ ಪ್ರಯತ್ನಗಳೂ ನಡೆದಿವೆ. ಲಿಖಿತ ಭಾಷಾ ಅಧ್ಯಯನದ ದೃಷ್ಟಿಯಿಂದ ಸ್ವಲ್ಪ ಮಟ್ಟಿಗೆ ಈ ಪ್ರಯತ್ನ ಅನಿವಾರ್ಯವಾದರೂ, ಸಾಹಿತ್ಯ ಪ್ರಕಾರಗಳಲ್ಲಿ ಪ್ರಾದೇಶಿಕ ವಿಭಿನ್ನತೆಯನ್ನೇ ಉಳಿಸಿ, ಬೆಳೆಸುವ ಮೂಲಕ ಈ ಸಂದಿಗ್ಧವನ್ನು ನಿವಾರಿಸುವ ಅಗತ್ಯವಿದೆ. ವಿಟ್ಲ, ಪುತ್ತೂರು, ಸುಳ್ಯ, ಮಂಜೇಶ್ವರ, ಕೋಡಿ- ಕುಂದಾಪುರ ಮುಂತಾದ ಕಡೆ ವಾಸಿಸುವ ಬ್ಯಾರಿಗಳ ವೃತ್ತಿ ಆಧಾರಿತ ಆಯಾ ಪ್ರದೇಶದ ಶಬ್ದಗಳನ್ನು, ವ್ಯಾಕರಣ ಶೈಲಿಯನ್ನು ಬಳಸಿ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಭಾಷೆಯ ವೈವಿಧ್ಯಗಳನ್ನು ಉಳಿಸುವ ಅಗತ್ಯವಿದೆ. ಈ ಪ್ರದೇಶಗಳಲ್ಲಿ ಎಷ್ಟೋ ಸ್ವತಂತ್ರ ಶಬ್ದಗಳು ಬಳಕೆಯಲ್ಲಿದ್ದು ಅವುಗಳು ಇತ್ತೀಚೆಗೆ ವೇಗವಾಗಿ ಕಣ್ಮರೆಯಾಗುತ್ತಿವೆ.

ಬ್ಯಾರಿ ಭಾಷೆಗೆ ಅದರದ್ದೇ ಆದ ಲಿಪಿ ಇತ್ತೆ ಎನ್ನುವುದು ಕುತೂಹಲಕರ ಅಂಶ. ಬಿ.ಎಂ.ಇಚ್ಲAಗೋಡು ಅವರ ಪ್ರಕಾರ, ಹಿರಿಯ ಬ್ಯಾರಿಗಳು ಬಟ್ಟೆ ಬರಹ ಎಂಬ ಲಿಪಿಯನ್ನು ಬಳಸುತ್ತಿದ್ದರು. “ಪ್ರಾದೇಶಿಕ ತುಳು ಲಿಪಿಯ ಮೂಲಲಿಪಿ ಬಟ್ಟೆಳುತ್ತು ಅಥವಾ ಬಟ್ಟೆಬರಹ. ಇದರಲ್ಲಿ ಮೂಲತಃ ೩೦ ಅಕ್ಷರಗಳಿದ್ದು ಕ್ರಿ.ಶ. ೯ನೇ ಶತಮಾನದಿಂದ ೧೨ನೇ ಶತಮಾನದವರೆಗೆ ಬಳಕೆಯಲ್ಲಿತ್ತು. ಇದೇ ಕ್ರಮೇಣ ಕೋಲೆಳುತ್ತು ಆಗಿ ಇಂದಿನ ಮಲೆಯಾಳ ಆಗಿದೆ” ಎಂದು ಇಚ್ಲಂಗೋಡು ಅವರು, ಭಾಷಾ ವಿಜ್ಞಾನಿ ಡಾ.ಸುಬ್ರಹ್ಮಣ್ಯಂ ಅವರನ್ನು ಉಲ್ಲೇಖಿಸುತ್ತಾರೆ. ೧೯೩೭ರಲ್ಲಿ ದಾಖಲಾದ ಬ್ಯಾರಿ ಹಿರಿಯರ ದಿನಚರಿ (ಡೈರಿ)ಯ ಹಲವು ಪುಟಗಳಲ್ಲಿ ದಾಖಲಾದ ಬಟ್ಟೆಬರಹಗಳನ್ನು ಇದಕ್ಕೆ ಸಾಕ್ಷö್ಯವಾಗಿ ಇಚ್ಲಂಗೋಡು ಅವರು ಮುಂದಿಡುತ್ತಾರೆ.

ಆದರೆ ಕನ್ನಡದ ಹಿರಿಯ ಬ್ಯಾರಿ ಲೇಖಕ ಫಕೀರ್ ಮಹಮ್ಮದ್ ಕಟ್ಪಾಡಿಯವರು ಈ ವಾದವನ್ನು ಅಲ್ಲಗಳೆಯುತ್ತಾರೆ. “ಈ ಬಟ್ಟೆಳುತ್ತು ಕಾಸರಗೋಡು ಸುತ್ತಮುತ್ತ ಮಾತ್ರ ಕಾಣಿಸುವಂತಹದ್ದು. ಅದು ಬ್ಯಾರಿ ಲಿಪಿ ಅಲ್ಲ. ಮಲಯಾಳಿಗಳು ಅರಬ್ಬೀ ಭಾಷೆಯ ಜತೆಗಿನ ಸಖ್ಯದಿಂದಾಗಿ ಸೃಷ್ಟಿಸಿದ ಪಾಟ್, ಸಬೀನ, ಕಿಸ್ಸಾ ಮುಂತಾದ ಅರಬ್ಬಿ ಮಲಯಾಳಂ ಸಾಹಿತ್ಯಕ್ಕೆ ಈ ಬಟ್ಟೆಳುತ್ತು ಬಳಕೆಯಾಗಿದೆ. ತುಳುವಿನ ಮೇಲೂ ಈ ಲಿಪಿಯ ಪ್ರಯೋಗವಾಗಿತ್ತು. ಈ ಲಿಪಿಯಲ್ಲಿರುವ ಅರೆಬಿಕ್ ಹರಫುಗಳು (ಒತ್ತಕ್ಷರಗಳು) ಇದನ್ನೇ ಪುಷ್ಟೀಕರಿಸುತ್ತವೆ. ಈ ಹಿಂದೆ ಇಸ್ಮ್ ಮುಂತಾದ ವಿದ್ಯೆಗಳಿಗೆ ಮೌಲ್ವಿಗಳು ಬಟ್ಟೆ, ತಗಡು, ಪಿಂಗಾಣಿ ಪಾತ್ರೆಗಳ ಮೇಲೆ ಈ ಬಟ್ಟೆ ಹರಫನ್ನು ಬಳಸುತ್ತಿದ್ದರು” ಎಂದು ಫಕೀರ್ ಮಹಮ್ಮದ್ ಕಟ್ಪಾಡಿ ವಾದಿಸುತ್ತಾರೆ. ಬಟ್ಟೆಬರಹ ಬ್ಯಾರಿ ಲಿಪಿಯೇ ಆಗಿತ್ತು ಎನ್ನುವುದನ್ನು ಬಲವಾಗಿ ಸಮರ್ಥಿಸುವ ಬಿ.ಎಂ.ಇಚ್ಲAಗೋಡು, “ಈ ನಿಟ್ಟಿನಲ್ಲಿ ಕಾಸರಗೋಡು, ಮಂಜೇಶ್ವರ ಮತ್ತು ಮಂಗಳೂರು ನೋಂದಣಿ ಕಛೇರಿಗಳ ಹಳೆಯ ದಾಖಲೆಗಳನ್ನು ಪರಿಶೀಲಿಸಿದರೆ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಗುರುತಿಸಬಹುದು” ಎಂದು ಅಭಿಪ್ರಾಯ ಪಡುತ್ತಾರೆ.೭ ಪ್ರತ್ಯೇಕ ಬ್ಯಾರಿ ಲಿಪಿ ಇತ್ತೇ ಎನ್ನುವ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವ ಅಗತ್ಯವಿದೆ. ಭಾಷೆಯ ಇತಿಹಾಸದ ಅಧ್ಯಯನಕ್ಕೆ ಅದು ಪೂರಕವಾಗುತ್ತದೆ. ಅದೇನೇ ಇದ್ದರೂ, ಪ್ರಸ್ತುತ ಕನ್ನಡ ಲಿಪಿಯನ್ನೇ ಬ್ಯಾರಿಗಳು ಪರಿಣಾಮಕಾರಿಯಾಗಿ ಬಳಸುತ್ತಿರುವುದರಿಂದ ಬ್ಯಾರಿ ಲಿಪಿ ಪ್ರಾಯೋಗಿಕವಾಗಿ ಕಾರ್ಯಸಾಧು ವಾಗುವುದಿಲ್ಲ ಎನ್ನುವುದು ಖಂಡಿತ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು' ರಚನೆಯ ಕಾರ್ಯ ನಡೆದಿದ್ದು ಈಗಾಗಲೇ ಸುಮಾರು ೩೦ ಸಾವಿರ ಬ್ಯಾರಿ ಶಬ್ದಗಳನ್ನು ಕಲೆಹಾಕಲಾಗಿದೆ. ಈ ನಿಘಂಟು ರಚನೆಯ ಹಂತದಲ್ಲಿ ಗಮನಿಸಿದ ಒಂದು ಅಂಶವೆAದರೆ, ಕಳೆದ ೧೦೦ ವರ್ಷಗಳ ಅವಧಿಯಲ್ಲಿ ಬ್ಯಾರಿ ಭಾಷೆಯ ನೂರಾರು ಸ್ವತಂತ್ರ ಶಬ್ದಗಳು ಬಳಕೆಯಲ್ಲಿಲ್ಲದೆ ಕಣ್ಮರೆಯಾಗಿವೆ ಎನ್ನುವುದು. ಈ ಕಣ್ಮರೆಯಾಗಿರುವ ಶಬ್ದಗಳನ್ನು ಮತ್ತೆ ಬಳಕೆಗೆ ತರುವುದೇ ಬ್ಯಾರಿ ಭಾಷೆಯ ಉತ್ಥಾನಕ್ಕೆ ನಾವು ಕೊಡಬಹುದಾದ ಅತಿದೊಡ್ಡ ಕಾಣಿಕೆ ಎನ್ನಬಹುದು. ಹಾಗೆಂದು ಬೇರೆ ಭಾಷೆಯಿಂದ ಬಂದು ಈಗಾಗಲೆ ಪೂರ್ತಿ ಬ್ಯಾರೀಕರಣಗೊಂಡಿರುವ ಶಬ್ದಗಳನ್ನು ತ್ಯಜಿಸಬೇಕು ಎಂದಲ್ಲ.ಕೀಳರಿಮೆಯ ಕಾಲಾವಧಿ’ಯಲ್ಲಿ ಕಳೆದುಕೊಂಡ ಅಥವಾ ಮರೆತೇಹೋದ ಶಬ್ದಗಳು ಮರುಜೀವ ಪಡೆದುಕೊಂಡರೆ, ಬ್ಯಾರಿ ಒಂದು ಸ್ವತಂತ್ರ ಭಾಷೆಯೇ ಆಗಿದೆ ಎನ್ನುವುದು ಸಮರ್ಥಿಸಲು ಇನ್ನಷ್ಟು ಆಕರಗಳು ಸಿಗಬಹುದು.

*೧ ಪ್ರೀಚಿಂಗ್ ಆಫ್ ಇಸ್ಲಾಂ- ಥಾಮಸ್ ಅರ್ನಾಲ್ಡ್ / ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ- ಗಣಪತಿರಾವ್ ಐಗಳ್

*೨ ಮುಸ್ಲಿಂಸ್ ಇನ್ ದಕ್ಷಿಣ ಕನ್ನಡ- ಡಾ.ವಹಾಬ್ ದೊಡ್ಡಮನೆ

*೩ ಪ್ರವಾಸಿ ಕಂಡ ಇಂಡಿಯಾ – ಎಚ್.ಎಲ್.ನಾಗೇಗೌಡ

*೪ ಪೆರಿಮೆ ಸಂಶೋಧನಾ ಗ್ರಂಥ- ಬ್ಯಾರಿಗಳು ಮತ್ತು ಬ್ಯಾರಿ ಭಾಷೆ ಒಂದು ಸಮೀಕ್ಷೆ- ಬಿ.ಎಂ.ಇಚ್ಲAಗೋಡು

*೫ ಬ್ಯಾರಿ ಭಾಷೆ ಮತ್ತು ಮೋಯ ಭಾಷೆ- ಪೆರಿಮೆ ಸಂಶೋಧನಾ ಗ್ರಂಥ- ಡಾ.ಅಮೃತ ಸೋಮೇಶ್ವರ

*೬ ಬ್ಯಾರಿ ಭಾಷೆ ದ್ರಾವಿಡ ಭಾಷಾ ವೃಕ್ಷದ ಒಂದು ಶಾಖೆ – ಪೆರಿಮೆ ಸಂಶೋಧನಾ ಗ್ರಂಥ- ಡಾ.ಯು.ಪಿ.ಉಪಾಧ್ಯಾಯ

*೭ ಪೆರಿಮೆ ಸಂಶೋಧನಾ ಗ್ರಂಥ – ಪ್ರಕಾಶಕರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ.

Scroll to Top