ಬ್ಯಾರಿ ಸಮಾಜ – ಅಂತರ್ ಸಾಂಸ್ಕೃತಿಕ ಸಂಬಂಧ
ಮುಹಮ್ಮದ್ ಕುಳಾಯಿ
ನನ್ನ ಬಾಲ್ಯದ ದಿನಗಳು ನೆನಪಾದಾಗಲೆಲ್ಲ ನನ್ನನ್ನು ಹೆಚ್ಚು ಕಾಡುವುದು ನಮ್ಮ ಮನೆಯ ಹಿತ್ತಲಲ್ಲಿದ್ದ ಅಂಬಟೆಕಾಯಿ ಮರ. ಆ ಮರದ ಬುಡ ನಮ್ಮ ಹಿತ್ತಲಲ್ಲಿದ್ದರೂ ಅದರ ಹೆಚ್ಚಿನ ಕೊಂಬೆಗಳು ಹರಡಿಕೊಂಡಿದ್ದುದು ನೆರೆಯ ಸೇಸಜ್ಜಿಯ ಹಿತ್ತಲಲ್ಲಿ. ಸೇಸಜ್ಜಿಗೆ ಆಗ ಸುಮಾರು ೬೦-೬೫ರ ಪ್ರಾಯವಿರಬಹುದು. ಇವರ ಮನೆ ತುಂಬಾ ಮದುವೆ ಪ್ರಾಯಕ್ಕೆ ಬೆಳೆದು ನಿಂತ ಹೆಣ್ಣುಮಕ್ಕಳು. ಬೀಡಿ ಕಟ್ಟಿಯೇ ಜೀವನ ಸಾಗಿಸುತ್ತಿದ್ದ ಆ ಮನೆಯಲ್ಲಿ ಗಂಡಸರಿದ್ದದ್ದು ನನಗೆ ನೆನಪಿಲ್ಲ. ಬೆಳಗೆದ್ದು ಸ್ವಲ್ಪ ಬೆನ್ನು ಬಾಗಿಸಿಕೊಂಡೇ ನೆರೆಮನೆಗಳಿಗೆಲ್ಲಾ ಸುತ್ತಾಡುತ್ತಿದ್ದ ಈ ಅಜ್ಜಿ ಹೆಚ್ಚು ಸಮಯ ಕಳೆಯುತ್ತಿದ್ದುದು ನಮ್ಮ ಮನೆಯಲ್ಲಿ. ಅಕ್ಕಿ ಹೇರಿ ಕೊಡುವುದು, ಮೀನು ಮಾಡಿ ಕೊಡುವುದು, ಅಂಗಳ ಗುಡಿಸುವುದು, ನೀರು ಕಾಯಿಸುವುದು… ಹೀಗೆ ತಾಯಿಗೆ ಸಹಾಯ ಮಾಡುತ್ತಿದ್ದ ಅವರು ಎಂದೂ ನಮಗೆ ಅನ್ಯರೆಂದು ಅನ್ನಿಸುತ್ತಲೇ ಇರಲಿಲ್ಲ. ಅವರು ಮಾತ್ರವಲ್ಲ ಅವರ ಮನೆಯವರೆಲ್ಲರೂ ನಮ್ಮ ಕುಟುಂಬದ ಸದಸ್ಯರಂತೆಯೇ ಬದುಕುತ್ತಿದ್ದವರು. ಈ ಅಜ್ಜಿ ಮಾಡಿದ ಕೆಲಸಕ್ಕೆಂದೂ ಪ್ರತಿಫಲ ಅಪೇಕ್ಷಿಸಿದವರಲ್ಲ.
ವರ್ಷಕ್ಕೊಮ್ಮೆ ಈ ಮರ ತುಂಬಾ ಬಿಡುವ ಕಾಯಿ ಬೇರೆ ಅಂಬಟೆಯAತೆ ಹುಳಿಯೇ ಇಲ್ಲ. ಈ ಮರದಲ್ಲಿ ಕಾಯಿ ಬಿಟ್ಟಿತೆಂದರೆ ಈ ಅಜ್ಜಿಗೆ ಎಲ್ಲಿಲ್ಲದ ಸಂತಸ. ಅವರು ಅದರ ಕಾಯಿಗಳನ್ನು ಯಾರೂ ಕೊಯ್ಯದಂತೆ ಕಾಯುತ್ತಿದ್ದರು. ಅವರ ಕಣ್ಣು ತಪ್ಪಿಸಿ ನಾವೇನಾದರೂ ಕೊಯ್ದು ಬಿಡುತ್ತೇವೋ ಎಂಬ ಅನುಮಾನದಿಂದ ಆ ಮರದಲ್ಲಿ ಭೂತ ಇದೆ, ಕೊಲ್ಲಿದೈವ ಇದೆ ಎಂದು ಕತೆ ಕಟ್ಟಿ ನಮ್ಮನ್ನು ಬೆದರಿಸುತ್ತಿದ್ದರು. ಹಾಗಾಗಿ ಕಾಯಿ ತುಂಬಿ ತುಳುಕುತ್ತಿದ್ದರೂ ನಾವ್ಯಾರೂ ಅದರ ತಂಟೆಗೆ ಹೋಗುತ್ತಿರಲಿಲ್ಲ. ಕಾಯಿ ಬಲಿತು ಹಣ್ಣಾಗುವವರೆಗೂ ಅಜ್ಜಿ ಅದನ್ನು ಜತನದಿಂದ ಕಾಯುತ್ತಿದ್ದರು. ಆನಂತರ ಯಾರನ್ನಾದರೂ ಕರೆಸಿ ಕೊಯಿಸುತ್ತಿದ್ದರು. ಹಣ್ಣಾದ ಆ ಅಂಬಟೆಕಾಯಿಯ ರುಚಿ ನೆನೆದರೇನೇ ಈಗಲೂ ಬಾಯಲ್ಲಿ ನೀರೂರುತ್ತೆ. ಸಿಹಿ, ಹುಳಿ, ಒಗರು ಮಿಶ್ರಿತ, ಒಂದು ತಿಂದರೆ ಇನ್ನಷ್ಟು ತಿನ್ನಬೇಕು ಅನ್ನುವಂತಹಾ ಒಂಥರಾ ರುಚಿ. ಕೊಯ್ದ ಅಂಬಟೆ ಹಣ್ಣುಗಳಲ್ಲಿ ಅರ್ಧದಷ್ಟನ್ನು ಬುಟ್ಟಿಯಲ್ಲಿ ತುಂಬಿಸಿಕೊAಡು ನೆರೆಯ ಸುಮಾರು ೧೦-೧೫ ಬ್ಯಾರಿಗಳ, ತುಳುವರ ಮನೆಗಳಿಗೆಲ್ಲ÷ಹಂಚಿ ಬರುತ್ತಿದ್ದ ಅಜ್ಜಿ, ಮಿಕ್ಕಿದ್ದನ್ನು ತನ್ನ ಮನೆಗೆ ಕೊಂಡು ಹೋಗಿ ದೊಡ್ಡ ಹಂಡೆಯಲ್ಲಿ ‘ಉಪ್ಪು ನೀರು’ ಹಾಕುತ್ತಿದ್ದರು. ಹೀಗೆ ಅವರು ತನ್ನ ಮನೆಯಲ್ಲಿ ಮಾಡಿದ ಉಪ್ಪು ನೀರನ್ನು ನೆರೆಯ ಎಲ್ಲರ ಮನೆಗಳಿಗೂ ಹಂಚುತ್ತಿದ್ದರು. ಕೆಲವು ಮನೆಯವರು ಅದನ್ನು ಮಳೆಗಾಲಕ್ಕೆಂದು ತೆಗೆದಿಡುತ್ತಿದ್ದರು. ವರ್ಷವಿಟ್ಟರೂ ಅದು ಹಾಳಾಗುತ್ತಿರಲಿಲ್ಲ. ಹಳತಾದಷ್ಟು ಅದರ ರುಚಿ ಹೆಚ್ಚಾಗುತ್ತಿತ್ತು. ಹಾಗೆಯೇ ಅವರು ಮಾಡುವ ಹಲಸಿನ ಹಣ್ಣಿನ ಸಿಪ್ಪೆ, ಮಾವಿನ ಹಣ್ಣಿನ ಉಪ್ಪು ನೀರು ಕೂಡಾ ಅಷ್ಟೇ ರುಚಿಯಾಗಿರುತ್ತಿತ್ತು.
ನಮ್ಮ ಮನೆಯಲ್ಲಿ ಕರೆಯುವ ಹಸುಗಳಿದ್ದವು. ಆಡುಗಳಿದ್ದವು. ನೆರೆಮನೆಯ ಅಕ್ಕಿ ತೊಳೆದ ಅಕ್ಕಚ್ಚು, ಅನ್ನ ಬಸಿದ ನೀರನ್ನು ಅವರೇ ಹೊತ್ತು ತಂದು ನಮ್ಮ ಹಸುಗಳಿಗೆ ಕುಡಿಸುತ್ತಿದ್ದರು. ಅವರ ಕೋಳಿ ನಮ್ಮ ಮನೆಯಲ್ಲಿ ಮೊಟ್ಟೆ ಇಡುತ್ತಿದ್ದವು. ನಮ್ಮ ಕೊಟ್ಟಿಗೆಯಲ್ಲಿ ಕೇರೆ ಹಾವುಗಳ ಹಾವಳಿ ಇದ್ದ ಕಾರಣ ಮರಿ ಮಾಡಲು ಬುಟ್ಟಿಯಲ್ಲಿ ಮೊಟ್ಟೆಗಳನ್ನಿಟ್ಟು ಅದರ ಮೇಲೆ ಕೋಳಿಯನ್ನು ಕಾವು ಕೊಡಲು ಕುಳ್ಳಿರಿಸಿ ಪಕ್ಕದ ತುಳುವರ ಮನೆಯಲ್ಲಿ ತೂಗು ಹಾಕಿ ಬರುತ್ತಿದ್ದೆವು. ಮೊಟ್ಟೆ ಮರಿಗಳಾಗಿ ದೊಡ್ಡದಾಗುವವರೆಗೂ ಆ ಮನೆಯ ಮೇಲ್ವಿಚಾರಣೆಯಲ್ಲೆ ಬೆಳೆಯುತ್ತಿದ್ದವು. ಇಲ್ಲಿ ಇದು ನಮ್ಮದು, ಅದು ನಿಮ್ಮದು ಎಂಬ ಸ್ವಾರ್ಥ, ಜಾತಿ, ಮತ ಯಾವುದೂ ಅಡ್ಡ ಬರುತ್ತಿರಲಿಲ್ಲ. ಇಲ್ಲಿ ನೆರೆಹೊರೆಯ ಆಂತರಿಕ ಸಂಬAಧಗಳು ತಾಯಿ-ತಂದೆ-ಮಕ್ಕಳು—ಅಣ್ಣ-ತಮ್ಮAದಿರಷ್ಟೇ ಪವಿತ್ರವಾಗಿದ್ದವು, ಗಟ್ಟಿಯಾಗಿದ್ದವು.
ಅಂದಿನ ತುಳು ಮತ್ತು ಬ್ಯಾರಿಗಳ ಸಂಸ್ಕೃತಿ ಸಂಪ್ರದಾಯಗಳಲ್ಲಿ ಬಹಳಷ್ಟು ಸಾಮ್ಯತೆಯನ್ನು ಕಾಣಬಹುದಿತ್ತು. ಮಸೀದಿ, ದರ್ಗಾ, ಭೂತಸ್ಥಾನಗಳಿಗೆ ಹರಕೆ ಕೊಡುವುದು, ಸೀಮಂತ, ಮಗುವಿಗೆ ತೊಟ್ಟಿಲು ಹಾಕುವುದು, ಮಗುವಿನ ತಲೆಕೂದಲು (ಕಜಂಬು) ತೆಗೆಯುವುದು, ಮರಣ ಹೊಂದಿದವರ ೭ನೇ ದಿನ-೪೦ನೇ ದಿನ ಆಚರಿಸುವುದು, ಮದುವೆ-ಮುಂಜಿ ಸಂದರ್ಭಗಳಲ್ಲಿ ಬ್ಯಾಂಡ್, ಗರ್ನಲ್, ತಾಲೀಮ್‌ನಲ್ಲಿ ಮೆರವಣಿಗೆ ಹೋಗುವುದು, ಹೊಸ ಅಕ್ಕಿ (ಪುದ್ದಾರ್) ಉಣ್ಣುವುದು – ಇಂತಹ ಹಲವಾರು ಸಂಪ್ರದಾಯಗಳನ್ನು ತುಳುವರೂ ಬ್ಯಾರಿಗಳೂ ಆಚರಿಸುತ್ತಿದ್ದುದು ನನಗೆ ನೆನಪಿದೆ. ನಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ನೆರೆಯ ತುಳುವರ ಮನೆಯಿಂದ ಕೆಲವು ತಿಂಗಳ ಮಟ್ಟಿಗೆ ಮರದ ತೊಟ್ಟಿಲು ತಂದದ್ದು, ಅವರು ತೊಟ್ಟಿಲನ್ನು ಕೊಡುವಾಗ ಅದರಲ್ಲಿ ಹಣ್ಣು ಹಂಪಲು, ಎಲೆ ಅಡಿಕೆ, ಅಕ್ಕಿಯನ್ನು ಇಟ್ಟು ಅವರ ಮನೆಯ ಕೆಲಸದಾಳು ಒಬ್ಬರಲ್ಲಿ ಹೊರಿಸಿ ಗೌರವಪೂರ್ವಕವಾಗಿ ನಮ್ಮ ಮನೆಗೆ ತಲುಪಿಸಿದ್ದು, ಆ ತೊಟ್ಟಿಲನ್ನು ಹಿಂದಿರುಗಿಸುವಾಗ ನಮ್ಮ ತಂದೆಯವರು ಹಣ್ಣು, ಕಾಯಿ, ಅಕ್ಕಿಯ ಒಂದು ಹೊರೆ ಕಾಣಿಕೆಯನ್ನೇ ಅವರಿಗೆ ತಲುಪಿಸಿದ್ದು ಈಗಲೂ ನನಗೆ ನೆನಪಿದೆ. ತೊಟ್ಟಿಲು ಖಾಲಿ ಇರಬಾರದು, ಊರಿನ ಯಾರ ಮನೆಯ ಮಕ್ಕಳಾದರೂ ಅದರಲ್ಲಿ ಮಲಗುತ್ತಿರಬೇಕು-ಬೆಳೆಯುತ್ತಿರಬೇಕು. ಇದರಿಂದ ತೊಟ್ಟಿಲಿದ್ದವರ ಮನೆ ತುಂಬಾ ಮಕ್ಕಳಾಗುತ್ತೆ, ಸುಖ ಸಮೃದ್ಧಿ ಉಂಟಾಗುತ್ತೆ ಎಂಬ ನಂಬಿಕೆ ಅಂದಿನ ತುಳು ಮತ್ತು ಬ್ಯಾರಿಗಳದ್ದು. ಗರ್ಭಿಣಿಯೊಬ್ಬಳು ಗಂಡನ ಮನೆಯಲ್ಲಿ ಸೀಮಂತವಾಗಿ ತವರು ಮನೆಗೆ ಹೊರಟು ನಿಂತಾಗ ಜಾತಿ, ಧರ್ಮಗಳ ಭೇದ ಇಲ್ಲದೆ, ನೆರೆಮನೆಯ ಎಲ್ಲ ಹೆಂಗಸರೂ ಹರಸಿ, ಹರಕೆ ಹೊತ್ತು ಕಣ್ಣೀರಿಡುತ್ತಾ ಕಳುಹಿಸಿ ಕೊಡುತ್ತಿದ್ದ ದೃಶ್ಯ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹೊಸ ಅಕ್ಕಿ ಉಣ್ಣುವ ದಿನ ತುಳು-ಬ್ಯಾರಿಗಳ ಮನೆಗಳಲ್ಲಿ ಒಂದೇ ತರದ ಅಡುಗೆಗಳು, ಸಂಪ್ರದಾಯಗಳು ಇರುತ್ತಿದ್ದವು.
ನಮ್ಮ ಊರ ಸುತ್ತ ಮೂರು ದೇವಸ್ಥಾನಗಳಿವೆ. ಈ ಮೂರು ದೇವಸ್ಥಾನಗಳಲ್ಲಿ ನಡೆಯುವ ವರ್ಷಾವಧಿ ಜಾತ್ರೆಗಳಿಗೂ ನಮ್ಮ ತಂದೆ-ಮಾವನವರು ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದರು. ಆಗ ಅದು ಇಡೀ ಊರಿನ ನಾಡ ಹಬ್ಬವಾಗಿತ್ತು. ಈ ನಾಡಹಬ್ಬದಲ್ಲಿ ಎಲ್ಲ ಜಾತಿ ಧರ್ಮದವರು ಭಾಗವಹಿಸುತ್ತಿದ್ದರು, ಸಂಭ್ರಮ ಪಡುತ್ತಿದ್ದರು. ಈ ಜಾತ್ರೆಗಳಲ್ಲಿ ದೇವಸ್ಥಾನದ ಸುತ್ತಲ ಗದ್ದೆಗಳೆಲ್ಲ ಸಂತೆಯಿAದ ತುಂಬಿರುತ್ತಿತ್ತು. ಖರ್ಜೂರದಿಂದ ಹಿಡಿದು ಗೋಳಿ ಸೋಡದವರೆಗೆ, ಸೂಜಿಯಿಂದ ಹಿಡಿದು ಮಕ್ಕಳ ಆಟದ ಸಾಮಾನುಗಳವರೆಗೆ, ಅಡುಗೆ ಮನೆಯ ಹಗ್ಗದ ಉರಿಯಿಂದ ಹಿಡಿದು ಗದ್ದೆ ಉಳುವ ನೇಗಿಲವರೆಗೆ ಎಲ್ಲವೂ ಈ ಸಂತೆಗಳಲ್ಲಿ ಸಿಗುತ್ತಿತ್ತು. ವರ್ಷಕ್ಕೆ ಬೇಕಾಗುವ ಪಾತ್ರೆ, ಕೃಷಿ ಸಾಮಗ್ರಿ, ಬಟ್ಟೆ ಬರೆಗಳನ್ನೆಲ್ಲ ಈ ಜಾತ್ರೆಗಳಲ್ಲಿ ಖರೀದಿಸಲಾಗುತ್ತಿತ್ತು. ಮಕ್ಕಳ ಪಾಲಿಗಂತೂ ಈ ಜಾತ್ರೆಗಳು ಹಬ್ಬಗಳಂತೆ ಖುಷಿ ಕೊಡುವ ದಿನಗಳಾಗಿತ್ತು. ಹತ್ತು ವರ್ಷಗಳ ಹಿಂದಿನವರೆಗೂ ನಾನು ಕುಳಾಯಿಯ ದೇವಸ್ಥಾನದ ಜಾತ್ರೆಯಲ್ಲಿ ಕುಟುಂಬ ಸಮೇತವಾಗಿ ಪಾಲ್ಗೊಳ್ಳುತ್ತಿದ್ದೆ. ನನ್ನ ತಂದೆಗೆ ಕುಳಾಯಿಯಲ್ಲಿ ದಿನಸಿ ಅಂಗಡಿ ಇತ್ತು. ಅಂಗಡಿಯಲ್ಲಿ ಉಳ್ಳಾಲ ದರ್ಗಾ, ಮಂಗಳೂರಿನ ಬಂದರಿನ ಅತ್ತಾಸ್‌ಕೋಯ ದರ್ಗಾ, ಮಸೀದಿ, ದೇವಸ್ಥಾನಗಳ ಹರಕೆ ಡಬ್ಬಿಗಳಿರುತ್ತಿದ್ದವು. ತಂದೆಯವರು ಪ್ರತೀ ಗುರುವಾರ ರಾತ್ರಿಗಳಲ್ಲಿ ಎಲ್ಲಾ ಡಬ್ಬಿಗಳಿಗೂ ಸಮಾನವಾಗಿ ಹಣ ಹಾಕುತ್ತಿದ್ದರು. ಜಾತ್ರೆ, ಉರೂಸು, ಮೌಲೂದು ಸಂದರ್ಭಗಳಲ್ಲಿ ಹಣ ತುಂಬಿದ ಆ ಡಬ್ಬಗಳನ್ನು ಆಯಾ ಕ್ಷೇತ್ರಗಳಿಗೆ ಹಿಂದಿರುಗಿಸಿ ಹೊಸ ಖಾಲಿ ಡಬ್ಬಿಗಳನ್ನು ತಂದು ಅಂಗಡಿಯಲ್ಲಿಡುತ್ತಿದ್ದದು ನನಗೆ ಈಗಲೂ ನೆನಪಿದೆ. ನನ್ನ ಅಜ್ಜನಿಗ ಬೈಕಂಪಾಡಿಯಲ್ಲಿ ಹಲವಾರು ಎಕರೆ ಗದ್ದೆ ಇತ್ತು. ಜಾತ್ರೆಗಳ ಸಮಯದಲ್ಲಿ ಅವರು ಊರ ದೇವಸ್ಥಾನಕ್ಕೆ ಹೊರೆಕಾಣಿಕೆ ಕಳುಹಿಸುತ್ತಿದ್ದುದು, ದರ್ಗಾಗಳ ಆಡಳಿತ ಸಮಿತಿಗಳಲ್ಲಿ ತುಳುವರು ಅದರಲ್ಲೂ ಬಂಟರು ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆÀ ಸಲ್ಲಿಸುತ್ತಿದ್ದುದು ಹಳೆ ತಲೆಮಾರುಗಳ ಜನರು ಈಗಲೂ ನೆನಪಿಸುತ್ತಿದ್ದಾರೆ. ತುಳುವರು ಮಸೀದಿ, ದರ್ಗಾಗಳಿಗೆ ಎಣ್ಣೆ ಕೊಡುತ್ತಿದ್ದುದು, ಗಿಡದಲ್ಲಿ ಆದ ಮೊದಲ ಹಣ್ಣು, ಮೊದಲ ಕಾಯಿ, ಮೊದಲ ಭತ್ತವನ್ನು ಮಸೀದಿ, ದರ್ಗಾಗಳಿಗೆ ಕೊಡುತ್ತಿದ್ದುದು, ಅಲ್ಲಿ ಅವರ ಹೆಸರು ಹೇಳಿ ಏಲಂ ಹಾಕುತ್ತಿದ್ದುದು ಈಗಲೂ ನನಗೆ ನೆನಪಿದೆ.
ಭೂತ ಕೋಲದಲ್ಲಿ ತುಳುವರ ಸಾಂಸ್ಕೃತಿಕ ಭೂತ ನರ್ತನ ನನಗೆ ಬಹಳ ಇಷ್ಟವಾದ ಪ್ರಕಾರ. ನಾನು ಚಿಕ್ಕವನಿದ್ದಾಗ ಹಲವಾರು ಭೂತಕೋಲಗಳಿಗೆ ಗೆಳೆಯರ ಜೊತೆ ಹೋಗಿದ್ದಿದೆ. ಬೆಳಗಿನವರೆಗೂ ಇದ್ದು ನರ್ತನವನ್ನು ನೋಡಿ ಖುಷಿ ಪಟ್ಟದ್ದಿದೆ. ಬ್ಯಾರಿಗಳು ಯಾವ ಸಂಕೋಚವೂ ಇಲ್ಲದೆ, ಜಾತಿ, ಧರ್ಮ, ನಂಬಿಕೆಗಳ ಸೋಂಕೂ ಇಲ್ಲದೆ ಈ ಕೋಲಗಳಲ್ಲಿ ಭಾಗವಹಿಸಿದ್ದನ್ನು ನಾನು ಕಂಡಿದ್ದೇನೆ. ಜಾತ್ರೆಗಳಲ್ಲಿದ್ದಂತೆ ಇಲ್ಲಿಯೂ ಸಂತೆಗಳಿರುತ್ತಿದ್ದವು. ಸಂತೆಗಳಲ್ಲಿ ಹೆಚ್ಚಿನ ವ್ಯಾಪಾರಿಗಳು ಬ್ಯಾರಿಗಳಾಗಿರುತ್ತಿದ್ದರು. ಈಗಿನಂತೆ ವಿದ್ಯುದ್ವೀಪಗಳಿಲ್ಲದೆ, ಬರೀ ದೊಂದಿ (ಕಂದೀಲು) ಯ ಮಂದ ಬೆಳಕಿನಲ್ಲಿ ನಡೆಯುತ್ತಿದ್ದ ಭೂತ ನರ್ತನದ ಆ ಗಾಂಭೀರ್ಯ ಈಗ ಉಳಿದಿಲ್ಲ ಎಂದೇ ಹೇಳಬೇಕು. ಈ ಕೋಲಗಳಿಗೂ ಸಂತೆಯ ಬ್ಯಾರಿ ವ್ಯಾಪಾರಿಗಳು ದೇಣಿಗೆ ನೀಡುತ್ತಿದ್ದುದು, ಭೂತ ನರ್ತನದಲ್ಲಿ ಪಾತ್ರಿ ಅವರಿಗೆ ಅಭಯ ನೀಡುತ್ತಿದ್ದುದು ನೆನಪಿದೆ. ಹಲವಾರು ವರ್ಷ ಗಳ ನಂತರ ಅಂದರೆ ಈ ಲೇಖನ ಬರೆಯುವುದಕ್ಕಿಂತ ಸುಮಾರು ೧೦ ತಿಂಗಳ ಹಿಂದೆ ಉಡುಪಿ ಸಮೀಪದ ಕಾಪುವಿನ ಬಾವುಗುತ್ತುನಲ್ಲಿ ನಡೆದ ಬಬ್ಬರ್ಯ ಕೋಲದಲ್ಲಿ ನಾನು ಭಾಗವಹಿಸಿದ್ದೆ. ಬಾವುಗುತ್ತು ದುಬೈಯ ಉದ್ಯಮಿ ಡಾ.ಬಿ.ಆರ್ ಶೆಟ್ಟಿಯವರು ಮೂಲ ಮನೆ. ಬಿ.ಆರ್ ಶೆಟ್ಟಿಯವರ ಹಿರಿಯ ಸಹೋದರ ಬಿ.ಎಸ್ ಶೆಟ್ಟಿಯವರು ನನಗೆ ಬಹಳ ಆತ್ಮೀಯರು. ಅವರ ಒತ್ತಾಯದ ಮೇರೆಗೆ ನಾನು ಈ ಕೋಲಕ್ಕೆ ಹೋಗಿದ್ದೆ. ರಸ್ತೆಯುದ್ದಕ್ಕೂ ವಿದ್ಯುದ್ವೀಪಗಳ ಅಲಂಕಾರ, ಪೆಟ್ರೊಮೆಕ್ಸ್ಗಳ ಬೆಳಕು ಬಿಟ್ಟರೆ ಮತ್ತೆಲ್ಲಾ ಅದೇ ಹಳೆಯ ರೀತಿಯಿಂದ ಕೂಡಿತ್ತು. ತಾಲೀಮು, ಡೋಲು, ಗರ್ನಲ್, ಭಂಡಾರದ ಬೃಹತ್ ಮೆರವಣಿಗೆ ನನಗೆ ಬಹಳ ಖುಷಿಕೊಟ್ಟಿತು. ಸುಮಾರು ೫ ಸಾವಿರಕ್ಕೂ ಅಧಿಕ ಜನರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಕೋಲ ಎಷ್ಟೊಂದು ವಿಜೃಂಭಣೆ, ಗಾಂಭೀರ್ಯದಿAದ ಕೂಡಿತ್ತೆಂದರೆ ನನಗೆ ನನ್ನ ಬಾಲ್ಯ ನೆನಪಿಸುವಂತೆ ಮಾಡಿತ್ತು. ಇಲ್ಲಿ ಇನ್ನೂ ಒಂದು ವಿಶೇಷ ಎಂದರೆ ಈ ಕೋಲದ ಮುಖ್ಯ ವಾದ್ಯ ನುಡಿಸುವವ ಒಬ್ಬ ಮುಸ್ಲಿಂ ಆಗಿದ್ದರು. ಅವರ ಹೆಸರು ಜಲೀಲ್. ಅವರು ಉಡುಪಿ ಜಿಲ್ಲೆಯ ಮಲ್ಲಾರ್‌ನವರು. ಸಾಂಸ್ಕೃತಿಕ ಅಂತರ್ ಸಂಬAಧಕ್ಕೆ ಇದೊಂದು ಉತ್ತಮ ಉದಾಹರಣೆ.
ಕೋಲದಂತೆ ತುಳುನಾಡಿನ ಸಾಂಸ್ಕೃತಿಕ ಪ್ರಕಾರಗಳಲ್ಲಿ ನನಗಿಷ್ಟವಾದ ಇನ್ನೊಂದು ಕಲೆ ಯಕ್ಷಗಾನ ಬಯಲಾಟ. ಈ ಕಲೆಯನ್ನು ನಾನು ಸುಮಾರು ೫-೬ನೇ ಕ್ಲಾಸಿನಲ್ಲಿರುವಾಗ ಪ್ರಥಮ ಬಾರಿಗೆ ನೋಡಿದ ನೆನಪು. ನಮ್ಮ ಶಾಲೆಯಲ್ಲಿ ನಮಗೆ ರಾಮರಾವ್ ಎಂಬ ಮೇಷ್ಟುç ಇದ್ದರು. ಅವರು ಬ್ರಾಹ್ಮಣರು. ಕುಳಾಯಿಯ ಹೊಸಬೆಟ್ಟುವಿನಲ್ಲಿ ಅವರ ಮನೆ ಇತ್ತು. ಶಾಲಾ ದಿನಗಳಲ್ಲಿಯೂ, ವಿದ್ಯಾಭ್ಯಾಸ ಮುಗಿಸಿದ ನಂತರವೂ ನಾನು ಅವರ ಮನೆಗೆ ಭೇಟಿ ನೀಡುತ್ತಿದ್ದೆ. ಅವರೆಂದೂ ಜಾತಿ, ಧರ್ಮ ನೋಡಿದವರಲ್ಲ. ತನ್ನ ವಿದ್ಯಾರ್ಥಿಗಳೆಂದರೆ ಅವರಿಗೆ ಪಂಚಪ್ರಾಣ. ಅವರೊಮ್ಮೆ ತನ್ನ ತರಗತಿಯ ಕೆಲವು ವಿದ್ಯಾರ್ಥಿಗಳನ್ನು ತಮ್ಮ ಬಂಧುವೊಬ್ಬರ ಮನೆಗೆ (ಮುಂಡ್ಕೂರು ಅಥವಾ ವೇಣೂರು ಎಂದು ನೆನಪು) ಕರೆದುಕೊಂಡು ಹೋಗಿದ್ದರು. ಅದು ಅವರ ಶ್ರೀಮತಿಯವರ ತವರು ಮನೆ ಅಥವಾ ಬಂಧುಗಳ ಮನೆ ಎಂದು ಹೇಳಿದ್ದು ನೆನಪು. ಎರಡು ದಿನ ಆ ಮನೆಯಲ್ಲಿಯೇ ಉಳಿದುಕೊಂಡಿದ್ದ ನಮಗೆ ರುಚಿಕರವಾದ ಊಟ, ತಿಂಡಿಗಳನ್ನು ಆ ಮನೆಯಲ್ಲೇ ಕೊಡಿಸಿದ್ದರು. ಇದಲ್ಲದೆ ಸಾವಿರ ಕಂಬದ ಬಸದಿ ಸಹಿತ ಹಲವಾರು ಕಡೆ ನಮ್ಮನ್ನು ಕರೆದೊಯ್ದಿದ್ದರು. ಒಂದು ದಿನ ರಾತ್ರಿ ನಾವು ಉಳಿದುಕೊಂಡಿದ್ದ ಆ ಮನೆಯ ಪಕ್ಕ ಯಕ್ಷಗಾನ ಬಯಲಾಟವಿತ್ತು. ಬಯಲಾಟದ ಹೆಸರು ‘ವೀರ ಅಭಿಮನ್ಯು ಕಾಳಗ’ ಎಂದು ನೆನಪು. ಈ ಯಕ್ಷಗಾನದಲ್ಲಿ ವೀರ ಅಭಿಮನ್ಯುವಿನ ಪಾತ್ರವನ್ನು ನಮ್ಮ ಮೇಷ್ಟುç ರಾಮರಾವ್ ಅವರು ನಿರ್ವಹಿಸಿದ್ದರು. ಬೆಳಗಿನ ತನಕವೂ ಕುಳಿತು ನಾವು ಆ ಯಕ್ಷಗಾನವನ್ನು ನೋಡಿದ್ದೆವು. ಅಂದಿನಿAದ ನನಗೆ ಯಕ್ಷಗಾನದ ಗೀಳು ಹಚ್ಚಿಕೊಂಡಿತ್ತು. ಅನಂತರ ನಾನು ನನ್ನ ಮನೆಯ ಸುತ್ತಮುತ್ತ ಎಲ್ಲಿ ಬಯಲಾಟ ನಡೆಯುತ್ತಿದ್ದರೂ ರಾತ್ರಿ ಎಲ್ಲ ಮಲಗಿದ ಮೇಲೆ ಮನೆಯವರ ಕಣ್ಣು ತಪ್ಪಿಸಿ ಹೋಗುತ್ತಿದ್ದೆ. ಅಗೋಲಿ ಮಂಜಣ್ಣ, ಕೃಷ್ಣಲೀಲೆ ಕಂಸ ವಧೆ, ಶ್ರೀ ದೇವಿ ಮಹಾತ್ಮೆ ಮುಂತಾದ ಹಲವಾರು ಬಯಲಾಟಗಳನ್ನು ನೋಡಿದ ನೆನಪು ನನಗೆ ಈಗಲೂ ಇದೆ. ಸುತ್ತ-ಮುತ್ತ ಎಲ್ಲಾದರೂ ಯಕ್ಷಗಾನ ಬಯಲಾಟ ಇದ್ದಲ್ಲಿ ಅದರ ಪ್ರಚಾರಕ್ಕಾಗಿ ಒಬ್ಬ ವ್ಯಕ್ತಿ ಜಾಲಿಯಾಕಾರದ ದೊಡ್ಡ ಲೌಡ್ಸ್ ಸ್ಪೀಕರನ್ನು ಬಾಯಿಗಿಟ್ಟು ಜೋರಾಗಿ ಆಟ ಇರುವ ಜಾಗ, ಆಟದ ಹೆಸರು, ಮೇಳ, ಕಥೆಯ ಸಾರಾಂಶಗಳನ್ನು ಹೇಳುತ್ತಾ ರಸ್ತೆಯಲ್ಲಿ ಹಾದು ಹೋಗುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ಒಮ್ಮೊಮ್ಮೆ ನಮ್ಮ ಅಂಗಡಿಗೆ ಬಂದು ಜಗಲಿಯಲ್ಲಿ ಕೆಲವು ಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆಗ ತಂದೆಯವರು ಅಂಗಡಿಗೆ ತಾಗಿ ಕೊಂಡಿದ್ದ ನಮ್ಮ ಮನೆಯಿಂದ ಅವರಿಗೆ ಕಲಸಿದ ಅವಲಕ್ಕಿ, ಬಾಳೆಹಣ್ಣು ಅಥವಾ ಇನ್ನೇನಾದರೂ ತಿಂಡಿ-ಚಾ ಮಾಡಿಸಿ ಕೊಡುತ್ತಿದ್ದರು. ಬರೇ ದೊಂದಿ (ಕಂದೀಲು)ಯ ಬೆಳಕಿನಲ್ಲಿ-ಪೆಟ್ರೊಮ್ಯಾಕ್ಸ್ (ಗ್ಯಾಸ್‌ಲೈಟ್)ನ ಬೆಳಕಿನಲ್ಲಿ ಆಡುತ್ತಿದ್ದ ಯಕ್ಷಗಾನ ಬಯಲಾಟವನ್ನು ನೋಡಿದ ನೆನಪು ಈಗಲೂ ನನಗಿದೆ.
ರಂಗಸ್ಥಳದ ಕಂಬಗಳಿಗೆ ಹಲವಾರು ದೊಂದಿ (ಕಂದೀಲು)ಗಳನ್ನು ಕಟ್ಟುತ್ತಿದ್ದರು. ಒಬ್ಬ ವ್ಯಕ್ತಿ ಕಾದು ಕುಳಿತು ಕೊಂಡವನAತೆ ಆಗಾಗ ಅದಕ್ಕೆ ಎಣ್ಣೆ ಹಾಕುತ್ತಿದ್ದ. ದೊಂದಿಯ ನಂತರ ಪೆಟ್ರೊಮ್ಯಾಕ್ಸ್ (ಗ್ಯಾಸ್‌ಲೈಟ್) ಬಂತು. ರಂಗಸ್ಥಳ ಸುತ್ತಲೂ ಕೆಲವು ಪೆಟ್ರೊಮ್ಯಕ್ಸ್ಗಳನ್ನು ತೂಗುಹಾಕುತ್ತಿದ್ದರು. ಒಬ್ಬ ವ್ಯಕ್ತಿ ಆಗಾಗ ಅದಕ್ಕೆ ಪಂಪ್ ಹೊಡೆಯುತ್ತಾ, ಎಣ್ಣೆ ಹಾಕುತ್ತಾ ನೋಡಿಕೊಳ್ಳುತ್ತಿದ್ದ. ಸುತ್ತಲೂ ಕತ್ತಲೆಯ ಕೋಟೆಯಂತಿದ್ದ ಬಯಲಿನ ಮಧ್ಯೆ ದೊಂದಿಯ ಕೆಂಪು ಬೆಳಕಿನಲ್ಲಿ ಅಂದು ನಡೆಯುತ್ತಿದ್ದ ಆ ಯಕ್ಷಗಾನದ ಚೆಂದ, ಅಂದಿನ ವೇಷಭೂಷಣ, ಗಾಂಭೀರ್ಯ ಇಂದಿನ ಯಕ್ಷಗಾನದಲ್ಲಿ ಎಳ್ಳಷ್ಟೂ ಉಳಿದಿಲ್ಲ. ಇಂದು ಸಿನೆಮಾ ನೋಡುವಂತೆ ಅಂದು ಬ್ಯಾರಿಗಳು ಯಕ್ಷಗಾನವನ್ನು ನೋಡುತ್ತಿದ್ದರು. ಯಕ್ಷಗಾನದಲ್ಲಿ ಪಾತ್ರ ಮಾಡುತ್ತಿದ್ದರು. ಈಗಲೂ ನಮ್ಮ ಪಕ್ಕದ ಊರು ಜೋಕಟ್ಟೆಯಲ್ಲಿ ಯಕ್ಷಗಾನದಲ್ಲಿ ಭೀಮನ ಪಾತ್ರ ನಿರ್ವಹಿಸುತ್ತಿದ್ದ ಬ್ಯಾರಿಯೊಬ್ಬರು ಇದ್ದಾರೆ ಎಂದು ಕೇಳಿದ್ದೇನೆ. ಯಕ್ಷಗಾನ ನೋಡಿ ಬಂದ ಬ್ಯಾರಿಗಳು ತುಳುವರಂತೆಯೇ ಅದರ ಕಥೆ, ಪಾತ್ರ, ಅಭಿನಯದ ಬಗ್ಗೆ ಚರ್ಚಿಸುತ್ತಿದ್ದುದನ್ನು ಕೇಳಿದ್ದೇನೆ. ಜಾತ್ರೆಗಳಂತೆಯೇ ಬಯಲಾಟದ ಸಂದರ್ಭಗಳಲ್ಲೂ ಸಂತೆಗಳಿರುತ್ತಿದ್ದವು. ಇದರಲ್ಲೂ ಹೆಚ್ಚಿನ ಮಳಿಗೆಗಳು ಬ್ಯಾರಿಗಳದ್ದೇ ಆಗಿರುತ್ತಿತ್ತು.
ನಮ್ಮ ಮನೆಯ ಅನತಿ ದೂರದಲ್ಲಿ ಇಬ್ರಾಯಿ ಎಂಬವನ ಬೀಡಿ ಬ್ರಾಂಚ್ ಇತ್ತು. ಈ ಇಬ್ರಾಯಿಗೆ ನಾಟಕದ ಗೀಳು. ಸಂಜೆಯಾಗುತ್ತಲೇ ಇವನ ಬ್ರಾಂಚಿನಲ್ಲಿ ತುಳು ಬ್ಯಾರಿ ಯುವಕರು ಸೇರುತ್ತಿದ್ದರು. ಇಲ್ಲಿ ಹೊಸ ಹೊಸ ತುಳು ನಾಟಕಗಳು, ಹಾಡುಗಳು ಸೃಷ್ಟಿಯಾಗುತ್ತಿದ್ದವು. ವರ್ಷದಲ್ಲಿ ಒಂದು ಸಲವೊ-ಎರಡು ಸಲವೊ ಈ ನಾಟಕ ಊರಲ್ಲಿ ಪ್ರದರ್ಶನವಾಗುತ್ತಿತ್ತು. ಇಬ್ರಾಯಿ ಇವರೆಲ್ಲರ ನಾಯಕನಾಗಿದ್ದ. ಎಲ್ಲ ನಾಟಕಗಳಲ್ಲೂ ಈತ ಹೆಣ್ಣಿನ ಪಾತ್ರವನ್ನು ಅಭಿನಯಿಸುತ್ತಿದ್ದುದರಿಂದ ಈತನನ್ನು ಬ್ಯಾರಿಗಳು ‘ಪೆಂಕೂಸ’ ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ನಾಟಕ ಪ್ರದರ್ಶನದ ಎರಡು ತಿಂಗಳು ಮೊದಲೇ ಸಂಜೆಯಿAದ ಅರ್ಧರಾತ್ರಿಯವರೆಗೂ ನಾಟಕದ ರಿಹರ್ಸಲ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಬ್ರಾಯಿ ಅದ್ಯರ‍್ಯಾರಿಂದಲೋ ದುಡ್ಡು ಒಟ್ಟು ಮಾಡಿ ತಂದು ರಿಹರ್ಸಲ್‌ಗೆ ಬಂದವರಿಗೆ, ರಿಹರ್ಸಲ್ ನೋಡಲು ಬಂದವರಿಗೆ ಕಲಸಿದ ಅವಲಕ್ಕಿ, ಬಾಳೆಹಣ್ಣು, ಚಾ, ಬೀಡಿ, ಬೆಂಕಿ ಪೊಟ್ಟಣ ಒದಗಿಸುತ್ತಿದ್ದ. ಅದೆಷ್ಟೋ ಸಲ ನಾನೂ ಈ ರಿಹರ್ಸಲ್ ನೋಡಲು ಹೋಗುತ್ತಿದ್ದೆ. ಒಮ್ಮೊಮ್ಮೆ ಈ ಒಟ್ಟುಗೂಡಿಸಿದ ಹಣದ ವಿಷಯದಲ್ಲಿ ಅಲ್ಲಿ ಜಗಳ ನಡೆದು ರಿಹರ್ಸಲ್ ಬಂದಾಗುವುದೂ ಇತ್ತು. ಮತ್ತೆ ಮರುದಿನ ಎಲ್ಲರೂ ಎಲ್ಲವನ್ನೂ ಮರೆತು ನಾಟಕದಲ್ಲಿ ಮುಳುಗಿಬಿಡುತ್ತಿದ್ದರು. ನಮ್ಮ ಊರಿನ ಎಲ್ಲ ಕಲೆಗಳೂ, ಪ್ರತಿಭೆಗಳೂ ಜೀವ ಪಡೆಯುತ್ತಿದ್ದುದು ಈ ಇಬ್ರಾಯಿಯ ಬೀಡಿ ಬ್ರಾಂಚ್‌ನಲ್ಲಿ.
‘ಬೈಕAಡಿಗುತ್ತು’ ಆಗ ಆ ಪರಿಸರದಲ್ಲೇ ಪ್ರತಿಷ್ಠಿತ ಗುತ್ತು. ಈ ‘ಗುತ್ತು’ಗೆ ದಿನಸಿ ಸಾಮಗ್ರಿಗಳು ಪೂರೈಕೆಯಾಗುತ್ತಿದ್ದುದು ನಮ್ಮ ತಂದೆಯವರ ಅಂಗಡಿಯಿAದ. ವರ್ಷ ಪೂರ್ತಿ ಖರೀದಿಸಿದ ದಿನಸಿಗೆ ಬದಲಾಗಿ ‘ಗುತ್ತು’ನಲ್ಲಿ ಬೆಳೆದ ಅಕ್ಕಿಮುಡಿ ನಮ್ಮ ಅಂಗಡಿಗೆ ರವಾನೆಯಾಗುತ್ತಿತ್ತು. ದೀಪಾವಳಿಯ ಅಂಗಡಿ ಪೂಜೆಯ ಸಂದರ್ಭದಲ್ಲಿ ಇದರ ಲೆಕ್ಕ ಚುಕ್ತವಾಗುತ್ತಿತ್ತು. ಅನಂತರ ಹೊಸಲೆಕ್ಕ. ದೀಪಾವಳಿಯ ಸಂದರ್ಭ ಲೆಕ್ಕ ಚುಕ್ತಾ ಮಾಡಲು ಗುತ್ತಿನ ಒಡತಿ (ಅವರ ಹೆಸರು ಕಮಲಾ ಹೆಂಗಸು ಎಂದು ಇರಬೇಕು-ತಂದೆ ಅವರನ್ನು ಕಮಲಾ ಪೊಂಜೊವು ಎಂದು ಕರೆಯುತ್ತಿದ್ದದ್ದು ನೆನಪು) ಬರುವ ದಿನ ನಿಗದಿಯಾಗುತ್ತಿತ್ತು. ಅಂದು ಬೆಳಗ್ಗೆಯೇ ವಿಶೇಷ ಕುರ್ಚಿಯೊಂದು ಅಂಗಡಿಯ ಜಗಲಿಯಲ್ಲಿ ಇಡಲಾಗುತ್ತಿತ್ತು. ಬಹಳ ಗೌರವಾದರಗಳೊಂದಿಗೆ ಅವರನ್ನು ಸ್ವಾಗತಿಸಲಾಗುತ್ತಿತ್ತು. ಎಳನೀರು, ಬಾಳೆಹಣ್ಣು, ಚಾ ನೀಡಿ ಅವರನ್ನು ಸತ್ಕರಿಸಲಾಗುತಿತ್ತು. ಹರಿವಾಣ ತುಂಬಾ ಎಲೆ-ಅಡಿಕೆ ಅವರ ಮುಂದೆ ಇಡಲಾಗುತಿತ್ತು. ದೀಪಾವಳಿಗೆ ಮೊದಲು ತಂದೆಯವರೂ ಅಂಗಡಿಯನ್ನೆಲ್ಲಾ ಗುಡಿಸಿ, ತೊಳೆದು, ಒರೆಸಿ ಶುದ್ಧಗೊಳಿಸಿ ಸುಣ್ಣ ಬಳಿಸುತ್ತಿದ್ದರು. ಹಾಗೆಯೇ ಬಾಣಸಿಗರನ್ನು ಮನೆಗೆ ಕರೆಸಿ ಗಿರಾಕಿಗಳಿಗೆ ಕೊಡಲೆಂದೇ ಬೂಂದಿ ಲಾಡುಗಳನ್ನು ಮಾಡಿಸುತ್ತಿದ್ದರು. ಮತ್ತು ಅದನ್ನು ಅಕ್ಕ-ಪಕ್ಕದ ಮನೆಗಳೆಲ್ಲರಿಗೂ ಹಂಚುತ್ತಿದ್ದರು. ಬೈಕಂಡಿ ಗುತ್ತಿಗೆ ಒಂದು ಕೈಚೀಲ ತುಂಬ ಲಾಡುಗಳನ್ನು ಆಳಿನ ಮೂಲಕ ಕಳಿಸಿಕೊಡುತ್ತಿದ್ದರು. ಹಾಗೆಯೇ ಹೊಸ ಅಕ್ಕಿ ಉಣ್ಣುವ ದಿನ (ಪುದ್ವಾರ್)ದಲ್ಲಿ, ಇತರ ವಿಶೇಷ ದಿನಗಳಲ್ಲಿ ಬೈಕಂಡಿಗುತ್ತಿನಿAದ ಬುಟ್ಟಿ ತುಂಬಾ ತರಕಾರಿ ನಮ್ಮ ಮನೆಗೆ ಬರುತ್ತಿದ್ದವು. ಅದೇ ರೀತಿ ಹಳ್ಳಿ ಹಳ್ಳಿಗೆ ತೆರಳಿ ಗಾಣದÀ ಅಚ್ಚಿ ಬೆಲ್ಲ, ಅಡಿಕೆ, ಭತ್ತ, ಅಕ್ಕಿ, ದನ, ಬೈ ಹುಲ್ಲು ಖರೀದಿಸಿ ಸಂತೆಗೆ, ಅಂಗಡಿಗಳಿಗೆ ಮಾರುವ ವ್ಯಾಪಾರಿಗಳು ಹೆಚ್ಚಿನವರು ಬ್ಯಾರಿಗಳೇ ಆಗಿದ್ದರು. ಇವರೂ ಕೂಡಾ ದೀಪಾವಳಿ ಸಂದರ್ಭ ತುಳುವರ ಮನೆಗೆ ಸಿಹಿತಿಂಡಿ (ಹೆಚ್ಚಾಗಿ ಬೂಂದಿಲಾಡು)ಗಳನ್ನು ತಲುಪಿಸುತ್ತಿದ್ದರು. ನಮ್ಮ ಅಂಗಡಿ ಪಕ್ಕದಲ್ಲೆ ಒಬ್ಬ ದರ್ಜಿ ಇದ್ದರು. ಅವರ ಹೆಸರು ನೆನಪಿಲ್ಲ. ಅವರು ಬಣ್ಣದ ಕಾಗದಗಳಿಂದ ಸುಂದರವಾದ ಗೂಡು ದೀಪಗಳನ್ನು ಮಾಡುತ್ತಿದ್ದರು. ನಮ್ಮ ತಂದೆಯವರು ನನಗೆ ಮತ್ತು ನನ್ನ ಅಕ್ಕ, ತಮ್ಮನಿಗೆ ಅವರಿಂದ ಗೂಡುದೀಪಗಳನ್ನು ಮಾಡಿಸುತ್ತಿದ್ದುದು, ನಾವು ಅದಕ್ಕೆ ನಮ್ಮ ಹೆಸರುಗಳನ್ನಿಟ್ಟು, ಮನೆಯ ಜಗಲಿಯ ಪಕ್ಕಾಸಿಗೆ ತೂಗು ಹಾಕಿ ಸಂಭ್ರಮ ಪಡುತ್ತಿದ್ದುದು ದೀಪಾವಳಿಯ ಸಂದರ್ಭದಲ್ಲಿ ಈಗಲೂ ನೆನಪಾಗುತ್ತಿದೆ.
ಮಹಿಳೆಯರು ತಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿಗೆ ಏನಾದರೂ ಕಾಯಿಲೆ ಬಂದಾಗ ೧೦ ಮಕ್ಕಳಿಗೆ ‘ಮಕ್ಕಳಗಂಜಿ’ ಕೊಡುತ್ತೇನೆ, ೨೦ ಮಕ್ಕಳಿಗೆ ‘ಮಕ್ಕಳಗಂಜಿ’ ಕೊಡುತ್ತೇನೆ. ಶ್ರೀಮಂತರಾದರೆ ೫೦-೧೦೦ ಮಕ್ಕಳಿಗೆ ‘ಮಕ್ಕಳಗಂಜಿ’ ಕೊಡುತ್ತೇನೆ ಎಂದು ಹರಕೆ ಹೇಳಿಕೊಳ್ಳುತ್ತಿದ್ದರು. ಗಂಧಸಾಲೆ ಬೆಳ್ತಿಗೆಯ ಗಂಜಿ ಮಾಡಿ ಅದಕ್ಕೆ ತೆಂಗಿನಕಾಯಿ ಹಾಲು, ಏಲಕ್ಕಿ, ಗೋಡಂಬಿ, ದ್ರಾಕ್ಷಿ, ತುಪ್ಪ, ಬೆಲ್ಲ ಹಾಕಿ ಮಾಡುವ ಗಂಜಿಗೆ ‘ಮಕ್ಕಳಗಂಜಿ’ ಎಂದು ಕರೆಯುತ್ತಿದ್ದರು. ನಮ್ಮ ತಾಯಿ ಅದೆಷ್ಟೋ ಸಲ ಈ ರೀತಿಯ ಹರಕೆ ಕೊಟ್ಟದ್ದು ನೆನಪಿದೆ. ಇಲ್ಲಿ ಹರಕೆ ತೀರಿಸಲು ಬ್ಯಾರಿಗಳ ಮಕ್ಕಳೇ ಆಗಬೇಕೆಂದಿಲ್ಲ. ಸುಮಾರು ೧೦-೧೨ ವರ್ಷದೊಳಗಿನ ಮಕ್ಕಳಾದರೆ ಸಾಕು. ನಾನು ನನ್ನ ಶಾಲೆಯ ಸಹಪಾಠಿಗಳನ್ನು ಈ ‘ಮಕ್ಕಳ ಗಂಜಿ’ ಹರಕೆ ಪೂರೈಸಲು ನಮ್ಮ ಮನೆಗೆ ಕರೆತಂದದ್ದಿದೆ. ತಾಯಿ ನಮ್ಮೆಲ್ಲರನ್ನೂ ಒಟ್ಟಿಗೆ ನೆಲದಲ್ಲಿ ಸಾಲಾಗಿ ಕುಳ್ಳಿರಿಸಿ, ಬಟ್ಟಲಲ್ಲಿ ಹೊಟ್ಟೆ ತುಂಬಾ ಗಂಜಿ ಬಡಿಸುತ್ತಿದ್ದರು. ಯಾರಾದರೂ ಮಕ್ಕಳು ಅರೆಹೊಟ್ಟೆಯಲ್ಲಿ ಹೋದರೆ ಹರಕೆ ಸಂದಾಯವಾಗುವುದಿಲ್ಲ ಎಂಬ ನಂಬಿಕೆಯಿAದ ಬಹಳ ಗೌರವದಿಂದ, ಆದರದಿಂದ ಮತ್ತೆ ಮತ್ತೆ ಕೇಳಿ ಬಡಿಸುತ್ತಿದ್ದರು. ನಂತರ ತೇದ ಗಂಧವನ್ನು ಮಕ್ಕಳ ಕಿವಿಯ ಕೆಳಭಾಗ ಕತ್ತಿನ ಅಡಿಗೆ ತೋರು ಬೆರಳಿನಿಂದ ನಾಮದಂತೆ ಒಂದು ಗೆರೆ ಎಳೆಯುತ್ತಿದ್ದರು. ನಂತರ ತಲಾ ಒಂದು ಮುಕ್ಕಾಲ್ (ನಾಣ್ಯ) ಎಲ್ಲಾ ಮಕ್ಕಳಿಗೂ ದಕ್ಷಿಣೆ ಕೊಡುತ್ತಿದ್ದರು.
ಇತ್ತೀಚೆಗೆ ಉಡುಪಿಯಿಂದ ಸುಮಾರು ೬-೭ ಕಿ.ಮೀ.ಗಳಷ್ಟು ದೂರವಿರುವ ನನ್ನ ಹತ್ತಿರದ ಬಂಧುವೊಬ್ಬರ ಮನೆಗೆ ಬಹಳ ವರ್ಷಗಳ ನಂತರ ಹೋಗಿದ್ದೆ. ನಾನು ಸಂಜೆ ೪ ಗಂಟೆಗೆ ಬರುತ್ತೇನೆ ಎಂದು ಫೋನ್ ಮಾಡಿ ಹೇಳಿದ್ದರೂ ಆ ಮನೆಯ ಮುಂದೆ ಹೋಗಿ ತಲುಪಿದಾಗ ಮನೆಗೆ ಬೀಗ ಜಡಿದಿತ್ತು. ಮತ್ತೆ ಅಲ್ಲಿಂದ ಫೋನ್ ಮಾಡಿದರೂ ಆ ಮನೆಯವರು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಅಲ್ಲೆ ಸ್ವಲ್ಪ ದೂರದಲ್ಲಿ ಒಂದು ಮನೆ ಕಾಣಿಸಿತು. ಅಂಗಳದಲ್ಲಿ ತುಳಸಿಕಟ್ಟೆ ಇದ್ದುದರಿಂದ ಅದು ತುಳುವರ ಮನೆ ಎಂದು ತಿಳಿಯಿತು. ಆ ಮನೆಯವರಲ್ಲಿ ಕೇಳೋಣವೆಂದು ಅತ್ತ ಹೆಜ್ಜೆ ಹಾಕಿದರೆ ಆ ಮನೆಯ ಅಜ್ಜಿಯೊಬ್ಬರು ಜಗಲಿ ಇಳಿದು ನನ್ನತ್ತಲೇ ಬರುವುದು ಕಾಣಿಸಿತು. ನಾನು ಅಲ್ಲೇ ನಿಂತು ಆ ಅಜ್ಜಿ ನನ್ನ ಬಳಿ ಬರಲಿ ಎಂದು ಕಾದೆ. ಅವರು ನನ್ನ ಬಳಿ ಬಂದವರೇ “ನೀನು ರುಕಿಯ (ನನ್ನ ಬಂಧು ಮಹಿಳೆಯ ಹೆಸರು) ಳಿಗಾಗಿ ಕಾಯುವುದಾ” ಕೇಳಿದರು. “ಹೌದು, ೪ ಗಂಟೆಗೆ ರ‍್ತೇನೆ ಎಂದು ಹೇಳಿದ್ದೆ, ಇಲ್ಲಿ ನೋಡಿದರೆ ಮನೆಗೆ ಬೀಗ ಹಾಕಿದೆ. ಎಲ್ಲಿ ಹೋಗಿದ್ದಾರೆ?” ಕೇಳಿದೆ. “ಬರ್ತಾಳೆ ಮಗಾ, ಈಗ ಬರ್ತಾಳೆ. ಬಾ, ಇದೇ ನನ್ನ ಮನೆ. ಅವಳು ಬರುವ ತನಕ ಇಲ್ಲಿರು ಬಾ” ಎಂದು ಬೇಡವೆಂದರೂ ಒತ್ತಾಯ ಪೂರ್ವಕವಾಗಿ ನನ್ನನ್ನು ಕರೆದೊಯ್ದು, ಜಗಲಿಯಲ್ಲಿ ಕುಳಿತುಕೊಳ್ಳಲು ಕುರ್ಚಿ ಕೊಟ್ಟರು. ಒಳಗೆ ಹೋಗಿ ಒಂದು ತಂಬಿಗೆಯಲ್ಲಿ ನೀರು, ಹರಿವಾಣದಲ್ಲಿ ಒಂದೆರಡು ತುಂಡು ಬೆಲ್ಲ ಹಿಡಿದು ನನ್ನ ಮುಂದಿಟ್ಟು “ಬೆಲ್ಲ ತಗೊ ಮಗಾ, ಬಾಯಾರಿಕೆ ಕುಡಿ” ಒತ್ತಾಯಿಸಿದರು. ನನಗದು ಅಭ್ಯಾಸವಿಲ್ಲದಿದ್ದರೂ ಅಜ್ಜಿಯ ಒತ್ತಾಯಕ್ಕೆ ಒಂದು ತುಂಡು ಬೆಲ್ಲ ತಿಂದು ನೀರು ಕುಡಿದೆ. ಯಾಕೋ ದೇಹವೆಲ್ಲ ತಂಪಾದAತೆನಿಸಿತು. ಮತ್ತೆ ಒಳಗೆ ಹೋದ ಅಜ್ಜಿ ಒಂದು ಬಟ್ಟಲಲ್ಲಿ ಎಲೆಯಲ್ಲಿ ಸುತ್ತಿದ ತಿಂಡಿಯನ್ನು ತಂದು ನನ್ನ ಮುಂದಿಟ್ಟು “ತಗೋ ಮಗಾ, ಇದು ಹಲಸಿನ ಹಣ್ಣಿನ ಗಟ್ಟಿ, ನಿನ್ನೆ ಮಾಡಿದ್ದು, ತಿನ್ನು ಸಂಕೋಚಪಡಬೇಡ. ನಾನು ಚಾ ಮಾಡಿ ತರ್ತೇನೆ” ಎಂದು ಮತ್ತೆ ಒಳಗೆ ಹೋದರು. ನನಗೆ ಮುಜುಗರವಾಗತೊಡಗಿತು. ಅಷ್ಟರಲ್ಲಿ ಮತ್ತೊಬ್ಬಳು ಹೆಂಗಸು ಕಂಕುಳಲ್ಲಿ ಪುಟ್ಟ ಮಗುವೊಂದನ್ನು ಇಟ್ಟುಕೊಂಡು “ಗಟ್ಟಿ ತಿನ್ನಿ ಅಣ್ಣ, ಮುಲಾಜು ಮಾಡಬೇಡಿ. ರುಕಿಯಾ ಈಗ ಬರ್ತಾಳೆ. ಈ ಮಗು ನೋಡಿ, ಇದು ಅವಳದೇ. ಇದು ಇಲ್ಲಿಯೇ ಇರುವುದು” ಎಂದು ಮಗುವನ್ನು ನನ್ನ ಮುಂದೆ ಹಿಡಿದಾಗ ನನಗೆ ಆಶ್ಚರ್ಯವಾಗಿತ್ತು. “ನೀವು ತಿನ್ನಿ, ಇದು ನಿಮ್ಮ ಮನೇಂತಲೇ ತಿಳ್ಕೊಳಿ, ತಿನ್ನಿ” ಎಂದು ಆಕೆ ಮತ್ತೆ ಒತ್ತಾಯಿಸಿದಾಗ ಒಂದು ತುಂಡು ಮುರಿದು ಬಾಯಿಗಿಟ್ಟೆ. ಕರಿ ಮೆಣಸು, ಬೆಲ್ಲ ಹಾಕಿ ತಯಾರಿಸಿದ್ದ ಆ ಗಟ್ಟಿಯ ರುಚಿ ನನ್ನನ್ನು ಮತ್ತಷ್ಟು ತಿನ್ನುವಂತೆ ಮಾಡಿತ್ತು. ಅಷ್ಟರಲ್ಲಿ ಚಾ ತಂದ ಅಜ್ಜಿ ನನ್ನ ಪಕ್ಕ ಬಂದು ಕುಳಿತರು. ಅವರ ಆದರ, ಆತಿಥ್ಯಕ್ಕೆ ನಾನು ಸಂಪೂರ್ಣ ಕರಗಿ ಹೋಗಿದ್ದೆ. “ನೋಡು ಮಗಾ, ನನ್ನ ಚಿಕ್ಕ ಮಗಳಿಗೆ ಮೂರು ದಿನದಿಂದ ಹಲ್ಲು ನೋವು, ಮೊನ್ನೆ ಡಾಕ್ಟರಿಗೆ ತೋರಿಸಿದ್ದೆವು. ಒಂದು ಹಲ್ಲು ಸಂಪೂರ್ಣ ಕೆಟ್ಟಿದೆ, ಅದನ್ನು ತೆಗೆಯಲೇ ಬೇಕು ಎಂದು ಡಾಕ್ಟರ್ ಹೇಳಿದ್ದರಂತೆ. ಅವಳಿಗೆ ಭಯ. ಯಾರೂ ಹೇಳಿದರೂ ಹಲ್ಲು ತೆಗೆಯಲಿಕ್ಕೆ ಕೇಳುವುದಿಲ್ಲ. ಎರಡು ಮಕ್ಕಳ ತಾಯಿ ಅವಳು. ಅವಳ ಗಂಡ ಕರೆದುಕೊಂಡು ಹೋಗ್ತೇನೆ ಹೇಳಿದ, ಇಬ್ಬರು ಅಕ್ಕಂದಿರೂ ಕರೆದುಕೊಂಡು ಹೋಗ್ತೇನೆ ಹೇಳಿದರು, ನನ್ನ ಒಬ್ಬ ಮಗ ಇದ್ದಾನೆ ಚಿಕ್ಕವ, ಅವನು ಕರೆದುಕೊಂಡು ಹೋಗ್ತೇನೆ ಹೇಳಿದ, ನಾನು ಬರ್ತೇನೆ ಹೇಳಿದೆ. ಯಾರೂ ಕರೆದರೂ ಈ ಮೂರು ದಿನದಿಂದ ಅವಳು ಹೋಗಲಿಲ್ಲ. ಈ ರುಕಿಯಾ ಇದ್ದಾಳಲ್ಲಾ, ಏನು ಮಾಡಿದಳೋ, ಈಗ ಮಧ್ಯಾಹ್ನ ಊಟ ಮಾಡಿ ಬಂದವಳೇ ಇವಳನ್ನು ಹಲ್ಲು ತೆಗೆಸಲು ಕರೆದುಕೊಂಡು ಹೋಗಿದ್ದಾಳೆ. ಇನ್ನೇನು ಈಗ ಬರಬಹುದು. ಸ್ವಲ್ಪ ಹೊತ್ತು ಕುಳಿತುಕೊ ಮಗಾ. ನೀನು ಬರುವ ವಿಷಯ ರುಕಿಯಾ ನನ್ನಲ್ಲಿ ಹೇಳಿದ್ದಾಳೆ. ಈ ಮನೆಯಲ್ಲಿ ಆ ಹುಡುಗಿ ಎಂದರೆ ಆಯಿತು ಎಲ್ಲರಿಗೂ ಇಷ್ಟ. ಎಲ್ಲದಕ್ಕೂ ಅವಳೇ ಬೇಕು. ಒಂದು ಬಟ್ಟೆ ತೆಗೆಯುವುದಾದರೂ ಈ ರುಕಿಯಾ ಬೇಕು. ನಮಗೆ ಅವಳು ಈ ಮನೆ ಮಗಳಂತೆ. ಅವಳ ಮೂರು ಮಕ್ಕಳು ಹೆಚ್ಚು ಹೊತ್ತು ಇರುವುದು ಇಲ್ಲಿಯೇ. ಅವಳ ಇಬ್ಬರು ಮಕ್ಕಳಿಗೆ ಓದಿಸುವುದು, ಪಾಠ ಹೇಳಿಕೊಡುವುದು ಎಲ್ಲ ನನ್ನ ಮಕ್ಕಳೇ. ನನ್ನ ಇಬ್ಬರು ಹೆಣ್ಣುಮಕ್ಕಳ ಮದುವೆ ಸಮಯದಲ್ಲಿ ನೀನು ನೋಡಬೇಕಿತ್ತು. ಬಟ್ಟೆ ಆಯ್ಕೆಯಿಂದ ಹಿಡಿದು-ಮದುಮಗಳಿಗೆ ಮೆಹೆಂದಿ ಇಟ್ಟದ್ದು, ತಲೆ ಬಾಚಿ ಹೂ ಮುಡಿಸಿದ್ದು, ಅಲಂಕಾರ ಮಾಡಿದ್ದು ಎಲ್ಲ ಇವಳೇ ಎನ್ನುತ್ತಿರುವಂತೆ ಆಟೋ ಬಂದು ಮನೆಯ ಮುಂದೆ ನಿಂತಿತ್ತು. ಅದರಿಂದ ಬುರ್ಖಾ ಧರಿಸಿದ್ದ ರುಕಿಯಾ ಇಳಿದು, ಅಟೋದವನಿಗೆ ದುಡ್ಡು ಕೊಟ್ಟು, ಇನ್ನೊಬ್ಬಳನ್ನು ಆಟೋದಿಂದ ಇಳಿಸಿದಳು. ದವಡೆಗೆ ಕೈ ಬಿತ್ತಿ ಹಿಡಿದಿದ್ದ ಆಕೆ ರುಕಿಯಾಳ ದೇಹಕ್ಕೆ ಒರಗಿಕೊಂಡೇ ಬರುತ್ತಿದ್ದಳು. ರುಕಿಯಾ ಅವಳನ್ನು ಆಧರಿಸಿ ಹಿಡಿದು ಮಕ್ಕಳಂತೆ ನಡೆಸಿಕೊಂಡು ಬರುತ್ತಿರುವುದನ್ನು ಕಂಡು ನನಗೆ ನನ್ನ ಬಾಲ್ಯ, ಸೇಸಜ್ಜಿ, ಸೇಸಜ್ಜಿಯವರ ಮನೆಯವರ ನೆನಪಾಯಿತು.