Athoor Halyar Ibrahim Haji

1900 – 1969

Among those who fought for India’s freedom, many were Beary Muslims. However, due to the lack of documentation by the elders of that time, many Beary freedom fighters did not receive recognition in history.

One such unrecognized hero was Halyar Ibrahim Haji. Born around 1900 to Ismail Haji and Pallimma, zamindars of Athoor Halyar in Ramakunja village, Puttur taluk (now Kadaba taluk of DK Dist), he was inspired to join the freedom struggle by his brother-in-law, Hasanabba Haji of Uppinangadi, who was also a freedom fighter. Halyar Ibrahim Haji was a true patriot who accompanied Mahatma Gandhi during his visit to Dakshina Kannada district.

From a young age, Halyar Ibrahim Haji was passionate about the country and fully immersed himself in the freedom struggle as he grew older. He actively participated in the Quit India and Khilafat movements and took local youth to meet important leaders visiting Dakshina Kannada. He was a skilled organizer, and when Gandhiji arrived in Puttur, Halyar Ibrahim Haji brought hundreds of people from nearby villages to participate. He also walked with Gandhiji when he visited the Dalit colonies of Puttur. Known for his leadership qualities, British officers nicknamed him “Hitler Ibrahim,” highlighting his courage.

Halyar Ibrahim Haji was well-respected not only in his town but also in the surrounding villages. He was a proponent of justice and held Raji Panchayat sessions on the veranda of his house, where he dispensed fair judgments regardless of caste or religion. He was a true secularist with a strong personality. When he arrived in Puttur, people would gather just to catch a glimpse of him. During his Raji Panchayat sessions, no one dared to sit in his presence unless he instructed them to do so.

A Sunni scholar, Halyar Ibrahim Haji respected both the Ulama and the Umrah. Whenever Abubakar Musliyar and Ullala Thangal visited Puttur, Sulya, and Belthangadi taluks for various programs, he ensured they were accommodated in his house, with separate rooms reserved for them.

Halyar Ibrahim Haji, always dedicated to the upliftment of Dalits, played a pivotal role in their welfare. He personally constructed Harijan Keri and assisted hundreds in building homes. He even organized marriages for Dalit families employed in his household. When he discovered Dalits being denied entry to a caste-based hotel, he led a pre-dawn protest, ensuring they were served tea in glasses instead of cups. His bold actions brought justice to many.

Known for his straightforwardness and principles, Halyar Ibrahim Haji never compromised on injustice. His resolute demeanor earned both admiration and animosity. Despite attempts on his life during a staged panchayat, he remained composed and dignified until his passing.

As a PWD contractor, he contributed significantly to local infrastructure, including Uppinangady Government College, Puttur Government Hospital, and Koyla Hospital near Athur. He undertook various road and bridge constructions, with Ramakunja village funding half the cost of the government school’s construction.

Politically active post-independence, Halyar Ibrahim Haji served as President of Ramakunja Gram Panchayat for 15 years and held roles in the Karnataka Pradesh Congress Committee. He founded the Milk Producers’ Co-operative Society in 1967, serving as its president until his demise.

In addition to his political and social endeavors, he played a crucial role in religious activities, notably as President of Badria Juma Masjid in Athoor. He had eight sons and five daughters, leaving a lasting legacy through his surviving children, including Muhammad Ali, a former member of the Puttur Municipal Council.

Athoor Halyar Ibrahim Haji passed away on 12/01/1969


ಸ್ವಾತಂತ್ರ್ಯ ಯೋಧ ಆತೂರು ಹಲ್ಯಾರ್ ಇಬ್ರಾಹೀಂ ಹಾಜಿ

ದೇಶಕ್ಕಾಗಿ ದುಡಿದ ಮತ್ತು ಮಿಡಿದ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಪೈಕಿ ಬ್ಯಾರಿ ಮುಸ್ಲಿಮರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಆದರೆ ಅಂದಿನ ಹಿರಿಯರಿಗೆ ದಾಖಲೀಕರಣದ ಮಹತ್ವ ಅರಿಯದ ಕಾರಣ ಅದೆಷ್ಟೋ ಬ್ಯಾರಿ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇತಿಹಾಸದ ಪುಟಗಳಿಗೆ ಸೇರುವ ಭಾಗ್ಯ ಸಿಕ್ಕಿಲ್ಲ ಎಂದರೆ ತಪ್ಪಾಗಲಾರದು.

ಪುತ್ತೂರು ತಾಲೂಕಿನ (ಪ್ರಸ್ತುತ ಕಡಬ ತಾಲೂಕು) ರಾಮಕುಂಜ ಗ್ರಾಮದ ಆತೂರು ಹಲ್ಯಾರ್ ಎಂಬಲ್ಲಿನ ಜಮೀನ್ದಾರರಾಗಿದ್ದ ಇಸ್ಮಾಯಿಲ್ ಹಾಜಿ-ಪಳ್ಳಿಮ್ಮ ದಂಪತಿಯ ಪುತ್ರನಾಗಿ ಅಂದಾಜು 1900ರಲ್ಲಿ ಜನಿಸಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಕೂಡ ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಡದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ತನ್ನ ಸೋದರ ಮಾವ ಉಪ್ಪಿನಂಗಡಿಯ ಹಸನಬ್ಬ ಹಾಜಿ ಅವರ ಪ್ರೇರಣೆಯಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಅವರು ಮಹಾತ್ಮಾ ಗಾಂಧೀಜಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದಾಗ ಅವರ ಜೊತೆ ಹೆಜ್ಜೆ ಹಾಕಿದ್ದ ಅಪ್ಪಟ ದೇಶಪ್ರೇಮಿಯಾಗಿದ್ದರು.

ಬಾಲ್ಯದಿಂದಲೇ ದೇಶಕ್ಕಾಗಿ ಮಿಡಿಯುತ್ತಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಅವರು ಯೌವನಕ್ಕೆ ಕಾಲಿಡುತ್ತಲೇ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಕ್ವಿಟ್ ಇಂಡಿಯಾ, ಖಿಲಾಫತ್ ಚಳವಳಿಯಲ್ಲದೆ ದೇಶದ ಪ್ರಮುಖ ನಾಯಕರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದ ಕಾರ್ಯಕ್ರಮಗಳಿಗೆಲ್ಲಾ ಗ್ರಾಮೀಣ ಭಾಗದ ಯುವಕರನ್ನು ಒಗ್ಗೂಡಿಸಿ ಅವರನ್ನು ಕರೆದೊಯ್ಯುವುದರಲ್ಲಿ ನಿಸ್ಸೀಮರಾಗಿದ್ದರು. ನುರಿತ ಸಂಘಟಕರೂ ಆಗಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಅವರು ಗಾಂಧೀಜಿ ಪುತ್ತೂರಿಗೆ ಆಗಮಿಸಿದಾಗ ರಾಮಕುಂಜ ಗ್ರಾಮವಲ್ಲದೆ ಆಸುಪಾಸಿನ ಕೊಯ್ಲ, ಹಳೇ ನೇರ್ಲಂಕಿ ಮತ್ತಿತರ ಗ್ರಾಮಗಳ ನೂರಾರು ಮಂದಿಯನ್ನು ಕರೆದೊಯ್ದಿದ್ದರು. ಗಾಂಧೀಜಿ ಪುತ್ತೂರಿನ ದಲಿತ ಕಾಲನಿಗೆ ಭೇಟಿ ನೀಡಿದ ವೇಳೆ ಹಲ್ಯಾರ್ ಇಬ್ರಾಹೀಂ ಹಾಜಿ ಕೂಡ ಗಾಂಧೀಜಿಯ ಜೊತೆ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದ್ದರು. ಯೌವನದಲ್ಲೇ ನಾಯಕತ್ವದ ಗುಣ ಹೊಂದಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಯುವ ಜನಾಂಗದ ಮಾರ್ಗದರ್ಶಕರೂ ಆಗಿದ್ದರು. ಹಲ್ಯಾರ್ ಇಬ್ರಾಹೀಂ ಹಾಜಿ ಅವರ ನಾಯಕತ್ವದ ಗುಣ, ಧೈರ್ಯಶಾಲಿತನವನ್ನು ಕಂಡ ಸ್ವತಃ ಬ್ರಿಟಿಷ್ ಅಧಿಕಾರಿಗಳು “ಹಿಟ್ಲರ್ ಇಬ್ರಾಹೀಂ” ಎಂದು ಕರೆಯುತ್ತಿದ್ದರು ಎಂಬುದಾಗಿ ಅವರ ಒಡನಾಡಿಗಳು ನೆನಪಿಸುತ್ತಾರೆ. ಹಲ್ಯಾರ್ ಇಬ್ರಾಹೀಂ ಹಾಜಿ ಎಂತಹ ಧೈರ್ಯಶಾಲಿಯಾಗಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಊರಲ್ಲಿ ಮಾತ್ರವಲ್ಲ, ಆಸುಪಾಸಿನ ನಾಲ್ಕೈದು ಗ್ರಾಮಗಳಲ್ಲೂ ಹಲ್ಯಾರ್ ಇಬ್ರಾಹೀಂ ಹಾಜಿಗೆ ಒಳ್ಳೆಯ ಹೆಸರಿತ್ತು. ಅಪಾರ ಗೌರವವೂ ಇತ್ತು. ಸದಾ ನ್ಯಾಯದ ಪರವಿದ್ದ ಅವರು ತನ್ನ ಮನೆಯ ಮೊಗಸಾಲೆಯಲ್ಲಿ ದಿನನಿತ್ಯ ರಾಜಿ ಪಂಚಾಯತಿ ನಡೆಸುತ್ತಿದ್ದರು. ನ್ಯಾಯ ನೀಡುವ ಸಂದರ್ಭ ಜಾತಿ, ಧರ್ಮವನ್ನು ಎಂದೂ ಪರಿಗಣಿಸುತ್ತಿರಲಿಲ್ಲ. ಯಾರಿಗೆ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ನೀಡುತ್ತಿದ್ದರು. ಅಪ್ಪಟ ಜಾತ್ಯತೀತರಾಗಿದ್ದ ಅವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ಆಕರ್ಷಕ ಮೈಕಟ್ಟು ಹೊಂದಿದ್ದ ಅವರು ಪುತ್ತೂರು ನಗರಕ್ಕೆ ತನ್ನ ಕಾರಿನಲ್ಲಿ ಬಂದಿದ್ದಾರೆ ಎಂಬ ಸುದ್ದಿ ತಿಳಿದೊಡನೆ ಅವರನ್ನು ಕಾಣಲು ಜನಸಾಮಾನ್ಯರು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಯಾರೂ ಅವರ ಮುಂದೆ ತಲೆಎತ್ತಿ ನಡೆಯುವ ಧೈರ್ಯ ತೋರುತ್ತಿರಲಿಲ್ಲ. ಮನೆಯ ಮೊಗಸಾಲೆಯಲ್ಲಿ ರಾಜಿ ಪಂಚಾಯತಿ ನಡೆಸುವಾಗ ಅಲ್ಲಿದ್ದವರನ್ನು “ಕೂತ್ಕೊಳ್ಳಿ’ ಎಂದರೂ ಕೂಡ ಯಾರೂ ಅವರ ಮುಂದೆ ಕೂರುತ್ತಿರಲಿಲ್ಲ ಎನ್ನಲಾಗಿದೆ.
ಉಲಮಾ ಮತ್ತು ಉಮರಾಗಳನ್ನು ಸಮಾನವಾಗಿ ಗೌರವಿಸುತ್ತಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಸುನ್ನಿ ವಿದ್ವಾಂಸರಾಗಿದ್ದ ಇ.ಕೆ. ಅಬೂಬಕರ್ ಮುಸ್ಲಿಯಾರ್ ಮತ್ತು ಉಳ್ಳಾಲ ತಂಙಳ್ ಅವರು ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭೇಟಿ ನೀಡಿದಾಗಲೆಲ್ಲಾ ಆ ವಿದ್ವಾಂಸರು ಉಳಕೊಳ್ಳಲು ತನ್ನ ಮನೆಯ ಮಾಳಿಗೆಯಲ್ಲಿ ವ್ಯವಸ್ಥೆ ಕಲ್ಪಿಸುತ್ತಿದ್ದರು. ಅದಕ್ಕಾಗಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡುತ್ತಿದ್ದರು.
ದಲಿತರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದ ಅವರು ಹರಿಜನ ಕೇರಿ ನಿರ್ಮಿಸಿ ನೂರಾರು ದಲಿತರಿಗೆ ಮನೆ ಕಟ್ಟಿಸಿಕೊಳ್ಳಲು ಸಹಾಯ ಮಾಡಿದ್ದರು. ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಕುಟುಂಬದ ಸದಸ್ಯರ ಮದುವೆಯನ್ನು ಸ್ವತಃ ತನ್ನ ಮನೆಯಲ್ಲೇ ಮಾಡಿಸುತ್ತಿದ್ದರು. ನಿರ್ದಿಷ್ಟ ಜಾತಿಗೆ ಸೇರಿದ ಹೊಟೇಲಿನಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ್ದನ್ನು ತಿಳಿದುಕೊಂಡ ಅವರು ರಾತ್ರಿ ಹಗಲಾಗುವ ಮುನ್ನ ನೂರಾರು ದಲಿತರನ್ನು ಒಗ್ಗೂಡಿಸಿ ಆ ಹೊಟೇಲಿನ ಮುಂದೆ ಪ್ರತಿಭಟನೆ ನಡೆಸಿದ್ದರಲ್ಲದೆ ಗೆರಟೆಯ ಬದಲು ಲೋಟದಲ್ಲಿ ಚಹಾ ಸಿಗುವಂತೆ ಮಾಡಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಹೊಟೇಲಿನ ಒಳಗೆ ಕರೆದೊಯ್ದು ಚಹಾ ಕುಡಿಯುವಂತೆ ಮಾಡಿದ್ದರು.
ತಾಲೀಮು ಕಲೆಗೂ ಅಪಾರ ಪ್ರೋತ್ಸಾಹ ನೀಡಿದ್ದ ಅವರು ನೇರ ನಡೆನುಡಿಗೆ ಹೆಸರಾಗಿದ್ದರು. ಯಾರಿಗೂ ಅವರು ತಗ್ಗಿ ಬಗ್ಗಿ ನಡೆದ ಉದಾಹರಣೆಯಿಲ್ಲ. ಅನ್ಯಾಯ, ಅಕ್ರಮವನ್ನು ಎಂದಿಗೂ ಸಹಿಸುತ್ತಿರಲಿಲ್ಲ. ತಪ್ಪು ಯಾರೇ ಮಾಡಿದರೂ ಮುಲಾಜಿಲ್ಲದೆ ಹೇಳುತ್ತಿದ್ದರು. ಯಾರದೇ ಆಮಿಷಕ್ಕೂ ಒಳಗಾಗುತ್ತಿರಲಿಲ್ಲ. ಹಾಗಾಗಿ ಅವರನ್ನು ಹಲವರು ಒಳಗಿಂದೊಳಗೆ ದ್ವೇಷಿಸುತ್ತಿದ್ದರು ಎನ್ನಲಾಗಿದೆ. ಹಲ್ಯಾರ್ ಇಬ್ರಾಹೀಂ ಹಾಜಿ ಅವರನ್ನು ನೇರವಾಗಿ ಎದುರಿಸಲಾಗದ ಕೆಲವರು ಅವರ ಕೊಲೆಗೂ ಸಂಚು ರೂಪಿಸಿದ, ರಾಜಿ ಪಂಚಾಯತಿಯ ಹೆಸರಿನಲ್ಲಿ ಕರೆದೊಯ್ದು ಕೊಲೆಗೆ ಯತ್ನಿಸಿದ ಕೃತ್ಯವೂ ನಡೆದಿತ್ತು. ಆದರೆ ಅದರಿಂದ ಪಾರಾಗಿ ಬಂದ ಬಳಿಕವೂ ಅವರು ಧೃತಿಗೆಡುತ್ತಿರಲಿಲ್ಲ. ತನ್ನ ಕೊನೆಯ ಉಸಿರು ಎಳೆಯುವವರೆಗೂ ಅವರ ನಡೆನುಡಿಯು ರಾಜಗಾಂಭೀರ್ಯದಿಂದಲೇ ಕೂಡಿತ್ತು.
ಪಿಡಬ್ಲ್ಯುಡಿ ಗುತ್ತಿಗೆದಾರರಾಗಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಉಪ್ಪಿನಂಗಡಿ ಸರಕಾರಿ ಕಾಲೇಜು, ಪುತ್ತೂರು ಸರಕಾರಿ ಆಸ್ಪತ್ರೆ, ಆತೂರು ಸಮೀಪದ ಕೊಯ್ಲ ಆಸ್ಪತ್ರೆಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ನಿರ್ಮಾಣದ ಗುತ್ತಿಗೆಯನ್ನು ಸ್ವತಃ ವಹಿಸಿಕೊಂಡಿದ್ದರು. ಅದಲ್ಲದೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿವರೆಗಿನ ರಸ್ತೆ, ಸೇತುವೆ, ಕಾಲು ಸಂಕಗಳು ಇತ್ಯಾದಿಗಳ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದರು. ರಾಮಕುಂಜ ಸರಕಾರಿ ಶಾಲೆಯ ನಿರ್ಮಾಣದ ವೆಚ್ಚದ ಪೈಕಿ ಅರ್ಧದಷ್ಟು ಹಣವನ್ನು ಸ್ವತಃ ಭರಿಸಿದ್ದರು.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಫರಂಗಿಪೇಟೆ ಹಸನಬ್ಬ ಒಡೆಯರ್, ಕೆ.ಕೆ. ಶೆಟ್ಟಿ, ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಜೊತೆ ಹಲ್ಯಾರ್ ಇಬ್ರಾಹೀಂ ಹಾಜಿ ಒಡನಾಟವಿಟ್ಟುಕೊಂಡಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮತ್ತಿತರ ಪ್ರಮುಖ ರಾಜಕಾರಣಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲಾ ಹಲ್ಯಾರ್ ಇಬ್ರಾಹೀಂ ಹಾಜಿ ಅವರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸುತ್ತಿದ್ದರು ಎಂಬುದಾಗಿ ಅವರ ಒಡನಾಡಿಗಳು ಹೇಳಿಕೊಳ್ಳುತ್ತಿದ್ದುದನ್ನು ಅವರ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ನೆನಪಿಸುತ್ತಾರೆ. ಕಾಂಗ್ರೆಸ್ ಸೇವಾದಳದಲ್ಲೂ ಸಕ್ರಿಯರಾಗಿದ್ದ ಹಲ್ಯಾರ್ ಇಬ್ರಾಹೀಂ ಹಾಜಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದರು. ಸ್ವಾತಂತ್ರ್ಯ ಲಭಿಸಿದ ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಬೋರ್ಡ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಮಕುಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ 15 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಅಧ್ಯಕ್ಷರಾಗಿದ್ದಾಗಲೇ ಅಂದರೆ 1969ರ ಜನವರಿ 12ರಂದು ಅವರು ಕೊನೆಯುಸಿರೆಳೆದರು.
ರಾಮಕುಂಜ ಗ್ರಾಮದಲ್ಲಿ ಕೃಷಿಕರ, ರೈತರ ಸಂಖ್ಯೆಯೂ ಸಾಕಷ್ಟಿತ್ತು. ಹಾಗಾಗಿ ಹಸುಗಳೂ ಅಧಿಕ ಸಂಖ್ಯೆಯಲ್ಲಿತ್ತು. ಆದರೆ ಈ ಹಸುವಿನ ಹಾಲನ್ನು ಖರೀದಿಸುವ ಗ್ರಾಹಕರ ಕೊರತೆಯಿತ್ತು. ಅದನ್ನು ಮನಗಂಡ ಹಲ್ಯಾರ್ ಇಬ್ರಾಹೀಂ ಹಾಜಿ 1967ರಲ್ಲಿ “ಹಾಲು ಉತ್ಪಾದಕರ ಸಹಕಾರಿ ಸಂಘ”ವನ್ನು ಸ್ಥಾಪಿಸಿದ್ದರು. ಅದರ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಕೊನೆಯ ಉಸಿರೆಳೆಯುವವರೆಗೂ ಅದರ ಅಧ್ಯಕ್ಷರಾಗಿದ್ದರು.
ಹಲ್ಯಾರ್ ಇಬ್ರಾಹೀಂ ಹಾಜಿ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಮಾತ್ರವಲ್ಲ, ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದರು. ಆತೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಐವರನ್ನು ಮದುವೆಯಾಗಿದ್ದ ಅಲಿಯಾರ್ ಇಬ್ರಾಹೀಂ ಹಾಜಿ ಅವರಿಗೆ ಪೊಡಿಕುಂಞಿ ಯಾನೆ ಇಸ್ಮಾಯೀಲ್, ಅಹ್ಮದ್ ಪುತ್ತು, ಅಬ್ದುಲ್ಲಾ, ಅಬ್ಬಾಸ್, ಝಕರಿಯಾ, ಖಾಸಿಮ್, ಆದಂ, ಮುಹಮ್ಮದ್ ಅಲಿ ಹೀಗೆ 8 ಮಂದಿ ಪುತ್ರರು ಮತ್ತು ಆಯಿಶಾ, ಅಲಿಮಮ್ಮ, ಝೈನಬಾ, ಝಹುರಾ, ನಫೀಸಾ ಹೀಗೆ 5 ಮಂದಿ ಪುತ್ರಿಯರಿದ್ದರು. ಆ ಪೈಕಿ ಪುತ್ತೂರು ನಗರಸಭೆಯ ಸದಸ್ಯರಾಗಿದ್ದ ಮುಹಮ್ಮದ್ ಅಲಿ ಸಹಿತ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಬದುಕುಳಿದಿದ್ದಾರೆ.

ಮಾಹಿತಿ ಸಂಗ್ರಹ ಮತ್ತು ಲೇಖನ : ಇಸ್ಮತ್ ಪಜೀರ್

Scroll to Top