M.B. Muhammad Patel
1929 – 2004
M.B. Muhammad, often called MB or MB Patel by villagers, was a respected figure who significantly elevated the stature of the Aivattoklu family in Sulya taluk. Born around 1929 to the Mata Hammabba (Mata Monaka)-Aisamma couple of Uppinangady, M.B. Muhammad, also known affectionately as “Cherion” (meaning younger in Beary language), matriculated before marrying Asiamma, his cousin and the daughter of Mammali Haji of the Ivattoklu Patel family.
Professionally, he was an agriculturist and a Public Works Department contractor, known for his insistence on quality and justice. He had a strict personality and a commanding presence, often speaking in a raised, loud voice. As the founder president of the Karikala Government Primary School Development Committee (1959-61), he emphasized education, a commitment recognized in the school’s golden jubilee commemorative issue.
M.B. Patel held various roles in local governance, including Panja Gram Panchayat member, President, and Mandal Panchayat member of Sulya Taluk. His notable achievements included constructing the Janata Colony with 25 houses for Dalit and Muslim families in Ivattoklu and the Nada office building in Panja Hobli, which remains a significant landmark.
A staunch Congress party worker, he was instrumental in establishing and nurturing the party in Panja during the 1980s, advocating for value-based politics and opposing corruption. His family remembers him as a hard worker and somewhat stubborn, qualities that helped him succeed in his endeavors.
He served as the secretary of the historic Ivattoklu-Enmuru Dargah and Juma Masjid, where he was known for his honesty in accounting and his efforts in mosque development. As Vice Chairman of the Masjid Renovation Committee, he oversaw the entire renovation process.
M.B. Muhammad Patel maintained close relations with Hindu, Muslim, and Christian communities in Aivathoklu, Panja, and Kootkunja. He was known for his fairness and ability to resolve disputes without bias, gaining a reputation for integrity and justice. His contemporaries in various communities, including Dalit, Okkaliga Gowda, and Bunts, often remarked that “MB Patler” was a reliable figure who could be counted on in times of need.
In 1994, he became immobile due to high blood pressure but remained optimistic and enthusiastic about life. He and his wife undertook the holy Hajj in 2004, during which he performed Tawaf in Makkah and Madinah. He passed away from a heart attack on January 30, 2004, after performing morning prayers in his room in Makkah on the day of Arafah, with his funeral held there.
Before leaving for Hajj, he hosted a “Maulid” recitation program at his home for friends and well-wishers from the Hindu-Christian community of Ivattoklu-Panja, who fondly bid him farewell.
ಐವತ್ತೊಕ್ಲು ಮನೆತನದ ಹಿರಿಮೆ ಹೆಚ್ಚಿಸಿದ್ದ ಎಂ.ಬಿ. ಮುಹಮ್ಮದ್ ಪಟೇಲ್
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಮಠ ಬಂಡಸಾಲೆ ಮನೆತನದಲ್ಲಿ ಹುಟ್ಟಿಬೆಳೆದ ಎಂ.ಬಿ. ಮುಹಮ್ಮದ್ ಅವರು ಸುಳ್ಯ ತಾಲೂಕಿನ ಐವತ್ತೊಕ್ಲು ಮನೆತನದ ಹಿರಿಮೆ ಹೆಚ್ಚಿಸಿದ್ದ ಕೀರ್ತಿಗೆ ಪಾತ್ರರಾಗಿದ್ದಾರೆ. ಮಠ ಬಂಡಸಾಲೆ ಮುಹಮ್ಮದ್ (ಎಂ.ಬಿ. ಮುಹಮ್ಮದ್) ಅವರನ್ನು ಊರವರು ಗೌರವದಿಂದ ಕರೆಯುತ್ತಿದ್ದ ಎಂ.ಬಿ. ಪಟೇಲ್ ಎಂಬ ಹೆಸರೇ ಅವರ ಹಿರಿಮೆಗೆ ಸಾಕ್ಷಿಯಾಗಿತ್ತು. ಆದರೆ ಹಿರಿಯರ ಕಾಲದಿಂದಲೇ ಎಂ.ಬಿ. ಮುಹಮ್ಮದ್ ಅಥವಾ ಎಂ.ಬಿ. ಪಟೇಲ್ ಅವರನ್ನು ಚೆರಿಯೋನ್ ಎಂದು ಕರೆಯಲಾಗುತ್ತಿತ್ತು. ಚೆರಿಯೋನ್ ಅಂದರೆ ಬ್ಯಾರಿ ಭಾಷೆಯಲ್ಲಿ ಕಿರಿಯವ ಎಂದರ್ಥ. ತಂದೆ-ತಾಯಿಯ ಕೊನೆಯ ಮಗನಿಗೆ ಮನೆಮಂದಿ ಪ್ರೀತಿಯಿಂದ “ಚೆರಿಯೆ ಮೋನು” (ಕಿರಿಯ ಮಗ) ಎಂದು ಕರೆಯುತ್ತಾರೆ. ಮುಂದೆ ಅದು “ಚೆರಿಯೋನು” ಆಗಿ ಮಾರ್ಪಾಡು ಆಗುತ್ತದೆ. ಮನೆ ಮಂದಿಯ “ಚೆರಿಯೆ ಮೋನು” ಊರವರಿಗೆ ಮಾತ್ರವಲ್ಲ, ಮನೆಮಂದಿಗೂ “ಚೆರಿಯೋನು” ಆಗಿ ಬಿಡುತ್ತದೆ.
ಹೀಗೆ ಉಪ್ಪಿನಂಗಡಿ ಮಠದ “ಚೆರಿಯೆ ಮೋನು” ಅವರು ಐವತ್ತೊಕ್ಲು ಪಟೇಲ್ ಮನೆತನದ ಹೆಣ್ಣನ್ನು ಮದುವೆ ಆಗುವ ಮೂಲಕ ಆ ಮನೆತನದ ಭಾಗವಾಗಿ, ಅದರ ಹಿರಿಮೆ ಹೆಚ್ಚಿಸಿ ಎಂ.ಬಿ. ಪಟೇಲ್ ಆಗಿ ಗುರುತಿಸಲ್ಪಟ್ಟಿರುವುದು ಸಣ್ಣ ವಿಷಯವಲ್ಲ.
ಉಪ್ಪಿನಂಗಡಿಯ ಮಠ ಹಮ್ಮಬ್ಬ (ಮಠ ಮೋನಾಕ)-ಐಸಮ್ಮ ದಂಪತಿಯ ಪುತ್ರನಾಗಿ ಅಂದಾಜು 1929ರಲ್ಲಿ ಜನಿಸಿದ ಎಂ.ಬಿ. ಮುಹಮ್ಮದ್ ಮೆಟ್ರಿಕ್ಯುಲೇಷನ್ ಕಲಿತಿದ್ದರು. ಸುಳ್ಯ ತಾಲೂಕಿನ ಐವತ್ತೊಕ್ಲು ಪಟೇಲ್ ಮನೆತನದ ಮಮ್ಮಾಲಿ ಹಾಜಿಯ ಪುತ್ರಿ ಆಸಿಯಮ್ಮ ಅವರನ್ನು (ಸೋದರ ಸಂಬಂಧಿ) ವಿವಾಹವಾದ ಬಳಿಕ ಐವತ್ತೊಕ್ಲುವಿನಲ್ಲಿ ವಾಸ್ತವ್ಯ ಹೂಡಲು ಆರಂಭಿಸಿದರು.
ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು ಕಟ್ಟುನಿಟ್ಟಿನ ವ್ಯಕ್ತಿತ್ವ ಹೊಂದಿದ್ದರು. ಶಿಸ್ತಿನ ಸಿಪಾಯಿಯಾಗಿದ್ದರು. ನ್ಯಾಯ ಪರವಾಗಿದ್ದರು. ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದ ಜನರ ಪರ ಅಪಾರ ಒಲವು ಹೊಂದಿದ್ದರು. ಏರು ಧ್ವನಿಯಲ್ಲಿ ಮಾತನಾಡುವ ಅಭ್ಯಾಸವಿದ್ದ ಇವರ ಧ್ವನಿ ಗಟ್ಟಿಯಾಗಿತ್ತು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿದ್ದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಕಳಪೆ ಕಾಮಗಾರಿಯನ್ನು ಎಂದಿಗೂ ಸಹಿಸುತ್ತಿರಲಿಲ್ಲ. ತನ್ನ ಪತ್ನಿಯ ದೊಡ್ಡಪ್ಪನ ಪುತ್ರಿ ಕುಂಞಾಲಿಯಮ್ಮ ಅವರ ಪತಿ ಎಂ.ಬಿ. ಉಮರಬ್ಬ ಅವರು ಐವತ್ತೊಕ್ಲು ಗ್ರಾಮದಲ್ಲಿ ತನ್ನ ಮನೆಯ ಸಮೀಪ ದಾನ ಮಾಡಿದ್ದ ಜಾಗದಲ್ಲಿ ನಿರ್ಮಿಸಲ್ಪಟ್ಟಿದ್ದ ಕರಿಕಳ ಸರಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ (1959-61) ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂತ್ಕುಂಜ ಗ್ರಾಮದಲ್ಲಿ 1966ರಲ್ಲಿ ಸ್ಥಾಪಿಸಲ್ಪಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ (1966-67) ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ಅವರ ಸೇವೆಯನ್ನು ಕರಿಕಳ ಸರಕಾರಿ ಶಾಲೆಯ ಸುವರ್ಣ ಮಹೋತ್ಸವ ಸಂದರ್ಭ ಹೊರತರಲಾದ ಸ್ಮರಣ ಸಂಚಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಮಂಡಲ ಪಂಚಾಯತ್ ಸದಸ್ಯರಾಗಿ ಅನೇಕ ಅಭಿವೃದ್ಧಿ ಕೆಲಸ-ಕಾರ್ಯಗಳನ್ನು ಮಾಡಿಸಿದ್ದ ಹೆಗ್ಗಳಿಕೆ ಎಂ.ಬಿ.ಪಟೇಲ್ ಅವರದ್ದಾಗಿದೆ. ಐವತ್ತೊಕ್ಲುನಲ್ಲಿ ದಲಿತ ಮತ್ತು ಮುಸ್ಲಿಂ ಕುಟುಂಬಗಳಿಗೆ ಜನತಾ ಕಾಲನಿ ನಿರ್ಮಿಸಿ 25 ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಪಂಜ ಹೋಬಳಿಯ ನಾಡ ಕಚೇರಿ ಕಟ್ಟಡ ನಿರ್ಮಾಣವು ಎಂ.ಬಿ. ಪಟೇಲ್ ಅವರ ಸಾಧನೆಯ ಮೈಲುಗಲ್ಲಾಗಿತ್ತು. ಹೋಬಳಿಯ ಹಿರಿಯರು ಈಗಲೂ ಇದನ್ನು ಆಗಾಗ ಸ್ಮರಿಸಿಕೊಳ್ಳುವುದುಂಟು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಅವರು 80ರ ದಶಕದಲ್ಲಿ ಪಂಜದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಓರ್ವರಾಗಿದ್ದಾರೆ. ಮೌಲ್ಯಧಾರಿತ ರಾಜಕಾರಣಕ್ಕೆ ಒತ್ತುಕೊಟ್ಟಿದ್ದರು. ಭ್ರಷ್ಟಾಚಾರದ ಕಡು ವಿರೋಧಿಯಾಗಿದ್ದರು. ಶ್ರಮಜೀವಿಯಾಗಿದ್ದ ಅವರು ಸ್ವಲ್ಪ ಮಟ್ಟಿಗೆ ಹಠವಾದಿಯೂ ಆಗಿದ್ದರು ಎಂದು ಅವರ ಕುಟುಂಬಸ್ಥರು ಅಭಿಪ್ರಾಯಪಡುತ್ತಾರೆ.
ಇತಿಹಾಸ ಪ್ರಸಿದ್ಧವಾದ ಐವತ್ತೊಕ್ಲು-ಎಣ್ಮೂರು ದರ್ಗಾ ಮತ್ತು ಜುಮಾ ಮಸ್ಜಿದ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಲೆಕ್ಕಪತ್ರದಲ್ಲಿ ಪ್ರಾಮಾಣಿಕರಾಗಿದ್ದ ಅವರು ಮಸೀದಿಯ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದರು.
ಈ ಮಸೀದಿಯ ನವೀಕರಣ ಸಮಿತಿಯ ಉಪಾಧ್ಯಕ್ಷರಾಗಿ ಮಸೀದಿ ನವೀಕರಣದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಐವತ್ತೊಕ್ಲು, ಪಂಜ, ಕೂತ್ಕುಂಜ ಪರಿಸರದ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಯಾವುದೇ ಕಲಹ, ಕೌಟುಂಬಿಕ ಮತ್ತು ವ್ಯಾವಹಾರಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ಪಂಚಾಯಿತಿಯನ್ನು ಯಾರಿಗೂ ಅನ್ಯಾಯವಾಗದಂತೆ ನ್ಯಾಯ ದೊರಕಿಸಿಕೊಡುವ ಚಾಕಚಕ್ಯತೆ ಹೊಂದಿದ್ದರು. ಸತ್ಯ-ನ್ಯಾಯದ ವಿಚಾರದಲ್ಲಿ ಎಂದಿಗೂ ಯಾರೊಂದಿಗೂ ರಾಜಿ ಮಾಡಿಕೊಳ್ಳದ ಅವರ ಬಳಿ ಸಮಸ್ಯೆ ಹೇಳಿಕೊಂಡು ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಪಂಚಾಯತಿಯ ಸಂದರ್ಭ ಅವರೊಂದು ತೀರ್ಮಾನಕ್ಕೆ ಬಂದರೆ ಅದನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ದಲಿತ, ಒಕ್ಕಲಿಗ ಗೌಡ, ಬಂಟ ಸಮುದಾಯದವರ ಪಾಲಿಗೆ “ಎಂ.ಬಿ. ಪಟ್ಲೆರ್” ಆಗಿದ್ದ ಎಂ.ಬಿ. ಮಹಮ್ಮದ್ ಪಟೇಲ್ ಅವರ ಸಮಕಾಲೀನರು ಏನಾದರು ಘಟನೆ ನಡೆದಾಗಲೆಲ್ಲಾ “ಎಂ.ಬಿ. ಪಟ್ಲೆರ್” ಇರಬೇಕಾಗಿತ್ತು ಎಂದು ಹೇಳುವುದುಂಟು. ಅಷ್ಟರಮಟ್ಟಿಗೆ ಅವರು ಸುಳ್ಯ ತಾಲೂಕಿನಾದ್ಯಂತ ತನ್ನ ವರ್ಛಸ್ಸು ಬೆಳೆಸಿಕೊಂಡಿದ್ದರು.
1994ರಲ್ಲಿ ರಕ್ತದೊತ್ತಡಕ್ಕೆ ಒಳಗಾಗಿ ಅನಾರೋಗ್ಯಕ್ಕೀಡಾದ ಪರಿಣಾಮ ಬದುಕಿನ ಕೊನೆಯ ಹತ್ತು ವರ್ಷ ಒಂದಷ್ಟು ಚಲನಾ ರಹಿತರಾಗಿದ್ದರು. ಆದರೂ ಅವರ ಜೀವನೋತ್ಸಾಹ ಬತ್ತಿರಲಿಲ್ಲ. ಅನಾರೋಗ್ಯದಲ್ಲೂ ಆಶಾವಾದಿಯಂತೆ ಅವರು ಬದುಕಿದ್ದರು.
ಒಬ್ಬರು ಪುತ್ರಿ ಮತ್ತು ಎಂಟು ಮಂದಿ ಪುತ್ರರನ್ನು ಒಳಗೊಂಡ ತುಂಬು ಕುಟುಂಬದ ಎಂ.ಬಿ. ಪಟೇಲ್ 2004ರಲ್ಲಿ ಪತ್ನಿ ಸಮೇತರಾಗಿ ಪವಿತ್ರ ಹಜ್ ಯಾತ್ರೆ ಕೈಗೊಂಡಿದ್ದರು. 28 ದಿನಗಳ ಯಾತ್ರೆಯಲ್ಲಿ ಪವಿತ್ರ ಮಕ್ಕಾ ಹಾಗೂ ಮದೀನಾದಲ್ಲಿ ತವಾಫ್ ನಡೆಸಿದ ಅವರು ಅರಫಾ ದಿನ ಅಂದರೆ 2004ರ ಜನವರಿ 30ರಂದು ಮಕ್ಕಾದಲ್ಲಿ ತಾನಿದ್ದ ಕೊಠಡಿಯಲ್ಲಿ ಮುಂಜಾವ ನಮಾರ್ ನಿರ್ವಹಿಸಿದ ಬಳಿಕ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅಲ್ಲೇ ಅವರ ದಫನ ಕಾರ್ಯವನ್ನು ನೆರವೇರಿಸಲಾಯಿತು.
ಹಜ್ ಯಾತ್ರೆ ಹೊರಡುವ ಮುನ್ನ ತನ್ನ ಮನೆಯಲ್ಲಿ ನಡೆಸಿದ್ದ “ಮೌಲಿದ್” ಪಾರಾಯಣ ಕಾರ್ಯಕ್ರಮಕ್ಕೆ ಐವತ್ತೊಕ್ಲು- ಪಂಜ ಭಾಗದ ಹಿಂದೂ-ಕ್ರೈಸ್ತ ಸಮುದಾಯದ ಸ್ನೇಹಿತರಿಗೆ, ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಬಹುತೇಕ ಮಂದಿ ಎ.ಬಿ. ಪಟೇಲ್ ಅವರ ಆಹ್ವಾನ ಸ್ವೀಕರಿಸಿ ಆತ್ಮೀಯವಾಗಿ ಹಜ್ ಯಾತ್ರೆಗೆ ಬೀಳ್ಕೊಟ್ಟಿರುವುದನ್ನು ಅವರ ಕುಟುಂಬದ ಸದಸ್ಯರು ನೆನಪಿಸುತ್ತಾರೆ.
