ಮರ್ಹೂಂ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ (ಖ.ಸಿ)

ಲೇ: ತ್ವಬೀಬ್ ಉಬೈದುಲ್ಲಾ ಅಝ್ಹರಿ ಪಾಂಡವರಕಲ್ಲು
+91 96114 52285
ಲಕ್ಷ ದ್ವೀಪ ಸಮೂಹದ ಸಣ್ಣ ದ್ವೀಪ ಕಿಲ್ತಾನ್. ಗಾತ್ರ, ಜನಸಂಖ್ಯೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಉಳಿದ ದ್ವೀಪಗಳಿಗಿಂತ ಹಿಂದುಳಿದ ದ್ವೀಪಗಳಲ್ಲೊಂದು. ಹಸಿರು ಕೊಡೆಗಳನ್ನು ಬಿಡಿಸಿಕೊಂಡು ನಿಂತಿರುವ ತೆಂಗುಗಳ ತೋಪು. ದ್ವೀಪದ ಸುತ್ತ ಬಿಳಿ ಹರಡಿದ ಮರಳ ತೀರ. ಸುತ್ತಲೂ ಕಣ್ಣೆತ್ತದ ದೂರಕ್ಕೆ ನೀಲ ಸಮುದ್ರ. ಹಳ್ಳಿಯ ವಾತಾವರಣದ ಪ್ರಶಾಂತತೆ. ಕಿಲ್ತಾನ್ ದ್ವೀಪವು ತುಂಬಿ ನಿಂತಿರುವುದು ಇಲ್ಲಿ ಜೀವಿಸಿದ್ದ ಮಹಾನ್ ವ್ಯಕ್ತಿಗಳು ಹಾಗೂ ಅವರ ಜೀವನ ಮೌಲ್ಯಗಳು ಮತ್ತು ಸಾಮಾಜಿಕ, ಬೌದ್ಧಿಕ ಶ್ರೇಷ್ಠತೆಗಳಿಂದಾಗಿದೆ. ಇಸ್ಲಾಮೀ ವಿಶ್ವಾಸಾಚಾರ, ಕರ್ಮ, ಧಾರ್ಮಿಕ ಶಿಕ್ಷಣಗಳಿಗೆಲ್ಲಾ ಬಹಳ ಪರಿಗಣನೆ ನೀಡುತ್ತಾ ಬಂದ ದ್ವೀಪವಿದು. ದಕ್ಷಿಣ ಭಾರತದ ಮಕ್ಕಾ ಎಂದು ಖ್ಯಾತಿ ಹೊಂದಿದ್ದ ಪೊನ್ನಾನಿಯ ಪಡಿಯಚ್ಚಿನಂತಿದ್ದು ಕಿರಿಪೊನ್ನಾನಿ ಎಂದು ಕರೆಯಲ್ಪಡುತ್ತಿರುವ ದ್ವೀಪ. ಪೊನ್ನಾನಿಗೆ ಹೋಗಿ ದೀನ್ ಕಲಿತು ಬಂದ ಆಲಿಮರಿಂದ ಧಾರ್ಮಿಕ ಶಿಕ್ಷಣದ ಆಧಾರಕೇಂದ್ರಗಳಾದ ಪಳ್ಳಿದರ್ಸ್ ಗಳನ್ನು ಹಿಂದಿನ ಕಾಲದಿಂದಲೂ ಸಜೀವಗೊಳಿಸಿದ್ದರು. ನೆರೆಯ ದ್ವೀಪಗಳಿಂದ ಓದಿ ಕಲಿಯಲು ವಿದ್ಯಾರ್ಥಿಗಳು ಬರುತ್ತಿದ್ದುದು ಇಲ್ಲಿಗಾಗಿತ್ತು. ಕವರತ್ತಿ ದ್ವೀಪದ ತಂಙಳ್ ಕುಟುಂಬದವರು ಕೂಡಾ ಕಲಿತದ್ದು ಇಲ್ಲಿ.
ಧರ್ಮಶಿಕ್ಷಣ ಮಾತ್ರವಲ್ಲ ನಾವಿಕ ವಿದ್ಯೆ ಕಲಿಸುವ ಪದ್ಧತಿಯೂ ಇಲ್ಲಿತ್ತು. ಜನರನ್ನು ಪ್ರಜ್ಞಾವಂತರಾಗಿಸುವ ಅರಬಿ ಹಾಗೂ ಅರಬಿ ಮಲಯಾಳಂ ಪದ್ಯಗಳು ಇಲ್ಲಿ ಧಾರಾಳ ರಚಿತವಾಗಿವೆ. ಇಲ್ಲಿನ ಹಿರಿಯರು ನಾವಿಕ ವಿದ್ಯೆ, ಹಾಯ್ ದೋಣಿ ನಿರ್ಮಾಣದಲ್ಲಿ ನಿಪುಣರಾಗಿದ್ದರು. ಗಾಳಿ, ಮಳೆ, ತೆರೆಮಾಲೆಗಳ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ದೋಣಿ ಸಂಚಾರ ಮಾಡುವ ಸಾಹಸಿ ಯಾತ್ರೆಯಲ್ಲೂ ಈ ದ್ವೀಪದವರು ಹೆಸರುವಾಸಿಯಾಗಿದ್ದರು. ದ್ವೀಪ ಸಮೂಹದಲ್ಲೂ ದ್ವೀಪಗಳ ಹೊರಗಡೆಯೂ ಪ್ರಸಿದ್ಧಿ ಪಡೆದಿದ್ದ ಅನೇಕ ಪ್ರಕಾಂಡ ವಿದ್ವಾಂಸರು ಇಲ್ಲಿದ್ದರು.
ಕರುಡಿಯೋಡ ಮೂಸಾ ಮುಸ್ಲಿಯಾರ್ (ಹಿ. 1190-1251), ಇಡಯಾಕ್ಕಲ್ ಬಮ್ಮಾಮಿ ಮುಸ್ಲಿಯಾರ್ (1200-1280), ಸಾಲಿಯೋಡ ಅಡಿಯಾನ್ ಮುಸ್ಲಿಯಾರ್, ಮರ್ವನಿ ತ್ವರೀಖತಿನ ಶೈಖ್ ಆಗಿದ್ದ, ಮಕ್ಕಾದಲ್ಲಿ ವಫಾತ್ ಆಗಿ ಅಲ್ಲೇ ದಫನಗೊಂಡ ವಲಿಯ ಇಲ್ಲಂ ಅಹ್ಮದ್ ಮುಸ್ಲಿಯಾರ್ (1200-1299) ಚಂದಿರೂರ್ ಎಂಬಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಚುಳತ್ತಿಯೋಡ ಅಹ್ಮದ್ ಮುಸ್ಲಿಯಾರ್, ಮೈದಾನಿಯೋಡ ಯೂಸುಫ್ ಮುಸ್ಲಿಯಾರ್, ಬಿರಿಯಂ ತಿತ್ತಿಯೋಡ ಖಾಸಿಮ್ ಮುಸ್ಲಿಯಾರ್ (1266-1340), ತೆಕ್ಕಿಲ ಇಲ್ಲಂ ತಾಜ್ ಮುಹಮ್ಮದ್ ಮುಸ್ಲಿಯಾರ್ ಎಂಬ ಬೀಚ್ಚಿಯಕ್ಕೋಯ (ಮರಣ 1972), ಬಮ್ಮಾತಿಯೋಡ ಆಟ್ತಕಿಡಾವ್ ಮುಸ್ಲಿಯಾರ್ (ಮರಣ 1983), ಮೇಲಾಪುರ ಕಾದ್ಯ ಮುಸ್ಲಿಯಾರ್ (1996), ಚಾಡಿಪುö್ಪರ ಕೋಯಕುಂಞಿ ಮುಸ್ಲಿಯಾರ್ (ಮರಣ 1421), ಕುಂಬಪುರಂ ಸಿರಾಜ್ ಕೋಯ ಮುಸ್ಲಿಯಾರ್ ( 1914-2004), ಕುಂಞಾಲಿಕ್ಕಲ್ ಅಲಿ ಮುಹಮ್ಮದ್ ಮುಸ್ಲಿಯಾರ್ ( 1217- 1299) ಮುಂತಾದ ವಿದ್ವಾಂಸರು ಇಲ್ಲಿ ಆಗಿ ಹೋಗಿದ್ದಾರೆ. ಇಂತಹ ಉಲಮಾಗಳ ನಡುವೆ ಪ್ರಜ್ವಲಿಸಿದ್ದ ಬೆಳ್ಳಿತಾರೆಯಾಗಿದ್ದರು ಗುಲಾಮ್ ಮುಹಮ್ಮದ್ ಅಹ್ಮದ್ ನಕ್ಷ ಬಂದೀ ಎಂಬ ಮಹಾನುಭಾವರಾದ ವಿದ್ವಾಂಸರು. ಇವರು ಪೊನ್ನಾನಿಯಲ್ಲಿ ಓದಿ ಅಪಾರ ಜ್ಞಾನ ಸಂಪತ್ತು ಹೊಂದಿದ್ದರು. ಬೇರೆ ಅನೇಕ ದರ್ಸ್ ಗಳಲ್ಲೂ ಓದಿದ್ದರು. ಕಣ್ಣೂರಿನ ನುತ್ತೇರಿ ಕುಞ್ಞಹ್ಮದ್ ಇಬ್ನು ಸೂಫಿ ಎಂಬ ಸಂತರಿಂದ ನಕ್ಷ ಬಂದೀ ತ್ವರೀಖತ್ ಸ್ವೀಕರಿಸಿದ್ದರು. ಹಿಜ್‌ರಾ 1290 ರಲ್ಲಿ ಮದೀನಾ ಮುನವ್ವರದಲ್ಲಿ ಸಯ್ಯಿದ್ ಮುಹಮ್ಮದ್ ಇಬ್ನು ಸಯ್ಯಿದ್ ಅಹ್ಮದುಲ್ ಮದನಿಯವರಿಂದ ದಲಾಇಲುಲ್ ಖೈರಾತ್‌ನ ಇಜಾಝತ್ ಪಡೆದುಕೊಂಡಿದ್ದರು. ಎಲ್ಲಾ ನೆಲೆಯಲ್ಲೂ ಜ್ಞಾನ ಹಾಗೂ ಆಧ್ಯಾತ್ಮಿಕ ರಂಗದಲ್ಲಿ ಪೂರ್ಣರಾಗಿದ್ದ ಇವರು ಅಹ್ಮದ್ ನಕ್ಷಬಂದೀ ಎಂದು ಪ್ರಸಿದ್ಧರಾಗಿದ್ದರು. ಸಮುದ್ರದ ನೀರಿನ ಮೇಲೆ ನಡೆದುಕೊಂಡು ಹೋದ ಕರಾಮತ್ ಇವರಿಂದ ನಡೆದಿತ್ತು. ಅತಿಜಾಗ್ರತೆಯ ಜೀವನ, ದೇವಮಾರ್ಗದಲ್ಲಿ ಸಮರ್ಪಣೆ, ಸತತ ದೇವ ಸ್ಮರಣೆಯ ಮೂಲಕ ಆತ್ಮೋನ್ನತಿ ಪಡೆದಿದ್ದ ಮಹಾತ್ಮರು. ಕಿಲ್ತಾನಿನ ತಂಙಳ್ ಎಂದೂ ಅಮ್ಮೇನಿಪ್ಪೋಯವರ್ ಎಂದೂ ಇವರಿಗೆ ಹೆಸರಿತ್ತು. ಅಮೀನಿ ದ್ವೀಪದ ಜುಮಾ ಮಸ್ಜಿದ್ ಅಂಗಳದಲ್ಲಿ ಇವರ ಕಬರ್ ಶರೀಫ್ ಇದೆ. ಇವರು ಅರಬಿಯಲ್ಲಿ ಉತ್ತಮ ಕೈಬರಹ ನೈಪುಣ್ಯ ಹೊಂದಿದ್ದರಲ್ಲದೆ ಅನುಗ್ರಹೀತ ಬರಹಗಾರರೂ, ಕವಿಯೂ ಆಗಿದ್ದರು. ಯೂಸುಫ್ ಕಿಸ್ಸ, ಶರತಮಾಲ, ಕೋಲಸ್ಸಿರಿಮಾಲ, ಸ್ವರ್ಗಮಾಲ ಎಂಬ ಕಾವ್ಯಮಾಲೆಗಳನ್ನು ರಚಿಸಿದ್ದಾರೆ.
ಇಂತಹ ಮಹಾತ್ಮರ ನಾಲ್ಕನೆಯ ತಲೆಮಾರಿನ ಪುತ್ರರಾಗಿದ್ದಾರೆ ಶೈಖುನಾ ಮಿತ್ತಬೈಲು ಅಬ್ದುಲ್ ಜಬ್ಬಾರ್ ಉಸ್ತಾದ್. ಅಹ್ಮದ್ ನಕ್ಷಬಂದಿಯವರ ಪುತ್ರರಾಗಿದ್ದ ಬಿರಿಯಂ ತಿತ್ತಿಯೊಡ ಅಬ್ದುಲ್ಲಾಹ್ ಮುಸ್ಲಿಯಾರ್ ಎಂಬವರ ಪುತ್ರರಾಗಿದ್ದರು ತಾಜ್ ಮುಹಮ್ಮದ್ ಮುಸ್ಲಿಯಾರ್. ಇವರು ಕೂಡಾ ಘನ ವಿದ್ವಾಂಸರೂ ಕವಿಯೂ ಸೂಫಿಯೂ ಆಗಿದ್ದರು. ಬೀಚಿಯಕೋಯ, ವಲಿಯಕೋಯ ಮುಂತಾದ ಹೆಸರುಗಳೂ ಅವರಿಗೆ ಇದ್ದವು. ಮುತ್ತಾತ ಅಹ್ಮದ್ ನಕ್ಷಬಂದಿಯವರ ಪಾವಿತ್ರ್ಯ ಹಾಗೂ ಸ್ವಭಾವ ಮಹಿಮೆಗಳು ಇವರಲ್ಲಿ ಮೇಳೈಸಿದ್ದವು.
ಶಿಕ್ಷಣ:
ಪ್ರಾಥಮಿಕ ಧರ್ಮಶಿಕ್ಷಣದ ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ತಂದೆ ಸಿರಾಜ್ ಕೋಯಾ ಮುಸ್ಲಿಯಾರ್ ಮಗನನ್ನು ಪೊನ್ನಾನಿಯ ದರ್ಸಿಗೆ ಸೇರಿಸಿದರು. ಕೆಲವು ಕಾಲ ತಂದೆಯವರು ಮಗನ ಜೊತೆಗೆ ಅದೇ ದರ್ಸಿನಲ್ಲಿ ನೆಲೆಸಿದರು. ತಂದೆಯವರೂ ಕೂಡಾ ಅಲ್ಲಿ ಕೆಲವು ಕಿತಾಬ್‌ಗಳನ್ನು ಅಲ್ಲಿನ ಪ್ರಗಲ್ಭ ಮುರ‍್ರಿಸರ ಸಹಾಯದಿಂದ ಅಧ್ಯಯನ ನಡೆಸಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದರು. ಜಬ್ಬಾರುಸ್ತಾದರು ಓದಿನಲ್ಲಿ ಬಹಳ ಉತ್ಸಾಹಿತರಾಗಿದ್ದರು. ಉಳಿದ ವಿದ್ಯಾರ್ಥಿಗಳ ಹಾಗೆ ಆಗಾಗ ಊರಿಗೆ ಹೋಗುವ ಪ್ರಶ್ನೆ ಇಲ್ಲದ್ದರಿಂದ ರಜೆಯ ಸಮಯದಲ್ಲೂ ಕಿತಾಬುಗಳ ಅಧ್ಯಯನಕ್ಕೆ ಅವಕಾಶ ಸಿಕ್ಕಿತ್ತು. ವಿದ್ಯಾರ್ಥಿಗಳು ಊರಿಗೆ ಹೋಗಿ ದರ್ಸ್ ಖಾಲಿಯಾಗಿರುತ್ತಿದ್ದ ರಜಾ ಕಾಲದಲ್ಲಿ ಜಬ್ಬಾರುಸ್ತಾದರು ಒಬ್ಬರೇ ಉಳಿದಾಗ ಆ ಸಮಯವನ್ನು ಕೂಡಾ ಓದಿಗೆ ಬಳಸುತ್ತಿದ್ದುದರಿಂದ ಹೆಚ್ಚಿನ ಜ್ಞಾನಾರ್ಜನೆಗೆ ಸಾಧ್ಯವಾಯಿತು. ಉತ್ತಮ ಗಮನ ಹಾಗೂ ತೀವ್ರ ಜ್ಞಾಪಕ ಶಕ್ತಿ ಇದ್ದುದರಿಂದ ಪ್ರತಿಭಾವಂತ ವಿದ್ಯಾರ್ಥಿಯೆನಿಸಲು ಹೆಚ್ಚು ಕಾಲ ಬೇಕಾಗಿರಲಿಲ್ಲ. ಪ್ರಸಿದ್ಧರಾಗಿದ್ದ ಕೋಯಕುಂಞಿ ಮುಸ್ಲಿಯಾರ್ ಅಂದು ಅಲ್ಲಿನ ಮುದರ‍್ರಿಸರಾಗಿದ್ದರು. ಕೆಲವು ವರ್ಷಗಳ ಕಾಲ ದರ್ಸಿನಲ್ಲಿ ಕಲಿತ ಬಳಿಕ ಪೊನ್ನಾನಿಯಲ್ಲಿ ಆಗ ತಾನೇ ಸ್ಥಾಪನೆಯಾದ ಮಊನತುಲ್ ಇಸ್ಲಾಮ್ ಅರಬಿ ಕಾಲೇಜಿನಲ್ಲೂ ವ್ಯಾಸಂಗ ಮಾಡಿದರು. ಕಾಲೇಜಿನ ಉಸ್ತಾದ್‌ಗಳು, ಕೆ.ಕೆ. ಅಬ್ದುಲ್ಲಾಹ್ ಮುಸ್ಲಿಯಾರ್, ಅಲನಲ್ಲೂರ್ ಹಾಜಿ ಉಸ್ತಾದ್, ಎಂ.ಎಂ. ಅಬ್ದುಲ್ಲಾಹ್ ಮುಸ್ಲಿಯಾರ್, ಅಚ್ವಿಪ್ಪರ ಉಸ್ತಾದ್ ಮುಂತಾದವರಾಗಿದ್ದರು. ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್, ನಾಟಿಗ ಮೂಸಾ ಮೌಲವಿ ಮುಂತಾದವರು ಉಸ್ತಾದರ ಸಹಪಾಠಿಗಳು.
ಆಮೇಲೆ ವೆಲ್ಲೂರು ಹಾಗೂ ದಯೂಬಂದ್‌ನಲ್ಲಿ ಪದವಿ ಪಡೆದರು. ಅರಬಿಕ್ , ಉರ್ದು ಭಾಷೆಗಳಲ್ಲಿ ಪ್ರಾವೀಣ್ಯ ಗಳಿಸಿದರು. ಅಸ್ಮಾ, ತಲ್ಸಮಾತ್ ವಿದ್ಯೆಗಳನ್ನು ಕಲಿತಿದ್ದರೂ ಅದರ ಕೆಲಸ ಮಾಡಿರಲಿಲ್ಲ. ಕೆಲವು ರೋಗಿಗಳಿಗೆ ಪಿಂಗಾಣಿ ಪ್ಲೇಟಲ್ಲಿ ಬರೆದು ಕೊಡುವ ಒಂದು ಕ್ರಮವನ್ನು ಮಾತ್ರ ಮಾಡುತ್ತಿದ್ದರು.
ವಿವಾಹ :
ಪದವೀಧರರಾಗಿ ಬಂದಾಗ ಊರವರು ತುಂಬ ಆದರದಿಂದ ಬರಮಾಡಿಕೊಂಡರು. ಊರಿನ ಎಲ್ಲರೂ ಅಪಾರ ಗೌರವ ಕೊಡುತ್ತಿದ್ದರು. ಕೆಲವರು ಅವರಿಗೆ ಹರಕೆ ಕೂಡಾ ಮಾಡುತ್ತಿದ್ದರು.ಅದೇ ಸಂದರ್ಭದಲ್ಲಿ ಕಾಟಾನ್ ಪಳ್ಳಿ ಮುಹಮ್ಮದ್ ಕೋಯಾ ಹಾಗೂ ಬೆಂದಯಿಲ್ಲಂ ಹಬ್‌ಸಾ ಬೀವಿಯವರ ಹಿರಿಯ ಮಗಳಾದ ಸಕೀನಾಬೀವಿಯನ್ನು ಮದುವೆಯಾದರು. ಅದರಲ್ಲಿ ಹನ್ನೆರಡು ಮಕ್ಕಳು ಜನಿಸಿದರು. ಹತ್ತು ಗಂಡು, ಎರಡು ಹೆಣ್ಣು.
ಇರ್ಶಾದ್ ಹುಸೈನ್ ದಾರಿಮಿ, ಹಾಶಿಮ್ ಅರ್ಶದಿ, ಫತ್ಹುಲ್ಲಾಹ್ ದಾರಿಮಿ, ಮುನ್ದಿರ್ ಅರ್ಶದಿ, ಮುಹಮ್ಮದಲಿ ಅರ್ಶದಿ, ಅಹ್ಮದ್ ರಿಳ್ವಾನ್ ಅಝ್ಹರಿ, ಅಬ್ದರ‍್ರಹ್ಮಾನ್ ಅನ್ಸಾರಿ, ಇಬ್ರಾಹೀಮ್ ಅನ್ಸಾರಿ, ಅಬೂಬಕರ್ ಸಿದ್ದೀಖ್, ಅಬ್ದುಲ್ಲಾಹ್ ಎಂಬವರು ಉಸ್ತಾದರ ಹತ್ತು ಗಂಡು ಮಕ್ಕಳು. ನಸೀಬಾ ಮತ್ತು ಫಾತಿಮಾ ಹೆಣ್ಣು ಮಕ್ಕಳು. ಗಂಡು ಮಕ್ಕಳೆಲ್ಲರೂ ಧಾರ್ಮಿಕ ಶಿಕ್ಷಣ ಹಾಗೂ ಧಾರ್ಮಿಕ ಚಟುವಟಿಕಾ ಕ್ಷೇತ್ರದಲ್ಲಿ ಸಕ್ರಿಯರು.
ಉಸ್ತಾದರು 1971 ರಲ್ಲಿ ಮಿತ್ತಬೈಲಿನಲ್ಲಿ ದರ್ಸ್ ಆರಂಭಿಸಿದ್ದರೂ ಕಿಲ್ತಾನ್ ದ್ವೀಪದವರ ಒತ್ತಾಯದ ಮೇರೆಗೆ ಒಮ್ಮೆ ಕಿಲ್ತಾನ್ ದ್ವೀಪದಲ್ಲಿ ದರ್ಸ್ ಆರಂಭಿಸಿದ್ದರು. ಊರವರ ನಡುವೆ ಉಂಟಾದ ಒಂದು ಒಳಜಗಳದ ಕಾರಣದಿಂದ ಅಲ್ಲಿನ ದರ್ಸ್ ಮುಚ್ಚಿದಾಗ ಕೆಲವು ತಿಂಗಳ ಅನಂತರ ಅಗತ್ತಿ ದ್ವೀಪದಲ್ಲಿ ಸ್ವಲ್ಪಕಾಲ ದರ್ಸ್ ನಡೆಸಿದ್ದರು. ಆಮೇಲೆ ಬಂದುದು ಅಡ್ಯಾರ್ ಕಣ್ಣೂರಿಗಾಗಿತ್ತು. ಅಡ್ಯಾರ್ ಕಣ್ಣೂರ್ ಮುಹಮ್ಮದ್ ಹಾಜಿ ಎಂಬ ಸಾತ್ವಿಕ, ಹಿರಿಯ ವಿದ್ವಾಂಸರ ಒತ್ತಾಯದ ಮೇರೆಗೆ ಮತ್ತೆ ಮಿತ್ತಬೈಲಿಗೆ ಆಗಮಿಸಿದ್ದರು.
ಮಿತ್ತಬೈಲಿನಲ್ಲಿ ಓರ್ವ ಮಹಾತ್ಮರ ಎತ್ತರಿಸಲಾದ ಕಬರ್ (ಜಾರಂ) ಇರುವುದರಿಂದ ಸ್ಥಳೀಯವಾಗಿ ಜಾರತ್ತೌಡ ಎಂಬ ಹೆಸರಿತ್ತು. ಅಬ್ಬುವಾಕ ಎಂಬವರ ಒಂದು ಹೊಟೇಲು ಮತ್ತು ಇನ್ನೊಂದು ಅಂಗಡಿ ಮಾತ್ರ ಇದ್ದಿದ್ದ ಅಂದಿನ ಮಿತ್ತಬೈಲು ಒಂದು ಕುಗ್ರಾಮದಂತೆ ಇತ್ತು. ಕಡುಬಡವರಾದ ಮುಸ್ಲಿಮರು. ಬೀಡಿ ಕಟ್ಟಿ ಜೀವಿಸುತ್ತಿದ್ದು ಕಿರುಗುಡಿಸಲುಗಳಲ್ಲಿ ವಾಸ. ದರ್ಸ್, ಮಸ್ಜಿದ್ ಗಳಿಗೆ ಬೇಕಾದ ಮೂಲಭೂತ ಅನುಕೂಲಗಳನ್ನು ಒದಗಿಸಲು ಆರ್ಥಿಕ ತಾಕತ್ತಿಲ್ಲದ ಬಡಜನರು. ಪುಟ್ಟ ಮಸೀದಿ ಕಟ್ಟಡವು ಅರ್ಧ ಹೆಂಚು ಹಾಗೂ ಅರ್ಧ ಮಡಲು ಹಾಕಿದ್ದಾಗಿತ್ತು.ಹಾಗೆ ಆರಂಭವಾದ ದರ್ಸ್ ಕ್ರಮೇಣ ಬೆಳವಣಿಗೆ ಹಾಗೂ ಪ್ರಸಿದ್ಧಿಗೆ ಬರುತ್ತಾ ಇದ್ದಂತೆಯೇ ನಾಡು ಕೂಡಾ ಅಭಿವೃದ್ಧಿಯಾಯಿತು. ಇಂದು ಕಾಣುತ್ತಿರುವ ಭವ್ಯ ಮಸ್ಜಿದ್ ಕಟ್ಟಡ ಹಾಗೂ ಇನ್ನಿತರ ಕಟ್ಟಡಗಳ ಒಂದು ಸುಂದರ ಸಮುಚ್ಚಯವಾಗಿ ಬೆಳೆದು ಬರುವಷ್ಟರಲ್ಲಿ ಮಿತ್ತಬೈಲು ಒಂದು ಸಿಟಿಯಾಗಿ ಮಾರ್ಪಟ್ಟಿತು. ಜಬ್ಬಾರುಸ್ತಾದರು ಮಿತ್ತಬೈಲು ಉಸ್ತಾದರಾಗಿ ಊರವರ , ಪರಿಸರದ ಊರುಗಳ ಸರ್ವಜನರ ಮನದಲ್ಲಿ ವಿರಾಜಮಾನರಾದರು. ಅವರ ಸರ್ವ ಕಾರ್ಯಗಳಿಗೂ ಉಸ್ತಾದರ ಉಪಸ್ಥಿತಿ ಒಂದು ಅಲಂಕಾರದ, ಅಭಿಮಾನದ ವಿಷಯವಾಗಿ ಮಾರ್ಪಟ್ಟಿತು.
ಅವರ ವಿಶೇಷತೆಯೆಂದರೆ ಮರದ ಕೆತ್ತನೆ ಕೆಲಸದಲ್ಲೂ ಅವರು ಪರಿಣತಿ ಹೊಂದಿದ್ದರು ಎಂಬುದು. ಕಿಲ್ತಾನ್ ದ್ವೀಪದ ಜುಮಾ ಮಸ್ಜಿದ್ ಒಳಗಡೆ ಮರದ ಧ್ವಾರಬಂಧದಲ್ಲಿ ಅವರು ಕೆತ್ತಿದ್ದ ಸುಂದರ ಕೆತ್ತನೆಯ ಕುಸುರಿಕಲೆಯನ್ನು ಈಗಲೂ ಕಾಣಬಹುದು. ಉತ್ತಮ ಕವಿ ಕೂಡಾ ಆಗಿದ್ದ ಅವರು ಅನೇಕ ಕಾವ್ಯಮಾಲೆಗಳನ್ನು ರಚಿಸಿದ್ದಾರೆ. ಅವರು ರಚಿಸಿದ್ದ ಕಿಸ್ಸ ಪಾಟ್‌ಗಳಲ್ಲಿ ಹೈದರ್ ಮಾಲೆ ಹಾಗೂ ಸಿದ್ದೀಖ್ ಮಾಲೆ ಬಹಳ ಪ್ರಸಿದ್ಧ.
ಇವರ ಪುತ್ರ ಸಿರಾಜ್ ಕೋಯ ಮುಸ್ಲಿಯಾರ್ ಕೂಡಾ ಪ್ರಸಿದ್ಧಆಲಿಮ್ ಆಗಿ, ಸರಳಜೀವಿಯಾಗಿ ಜನಾನುರಾಗಿಯಾಗಿದ್ದರು. 1959 ರಿಂದ 2004ರ ತನಕ ನಲ್ವತ್ತೈದು ವರ್ಷಗಳ ಕಾಲ ಕಿಲ್ತಾನ್ ದ್ವೀಪದ ಖಾಝಿಯಾಗಿದ್ದರು. ಕಿತಾಬುಗಳ ನಕಲು ಬರಹ , ಕವಿತಾರಚನೆಯ ಜೊತೆಗೆ ತೆಂಗಿನ ಸಸಿಗಳ ಉತ್ಪಾದನೆ ಮುಂತಾದವುಗಳನ್ನು ಹವ್ಯಾಸ ಮಾಡಿಕೊಂಡಿದ್ದ ಇವರು ಮುತ್ತಾತ ಅಹ್ಮದ್ ನಕ್ಷ ಬಂದಿಯವರ ಪರಂಪರೆಯನ್ನು ಮುಂದು ವರಿಸಿಕೊಂಡು ಬಂದಿದ್ದರು. ಇವರು ರಚಿಸಿದ ಕೌಮಾಲ ಎಂಬ ಕಾವ್ಯಮಾಲೆ ಬಹಳ ಪ್ರಸಿದ್ಧ.
ಇವರ ಪುತ್ರರೇ ಅಬ್ದುಲ್ ಜಬ್ಬಾರ್ ಉಸ್ತಾದ್. 1947 ಸೆಪ್ಟೆಂಬರ್ 11ರಂದು ಇವರ ಜನನವಾಯಿತು. ಆರು ಗಂಡು, ಎರಡು ಹೆಣ್ಣು ಒಟ್ಟು ಎಂಟು ಮಕ್ಕಳಲ್ಲಿ ಜಬ್ಬಾರುಸ್ತಾದರು ಎರಡನೆಯ ಪುತ್ರರು. ಅಣ್ಣ ಆಟಕೋಯ ಹಾಜಿ ಸಮೇತ ಸಹೋದರರಾದ ಮುಹಮ್ಮದ್ ಅಝ್ಹರ್ ಮುಸ್ಲಿಯಾರ್, ಅಬ್ದುನಾಸಿರ್ ಫೈಝಿ, ಮುಹಮ್ಮದ್ ರಾಝಿ ಎಂಬವರು ಹಾಗೂ ಖದೀಜಾಬೀ ಎಂಬ ಸಹೋದರಿ ಈಗಲೂ ಬದುಕಿದ್ದಾರೆ. ಕುಂಞಿಕೋಯ ಎಂಬ ಸಹೋದರ ಹಾಗೂ ರುಖಿಯಾಬೀ ಎಂಬ ಸಹೋದರಿ ಮರಣಹೊಂದಿದ್ದಾರೆ.
ಜಬ್ಬಾರುಸ್ತಾದರ ಪ್ರಾಥಮಿಕ ಗುರು ತಂದೆ ಸಿರಾಜ್ ಕೋಯಾ ಮುಸ್ಲಿಯಾರ್ ಆಗಿದ್ದರು. ಮಗನಿಗೆ ಕಲಿಸುತ್ತಿರುವಾಗ ಕೈಯಲ್ಲಿ ಬೆತ್ತ ಹಿಡಿದಿದ್ದಾಗ ತಾತ ತಾಜ್ ಮುಹಮ್ಮದ್ ಮುಸ್ಲಿಯಾರರು; “ಇವನಿಗೆ ಕಲಿಸುವಾಗ ಬೆತ್ತ ಹಿಡಿಯುವ ಅಗತ್ಯವಿಲ್ಲ, ಇವನು ಕಲಿಯುತ್ತಾನೆ” ಎಂದಿದ್ದರAತೆ. ಜಬ್ಬಾರುಸ್ತಾದರಿಗೆ ಒಂದು ಹೇಳಿದಾಗ ಅದರಾಚೆಗೆ ಒಂಬತ್ತು ತಿಳಿಯುತ್ತಿತ್ತಂತೆ.
ದಕ್ಷಿಣ ಕರ್ನಾಟಕದ ಧಾರ್ಮಿಕ ರಂಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಮಾರ್ಪಟ್ಟಿದ್ದ ಉಸ್ತಾದರು ಎಲ್ಲಾ ಕಡೆಗಳಲ್ಲೂ ಧಾರ್ಮಿಕ ಸಮಾರಂಭಗಳಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸುವುದು ಜನರಿಗೆ ಸಂಭ್ರಮವಾಗಿತ್ತು. ಊರು ಮತ್ತು ಸುತ್ತಮುತ್ತಣ ಊರುಗಳಲ್ಲಿ ಎಲ್ಲಾ ಕಾರ್ಯಗಳಿಗೂ ಜನರು ಆಶ್ರಯಿಸುವ ಕೇಂದ್ರವಾಗಿದ್ದರು ಉಸ್ತಾದರು. ಮನೆಗೆ ಶಿಲಾಸ್ಥಾಪನೆ, ಬಾವಿ ತೋಡಲು ಜಾಗ ನಿರ್ಣಯ, ಮನೆ ನಿರ್ಮಾಣಕ್ಕೆ ಸ್ಥಳ ನಿರ್ಣಯ, ಮಸೀದಿಗೆ ಕಿಬ್ಲಾ ನಿರ್ಣಯ, ನಿಕಾಹ್‌ಗೆ ನೇತೃತ್ವ, ವಿವಾದಗಳ ಇತ್ಯರ್ಥ ಮುಂತಾದ ಎಲ್ಲಾ ಕಾರ್ಯಗಳಿಗೂ ಉಸ್ತಾದರು ಬೇಕು. ಮನೆಗೆ ಉಸ್ತಾದರು ಮುಹೂರ್ತ ಹಾಕಿ ಕೊಟ್ಟರೆ ಆ ಮನೆಯ ನಿರ್ಮಾಣ, ಅನಾಯಾಸ ಪೂರ್ತಿಯಾಗುವುದು, ಅವರು ಉದ್ಘಾಟಿಸಿದ ಅಂಗಡಿಯಲ್ಲಿ ವ್ಯಾಪಾರ ಹೆಚ್ಚುವುದು, ಅವರ ದುಆದಿಂದ ವ್ಯವಸಾಯ ಸ್ಥಾಪನೆಗಳು ಬೆಳೆಯುವುದು ಎಂಬ ವಿಶ್ವಾಸವು ವ್ಯಾಪಕವಾದುದರಿಂದ ಉಸ್ತಾದರಿಗೆ ದಿನನಿತ್ಯ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಮುಳುಗುವಂತೆ ಮಾಡಿತ್ತು.
ಸಂಘಟನಾ ರಂಗದಲ್ಲಿ :
ಮಿತ್ತಬೈಲಲ್ಲಿ ದರ್ಸ್ ಆರಂಭಿಸಿದ ಕಾಲದಲ್ಲೇ ಅವರು ದಕ್ಷಿಣ ಕರ್ನಾಟಕದ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗ ತೊಡಗಿದ್ದರು. ಮೊಹಲ್ಲಾ, ಸಂಘಟನೆ, ಧಾರ್ಮಿಕ ಸಂಗಮಗಳಲ್ಲಿ ಅವರ ಉಪಸ್ಥಿತಿ ಇರುತ್ತಿತ್ತು.
ಸುನ್ನೀ ಆಶಯ ಪ್ರಚಾರ ಹಾಗೂ ಶಿಕ್ಷಣದಲ್ಲಿ ಸುಧಾರಣೆಯ ಉದ್ದೇಶದಿಂದ ರೂಪಿತವಾದ ಕರ್ನಾಟಕ ಜಮೀಯತುಲ್ ಉಲಮಾ ಎಂಬ ಸಂಘಟನೆ ರೂಪಿಸುವಲ್ಲಿ ಅವರ ಪಾತ್ರವೂ ಇತ್ತು. 1979 ನವೆಂಬರ್ 8ರಂದು ಕಲ್ಲಡ್ಕ ಮುನೀರುಲ್ ಇಸ್ಲಾಮ್ ಮದರಸ ಹಾಲ್‌ನಲ್ಲಿ ಇದು ಸ್ಥಾಪನೆಯಾದಾಗ ಉಳ್ಳಾಲ ತಂಙಳ್ ಅಧ್ಯಕ್ಷರಾಗಿ ಆಯ್ಕೆಯಾದರು. ಮೂವತ್ತಮೂರು ಉಲಮಾಗಳು ಮುಶಾವರ ಸದಸ್ಯರನ್ನು ನಿಯಮಿಸಲಾಗಿತ್ತು. ಅದರ ಜನರಲ್ ಸೆಕ್ರಟರಿಯಾಗಿ ಜಬ್ಬಾರುಸ್ತಾದರು ಆಯ್ಕೆಯಾಗಿದ್ದರು. ಅದರ ಚಟುವಟಿಕೆ ಸ್ಥಗಿತವಾಗುವ ತನಕ ಅದರಲ್ಲಿ ಉಸ್ತಾದರು ಕ್ರಿಯಾಶೀಲರಾಗಿದ್ದರು. ನಂತರ ಸಮಸ್ತ ಕೇರಳ ಜಮೀಯತುಲ್ ಉಲಮಾ ಕರ್ನಾಟಕದಲ್ಲಿ ಬಿರುಸು ಪಡಕೊಂಡಾಗ ಅದರ ಸಕ್ರಿಯ ಕಾರ್ಯಕರ್ತರಾಗಿ ದುಡಿದರು. ಮುಂದೆ ಸಮಸ್ತದಿಂದ ಕೆಲವರು ಹೊರಹೋಗಿ ಉಳ್ಳಾಲ ತಂಙಳ್‌ರವರೂ ಹೊರತಾದಾಗ ಕರ್ನಾಟಕದಲ್ಲಿ ಸಮಸ್ತಕ್ಕೆ ನೇತೃತ್ವ ಕೊಡುವ ಜವಾಬ್ದಾರಿ ಉಸ್ತಾದರದ್ದಾಯಿತು.
ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾಗ ಅವರು ಸ್ಥಾನ, ಪ್ರಸಿದ್ಧಿ ಬಯಸಿರಲಿಲ್ಲ. ಸಮಸ್ತ ಮುಶಾವರ ಸದಸ್ಯರಾಗಿ ಆಯ್ಕೆ ಮಾಡುವ ಪ್ರಸ್ತಾಪ ಬಂದಾಗಲೂ ಅವರು ನಿರಾಕರಿಸಿದ್ದರು. ಆದರೆ ಕೇರಳದ ಸಮಸ್ತದ ನಾಯಕರು ಜಬ್ಬಾರುಸ್ತಾದರ ಉಸ್ತಾದರಲ್ಲಿ ವಿಷಯ ಹೇಳಿ ಅವರು ಪ್ರಚೋದನೆ ಕೊಟ್ಟಾಗ ನಿರ್ವಾಹವಿಲ್ಲದೆ ಮುಶಾವರ ಮೆಂಬರ್ ಆಗಲು ಒಪ್ಪಿಕೊಂಡಿದ್ದರು. ಹಾಗೆ 2009ರಲ್ಲಿ ಮುಶಾವರ ಸದಸ್ಯರಾದರು. ಸಮಸ್ತದ ನಾಯಕರಿಗೆ ಜಬ್ಬಾರುಸ್ತಾದರ ಅರ್ಹತೆ ಚೆನ್ನಾಗಿ ಗೊತ್ತಿತ್ತು. ಹಾಗೆ 2017 ರಲ್ಲಿ ಸಮಸ್ತದ ಉಪಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದರು. ಲಕ್ಷದ್ವೀಪದ ವ್ಯಕ್ತಿಯೊಬ್ಬರು ಆ ಮೊದಲು ಸಮಸ್ತದ ಮುಶಾವರ ಮೆಂಬರ್ ಹಾಗೂ ಉಪಾಧ್ಯಕ್ಷ ಪದವಿ ಅಲಂಕರಿಸಿರಲಿಲ್ಲ. ಆ ಪದವಿಯನ್ನು ಪಡೆದ ಲಕ್ಷದ್ವೀಪದ ಮೊತ್ತಮೊದಲ ವ್ಯಕ್ತಿಯಾಗಿದ್ದರು ಜಬ್ಬಾರುಸ್ತಾದರು. ದಕ್ಷಿಣ ಕರ್ನಾಟಕದ ಹಲವು ಕಡೆಗಳಿಂದ ಅವರಿಗೆ ಖಾಝಿಯಾಗಲು ಒತ್ತಾಯ ಬರುತ್ತಿತ್ತು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ಅವರ ತಂದೆಯವರು 2004 ರಲ್ಲಿ ವಫಾತಾದಾಗ ತೆರವಾದ ಕಿಲ್ತಾನ್ ದ್ವೀಪದ ಖಾಝಿ ಸ್ಥಾನಕ್ಕೆ ಆಹ್ವಾನ ಬಂದಾಗಲೂ ತಿರಸ್ಕರಿಸಿದ್ದರು.
ನಾವಿಕ ಶಾಸ್ತ್ರ, ಖಗೋಳ ಶಾಸ್ತ್ರ, ಲಕ್ಷದ್ವೀಪದವರ ನಾವಿಕ ಶಾಸ್ತ್ರವಾದ ರಹ್ಮಾನಿ ಅದಕ್ಕೆ ಪೂರಕವಾಗಿರುವ ಖಗೋಳ ಶಾಸ್ತ್ರದಲ್ಲೂ ಆಳವಾದ ಜ್ಞಾನವಿತ್ತು. ನಕ್ಷತ್ರಗಳನ್ನು ನೋಡಿ ದಿಕ್ಕು ಕಂಡು ಹಿಡಿಯುವ ಹಾಗೂ ಸೂರ್ಯನ ಚಲನೆ ನೋಡಿ ಸಮಯ ತಿಳಿಯುವ ವಿದ್ಯೆ ದ್ವೀಪದವರ ಪರಂಪರೆ. ಇದನ್ನವರು ಚೆನ್ನಾಗಿ ಕಲಿತಿದ್ದರು. ಕಿಬ್ಲಾ ನಿಶ್ಚಯಿಸುವ ಅವರ ಉಪಕರಣಗಳು ಈಗಲೂ ಅವರ ಮನೆಯಲ್ಲಿವೆ. ಕೇಂದ್ರ ಸರಕಾರ ನಿಯಮಿಸಿದ್ದ ಅಧಿಕಾರಿಯೊಬ್ಬರು ಲಕ್ಷದ್ವೀಪದಲ್ಲಿ ತಿಳಿಯದ ಕೆಲವು ಸಾಂಕೇತಿಕ ಮಾಹಿತಿಗಳನ್ನು ಮಿತ್ತಬೈಲಿಗೆ ಬಂದು ಉಸ್ತಾದರಿಂದ ತಿಳಿದು ಕೊಂಡಿದ್ದರು. ಇದನ್ನು ಆ ಅಧಿಕಾರಿ ಬರೆದ; The Rahmani of M.P. Kunhi, malami of kavarathi, A Sailing Manual of Lakshadweep ಎಂಬ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಕಿಲ್ತಾನಿನಲ್ಲಿ: ಉಸ್ತಾದರು ಮಿತ್ತಬೈಲಿನ ನಿವಾಸಿಯಾಗಿ ಮಾರ್ಪಟ್ಟಿದ್ದರೂ ಹುಟ್ಟೂರಿನ ಸ್ಪಂದನ ಬಿಟ್ಟಿರಲಿಲ್ಲ. ದ್ವೀಪದ ಧಾರ್ಮಿಕ , ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ರಮಳಾನ್ ಮತ್ತು ರಬೀಉಲ್ ಅವ್ವಲ್ ಮಾಸಗಳಲ್ಲಿ ದ್ವೀಪದಲ್ಲಿ ನೆಲೆಸುತ್ತಿದ್ದರು. ರಮಳಾನಿನ ಶುಕ್ರವಾರ ದಿನಗಳಲ್ಲಿ ಅವರ ಗಂಭೀರ ಮತ ಪ್ರಸಂಗಗಳು ನಡೆಯುತ್ತಿದ್ದವು. ದ್ವೀಪದ ಮೀಲಾದ್ ಕಾರ್ಯಕ್ರಮಗಳಲ್ಲಿ ಅವರ ಭಾಷಣ ಮುಖ್ಯವಾಗಿತ್ತು. ದ್ವೀಪದಲ್ಲಿ ಒಂದು ಮಸ್ಜಿದ್‌ನಲ್ಲಿ ಜಾಗ ಸಾಲದಾದಾಗ ಉಸ್ತಾದರು ಭಾಷಣ ಮಾಡಿ ಕರೆಕೊಟ್ಡದ್ದೇ ತಡ, ಜನರೆಲ್ಲ ಉತ್ಸಾಹದಿಂದ ಮುಂದೆ ಬಂದಿದ್ದರು. ಕೆಲವೇ ಸಮಯದೊಳಗೆ ವಿಸ್ತöÈತ ಕಟ್ಟಡ ನಿರ್ಮಾಣವಾಗಿತ್ತು. ಅದೇ ಪ್ರಕಾರ ಒಂದು ಮದ್ರಸದ ವಿಷಯದಲ್ಲಿ ಭಿನ್ನಮತೀಯ ಸುನ್ನಿ ಗುಂಪು ತಕರಾರೆಬ್ಬಿಸಿ ಮದರಸವು ಮುಚ್ಚುವ ಹಾಗೂ ಸಮಸ್ತದ ಕೈಯಿಂದ ತಪ್ಪಿಹೋಗುವ ಹಂತಕ್ಕೆ ಮುಟ್ಟಿತ್ತು. ಉಸ್ತಾದರು ಮುತುವರ್ಜಿ ವಹಿಸಿ ಆ ಮದರಸವನ್ನು ಸಮಸ್ತದ ಕೈಯಲ್ಲೇ ಭದ್ರವಾಗಿರುವಂತೆ ಮಾಡಿದ್ದರಲ್ಲದೆ ಅಭಿವೃದ್ಧಿ ಪಡಿಸಿದ್ದರು. ಬಿತ್ರ ಎಂಬ ದ್ವೀಪದಲ್ಲಿ ಹಿಂದಿನ ಕಾಲದಲ್ಲಿ ನಲ್ವತ್ತು ಪುರುಷರು ಭರ್ತಿಯಾಗದಿದ್ದ ಕಾರಣದಿಂದ ಜುಮಾ ನಂತರ ಳುಹ್ರ್ ನಮಾಝ್ ಮಾಡುವ ಪದ್ಧತಿ ಇತ್ತು. ಕಾಲಕ್ರಮೇಣ ಆ ದ್ವೀಪದಲ್ಲಿ ಸಾಕಷ್ಟು ಜನ ಸಂಖ್ಯೆ ಏರಿದ್ದರೂ ಕೂಡಾ ಆ ಸಂಪ್ರದಾಯ ಚಾಲ್ತಿಯಲ್ಲಿತ್ತು. ಮಿತ್ತಬೈಲುಸ್ತಾದರು ಆ ದ್ವೀಪದವರಿಗೆ ಮನವರಿಕೆ ಮಾಡಿ ಆ ಪದ್ಧತಿಯನ್ನು ನಿಲ್ಲಿಸಿದರು. ಕಿಲ್ತಾನ್ ದ್ವೀಪಕ್ಕೆ ಹೋದಾಗೆಲ್ಲ ಅಮೀನಿ ದ್ವೀಪಕ್ಕೆ ತೆರಳಿ ಮುತ್ತಾತ ಅಹ್ಮದ್ ನಕ್ಷಬಂದಿಯವರ ಮಕಾಮಿನಲ್ಲಿ ಝಿಯಾರತ್ ನಡೆಸುವುದು ಉಸ್ತಾದರ ರೂಢಿಯಾಗಿತ್ತು. ಅವರ ವಫಾತ್ ದಿನವಾದ ರಬೀಉಲ್ ಆಖರ್ ಹನ್ನೆರಡನೆಯ ದಿನ ಅಹ್ಮದ್ ನಕ್ಷಬಂದೀ ಆಂಡ್ ನೇರ್ಚೆಯನ್ನು ಮಿತ್ತಬೈಲಿನಲ್ಲಿ ನಡೆಸುತ್ತಿದ್ದರು. ದ್ವೀಪದ ನಾಯಕರು, ಆಲಿಮರು, ಊರ ಪ್ರಮುಖರು ಮುಂತಾದ ಎಲ್ಲರೊಂದಿಗೂ ಉಸ್ತಾದರು ನಿಕಟ ಸಂಪರ್ಕದಲ್ಲಿದ್ದರು. ದ್ವೀಪದಿಂದ ಅನೇಕ ವಿದ್ಯಾರ್ಥಿಗಳನ್ನು ಕರೆತಂದು ವಿದ್ಯೆ ನೀಡಿದ್ದರು. ದ್ವೀಪದಿಂದ ವ್ಯಾಪಾರ, ಚಿಕಿತ್ಸೆ ಮುಂತಾದ ಕಾರ್ಯಗಳಿಗೆ ಮಂಗಳೂರಿಗೆ ಬರುವವರಿಗೆಲ್ಲ ಉಸ್ತಾದರ ಸಹಾಯ , ಸಹಕಾರ ಇದ್ದೇ ಇತ್ತು. ಕರ್ನಾಟಕದ ವಿವಿಧ ಕಡೆ ದಫನ ಹೊಂದಿರುವ ದ್ವೀಪದ ಮಹಾತ್ಮರ ಕಬರ್ ಬಳಿ ಹೋಗಿ ಝಿಯಾರತ್ ಮಾಡುತ್ತಿದ್ದರು. ಅಲ್ಲಿನ ನೇರ್ಚೆ ಕಾರ್ಯಗಳಲ್ಲಿ ಭಾಗವಹಿಸಿ ಆ ಮಹಾತ್ಮರ ಮಹಿಮೆಗಳನ್ನು ವಿವರಿಸಿಕೊಡುತ್ತಿದ್ದರು.
ಇಸ್ಲಾಮೀ ಸಾಹಿತ್ಯ ರಂಗದಲ್ಲಿ :
ಮಿತ್ತಬೈಲು ಉಸ್ತಾದರು ದೀನೀ ದಅವಾ ರಂಗದಲ್ಲಿ ಪತ್ರಿಕಾ ರಂಗದ ಪ್ರಭಾವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಬಾಲ್ಯದಿಂದಲೇ ಬರಹದಲ್ಲಿ ಆಸಕ್ತಿ ಹೊಂದಿದ್ದ ಅವರು ದರ್ಸ್ ನಲ್ಲಿ ಕೈಬರಹ ಪತ್ರಿಕೆಗಳಿಗೆ, ಪ್ರಕಟಿತ ಪುರವಣಿಗಳಿಗೆ ಲೇಖನ ಬರೆಯುತ್ತಿದ್ದರು. ಮಿತ್ತ ಬೈಲಿನಲ್ಲಿರುವಾಗ ತವನಿಧಿ ಮಾಸ ಪತ್ರಿಕೆಗೆ ಪ್ರೋತ್ಸಾಹ ನೀಡಿದ್ದರಲ್ಲದೆ ಕರ್ನಾಟಕ ಜಮೀಯತುಲ್ ಉಲಮಾದ ವತಿಯಿಂದ ಪ್ರಸಾರವಾಗುತ್ತಿದ್ದ ಸರಳಪಥ ಎಂಬ ಪತ್ರಿಕೆಯ ನಿರ್ದೇಶಕರಾಗಿದ್ದರು. ಅರಬಿ ಭಾಷೆಯಲ್ಲಿ ಅವರು ಬರೆದ ಅನೇಕ ಅಪ್ರಕಟಿತ ಕೃತಿಗಳಿವೆ. ಅದನ್ನು ಪ್ರಕಟಪಡಿಸುವತ್ತ ನಾವು ಗಮನಹರಿಸಬೇಕಾಗಿದೆ.
ರಸ್ಮುಲ್ ಉಸ್ಮಾನೀ ವಿವಾದ ಭುಗಿಲೆದ್ದಿದ್ದ ಸಮಯದಲ್ಲಿ ಅವರು ಬರೆದಿದ್ದ ರಿಸಾಲ ಎಂಬ ಕೃತಿ ಪ್ರಕಟವಾಗದಿದ್ದರೂ ಅದರ ಹಸ್ತ ಪ್ರತಿ ನೋಡಿದವರಿಗೆ ಮಲೆಬಾರಿ ಮುಸ್ಹಫ್ ಬಗ್ಗೆ ಮೂಡಿದ್ದ ಎಲ್ಲಾ ಗೊಂದಲಗಳೂ ನಿವಾರಣೆಯಾಗಿದ್ದವು. ಪ್ರವಾದಿಯವರ (ಸ) ಜೀವನದ ಕುರಿತು ; “ನುಬ್ದತು ತಾರೀಖ್…” ಎಂಬ ಒಂದು ಕೃತಿ ಇದ್‌ರೀಸೀ ನಾಮಗಳ ಬಗ್ಗೆ ವಿವರಿಸುವ ಇನ್ನೊಂದು ಕೃತಿ ಕೂಡಾ ಅವರ ಅಪ್ರಕಟಿತ ಕೃತಿಗಳಲ್ಲಿ ಬಹಳ ಮುಖ್ಯವಾದವುಗಳು. ಅವರು ಬರೆದ ಅಹ್ಮದ್ ನಕ್ಷಬಂದಿ (ರ)ರವರ ಮೌಲಿದ್ ಬಹಳ ಮನೋಹರವಾಗಿದೆ. ಅಹ್ಮದ್ ನಕ್ಷಬಂದಿಯವರ ಆಂಡ್ ನೇರ್ಚೆಯ ದಿನ ಅವರ ಮನೆಯಲ್ಲಿ ಅದನ್ನು ಪಾರಾಯಣ ಮಾಡಲಾಗುತ್ತಿತ್ತು. ಚಂದ್ರದರ್ಶನದ ವಿವಾದ ಈಗ ಮೂಮೂಲಿಯಾಗಿ ಬಿಟ್ಟಿದೆ. ಇದಕ್ಕೆ ಪರಿಹಾರವೆಂಬಂತೆ ಚಂದ್ರದರ್ಶನಕ್ಕೆ ಸಂಬಂಧವಾಗಿ ಶಾಫಿ ಫಿಕ್ಹನುಸಾರ ಅವರು ಬರೆದಿದ್ದ ‘ಮಸ್‌ಅಲತುಲ್ ಮತ್‌ಲ’ ಎಂಬ ಕೃತಿಯೂ ಉಪಯುಕ್ತವಾಗಿದೆ. 2001 ಕಿಲ್ತಾನ್ ದ್ವೀಪದ ಟಿ.ಐ. ಕುಂಞಿ ಬರೆದ ನಾವಿಕ ಶಾಸ್ತ್ರದ ಪುಸ್ತಕಕ್ಕೆ ಜಬ್ಬಾರುಸ್ತಾದರು ಪ್ರೌಢ. ಗಂಭೀರ ವಾದ ಮುನ್ನುಡಿ ಬರೆದಿದ್ದಾರೆ. ನಾವಿಕ ಶಾಸ್ತ್ರವು ಅವರ ಇಷ್ಟದ ವಿಷಯ ಕೂಡಾ. ದ್ವೀಪದ ಲೇಖಕರೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ದ್ವೀಪದ ಚರಿತ್ರೆ, ಅಲ್ಲಿನ ಮಹಾತ್ಮರ ಚರಿತ್ರೆ , ಈಗೀಗ ಅಲ್ಲಿ ಆಧುನಿಕತೆಯ ಸೋಂಕಿನಿಂದಾಗಿ ಕಾಣಿಸಿಕೊಳ್ಳತೊಡಗಿರುವ ಧಾರ್ಮಿಕ ಮೌಲ್ಯಚ್ಯುತಿ ಮುಂತಾದವುಗಳ ಬಗ್ಗೆ ಬರೆಯಬೇಕು ಎಂದು ದ್ವೀಪದ ಲೇಖಕರಲ್ಲಿ ಉಸ್ತಾದರು ಹೇಳುತ್ತಿದ್ದರು.
ರೋಗ ಮತ್ತು ಮರಣ :
ವಿಶ್ರಾಂತಿ ಇಲ್ಲದ ಜೀವನದಿಂದಾಗಿ ಅವರ ಆರೋಗ್ಯ ಕ್ಷೀಣಿಸಿತು. ಹಲವು ವಿಧ ಕಾಯಿಲೆಗಳು ಕಾಣಿಸಿಕೊಳ್ಳತೊಡಗಿದ್ದವು. ಶುಗರ್ ವಿಪರೀತ ಕಾಡತೊಡಗಿತ್ತು. ಅದರಿಂದಾಗಿ ಕೆಲವು ಅಂಗಗಳ ಕಾರ್ಯಕ್ಷಮತೆ ಸ್ಥಗಿತವಾಯಿತು. ಕ್ರಮೇಣ ದೃಷ್ಟಿ ಮಂಜಾಗಿತ್ತು. ಕೊನೆಕೊನೆಗೆ ನಡೆಯುವುದೇ ಕಷ್ಟವಾಗ ತೊಡಗಿತ್ತು. ಮೂಗಿನ ಶ್ವಾಸಬಂಧನವು ತೀವ್ರವಾಗಿತ್ತು. ಹಲವು ಡಾಕ್ಟರ್‌ಗಳಿಂದ ಹಲವು ವಿಧ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಶಸ್ತ್ರಕ್ರಿಯೆಗೆ ಒಪ್ಪಿಕೊಳ್ಳಲೇ ಇಲ್ಲ. ಕಿಡ್ನಿಗೆ ದೋಷವಿದೆ, ಅಪರೇಶನ್ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದಾಗ “ನನ್ನ ಕಿಡ್ನಿ ಸರಿಯಾಗಿಯೇ ಇದೆ, ನನ್ನ ಕಣ್ಣಿಗೆ ಚಿಕಿತ್ಸೆ ಸಾಧ್ಯವಿದ್ದರೆ ಮಾಡಿ” ಎಂದು ಖಡಾಖಂಡಿತವಾಗಿ ಹೇಳಿದ್ದರು.
2018ರಲ್ಲಿ ಅಡ್ಮಿಟ್ ಆಗಿ ಕೆಲವು ದಿನಗಳ ಅನಂತರ ಡಿಸ್ಚಾರ್ಜಾಗಿ ಮನೆಗೆ ಬಂದಾಗ ಪೂರ್ಣ ಚೇತರಿಸಿಕೊಂಡಿರಲಿಲ್ಲ. ಆದರೂ ಉಮ್ರಾ ಮಾಡಿ ಬಂದರು. ಹಾಗೆ ಬಂದು ವಿಶ್ರಮದಲ್ಲಿದ್ದಾಗ ಮರಣವು ಸಮೀಪಿಸಿತು.
2019 ಜನವರಿ 8ರಂದು ಸಂಜೆ ಸಮಯವಾದಾಗ ಪುತ್ರ ಮುನ್ದಿರ್‌ನನ್ನು ಕರೆದು ಉಪದೇಶ, ನಿರ್ದೇಶನಗಳನ್ನು ನೀಡಿದರು. ಲಕ್ಷದ್ವೀಪ ಮತ್ತು ಕರ್ನಾಟಕದಲ್ಲಿ ತಮಗಿರುವ ಸಂಬಂಧವನ್ನು ಹೇಳಿದರು. ಕೇರಳ ಮತ್ತು ಕರ್ನಾಟಕದ ವಿವಿಧೆಡೆ ದಫನ ಹೊಂದಿರುವ ದ್ವೀಪದ ಕೆಲವು ಮಹಾತ್ಮರ ವಿಷಯವನ್ನೂ ವಿವರಿಸಿದರು. ಅವರ ಬಗ್ಗೆ ಇಲ್ಲಿನ ಜನಕ್ಕೆ ಏನೂ ಗೊತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಅಷ್ಟರಲ್ಲಿ ಮಗ್ರಿಬ್ ಬಾಂಗ್ ಕೇಳಿಬಂತು. ಉಸ್ತಾದರು ಮಗ್ರಿಬ್ ನಮಾಝ್‌ನ ಸಿದ್ಧತೆಯಲ್ಲಿ ತೊಡಗಿದರು. ಬಿಸಿನೀರಲ್ಲಿ ಸ್ನಾನ ಮಾಡಿಸಲಾಯಿತು. ಆಗ ವಿಪರೀತ ಆಯಾಸ ತಲೆದೋರಿದುದರಿಂದ ಬೇಗನೆ ಕರೆತಂದು ಮಂಚದಲ್ಲಿ ಮಲಗಿಸಲಾಯಿತು. ತುಟಿಯಿಂದ ಮೆಲುದನಿಯಲ್ಲಿ ಏನೋ ಹೇಳುತ್ತಿದ್ದರು. ಸ್ವಲ್ಪ ಸಮಯದೊಳಗೆ ಆ ಧ್ವನಿ ಅಡಗಿತು. ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್.
ಎಪ್ಪತ್ತೆರಡು ವರ್ಷಗಳ ಕಾಲದ ಸಂಭವ ಬಹುಳವೂ ಮಾದರೀ ಯೋಗ್ಯವೂ ಆಗಿದ್ದ ಆ ಧನ್ಯ ಜೀವನ ಮುಕ್ತಾಯ ಗೊಂಡಿತು. ನಲ್ವತ್ತೆಂಟು ವರ್ಷಗಳ ಕಾಲ ಮಿತ್ತಬೈಲ್ ಎಂಬ ನಾಡಲ್ಲಿ ಬೆಳಕು ಚೆಲ್ಲಿದ್ದ ಆ ದೀಪವು ಕಣ್ಮರೆಯಾದ ಸುದ್ದಿ ತಿಳಿದಾಗ ಇಡೀ ನಾಡು ಸ್ತಬ್ಧವಾಯಿತು. ಬೆಳಕು ನಂದಿದ ಅನುಭವ, ಕತ್ತಲಾವರಿಸಿದ ಪ್ರತೀತಿ. ಕೇರಳ-ಕರ್ನಾಟಕದ ಸಮಸ್ತದ ಸಮುನ್ನತ ನಾಯಕನ ಅಗಲಿಕೆಯ ವಾರ್ತೆ ಕೇಳಿ ಸಮುದಾಯ ನಡುಗಿತ್ತು.
ಜಾತಿಮತ ಭೇದವಿಲ್ಲದೆ ಜನಪ್ರವಾಹ ಮಿತ್ತಬೈಲಿಗೆ ಹರಡಿತು. ಅಣೆಕಟ್ಟು ಕಡಿದ ನದಿಯ ಹಾಗೆ ಜನರ ಹರಿವು ಮಿತ್ತಬೈಲು ಕಡೆಗೆ ಹರಿದು ಬಂತು. ಕೇರಳ-ಕರ್ನಾಟಕದ ಧಾರ್ಮಿಕ, ಸಾಂಘಿಕ, ರಾಜಕೀಯ ನಾಯಕರ ಸಮೇತ ಸಮಸ್ತದ ಹಿರಿಯ ನಾಯಕರೂ ಉಸ್ತಾದರ ಅಂತಿಮ ವಿದಾಯಕ್ಕೆ ಹಾಜರಾದರು. ಜನ ಸಾಗರ ಕಂಡು ಸರಕಾರ ಅಲರ್ಟಾಯಿತು. ಅಂದು ಕರ್ನಾಟಕ ಬಂದ್ ದಿನ. ಆದರೆ ಬಿ.ಸಿ. ರೋಡ್ ಭಾಗಕ್ಕೆ ಬಂದ್‌ಗೆ ವಿನಾಯಿತಿ ಘೋಷಿಸಲಾಯಿತು. ಜನ ಸಾಗರ ಕಂಡು ಪೊಲೀಸ್ ಅಧಿಕಾರಿಗಳು; “ಇಷ್ಟು ದೊಡ್ಡ ವ್ಯಕ್ತಿ ಇಲ್ಲಿ ಇದ್ದರೆಂದು ನಮಗೆ ಗೊತ್ತೇ ಇರಲಿಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಜಿಫ್ರಿ ಮುತ್ತು ಕೋಯ ತಂಙಳ್, ಆಲಿಕುಟ್ಟಿ ಉಸ್ತಾದ್ ಸಮೇತ ಅನೇಕ ಘಟಾನುಘಟಿಗಳ ನೇತೃತ್ವದಲ್ಲಿ ಹಲವು ಬಾರಿ ಸಹಸ್ರಾರು ಜನರು ಮಯ್ಯಿತ್ ನಮಾಝ್ ನಿರ್ವಹಿಸಿದರು. ಮಿತ್ತಬೈಲ್ ಮಸ್ಜಿದ್ ಅಂಗಳದಲ್ಲಿರುವ ದರ್ಗಾ ಶರೀಫ್ ಪಕ್ಕದಲ್ಲೇ ದಫನ ಮಾಡಲಾಯಿತು. ಸರಕಾರದ ಪರವಾಗಿ ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಸಲ್ಯೂಟ್ ಹೊಡೆದು ಸರಕಾರದ ಅಧಿಕೃತ ಗೌರವ ಸೂಚಿಸಿದರು. ಹಾಗೆ 2019 ಜನವರಿ 9 ದಿನಾಂಕದಂದು ಮಧ್ಯಾಹ್ನ ಸಮಯದಲ್ಲಿ ಉಸ್ತಾದರ ಭೌತಿಕ ಶರೀರವನ್ನು ದಫನ ಮಾಡುವುದರೊಂದಿಗೆ ಐದು ದಶಕಗಳ ಕಾಲ ಲಕ್ಷದ್ವೀಪ ಹಾಗೂ ಕರ್ನಾಟಕಕ್ಕೆ ಧಾರ್ಮಿಕತೆಯ ಬೆಳಕು ಹರಡಿದ್ದ ಆ ಮಹಾ ಮನೀಷಿ ಚರಿತ್ರೆಯ ಭಾಗವಾಗಿ ಅಮರರಾದರು.

+91 96114 52285