ಎ.11ರಿಂದ 13ರವರೆಗೆ ಜನಮನ ಸೆಳೆಯಲಿರುವ ‘ತುಂಬೆ ಫೆಸ್ಟ್-2025‘ಗೆ ಭರದ ಸಿದ್ಧತೆ

ಪ್ರಖ್ಯಾತ ತುಂಬೆ ಬಿ.ಎ.ಗ್ರೂಪ್‌ನ ಆಶ್ರಯದಲ್ಲಿ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಬಳಿಯಲ್ಲಿರುವ ತುಂಬೆ ಮೈದಾನದಲ್ಲಿ ‘ತುಂಬೆ ಫೆಸ್ಟ್-2025’ ವಿಶಿಷ್ಟ ಕಾರ್ಯಕ್ರಮವು ಎ.11ರಿಂದ 13ರವರೆಗೆ ನಡೆಯಲಿದ್ದು ಕಾರ್ಯಕ್ರಮದ ಯಶಸ್ಸಿಗೆ ಭರದ ಸಿದ್ದತೆ ನಡೆದಿದೆ.

ಎಪ್ರಿಲ್ 11ರಿಂದ 13ರ ವರೆಗೆ ಮೂರು ದಿನ ಪ್ರತಿದಿನ ಸಂಜೆ 4ರಿಂದ ರಾತ್ರೆ 10ರವರೆಗೆ ತುಂಬೆ ಫೆಸ್ಟ್ ನಡೆಯಲಿದ್ದು ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.

ಬಿ.ಎಂ.ಅಶ್ರಫ್ ಕಾರ್ಯಕ್ರಮದ ಆಯೋಜಕರಾಗಿದ್ದು, ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ರವರ ಮಾರ್ಗದರ್ಶನದಲ್ಲಿ ನಡೆಯುವ ಈ ಫೆಸ್ಟ್‌ಗೆ ಕರ್ನಾಟಕ ಸರಕಾರದ ಸಹಕಾರ ಇರಲಿದೆ.

ಎ.11ರಂದು ಸಂಜೆ 4ಕ್ಕೆ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಮೊಡಂಕಾಪು ಇನ್ವೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ವೆಲೇರಿಯನ್‌ ಡಿಸೋಜ, ಹಾಜಿ ಇರ್ಶಾದ್‌ ದಾರಿಮಿ ಅಲ್‌ ಜಝರಿ ಮಿತ್ತಬೈಲ್‌ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.

ಸಮಾಜದ ಎಲ್ಲಾ ಜನರನ್ನು ಒಗ್ಗೂಡಿಸಿ ಪರಸ್ಪರ ಗೌರವ, ಪ್ರೀತಿ, ಸೌಹಾರ್ದವನ್ನು ಬೆಳೆಸುವ ಹಾಗೂ ತುಂಬೆ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ತುಂಬೆ ಫೆಸ್ಟ್‌ನ್ನು ಆಯೋಜಿಸಲಾಗಿದೆ. ತುಂಬೆ ಮತ್ತು ಆಸುಪಾಸಿನ ಗ್ರಾಮಗಳ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಈ ಫೆಸ್ಟ್ ಸಹಕಾರಿಯಾಗಲಿದೆ.

ಈ ಫೆಸ್ಟ್‌ ನಲ್ಲಿ ನಾಯಕರ ಸಮ್ಮಿಲನ, ಕುಟುಂಬ ಸಮ್ಮಿಲನ, ಯೆನೆಪೊಯ ವಿವಿಯಿಂದ ಆರೋಗ್ಯ ತಪಾಸಣೆ ಶಿಬಿರ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಉದ್ಯೋಗ ಮಾಹಿತಿ ಕಾರ್ಯಕ್ರಮ, ಆಹಾರ ಮೇಳ, ವಿವಿಧ ಉತ್ಪನ್ನಗಳ ಮಳಿಗೆಗಳನ್ನು ಆಯೋಜಿಸಲಾಗುವುದು.

ಇದೇ ವೇಳೆ ಫೆಸ್ಟ್‌ನ ಮೂರು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬ್ಯಾರಿ ಮತ್ತು ತುಳು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು, ತೆಲಿಕೆದ ಗೊಂಚಲು, ಪಿಲಿ ನಲಿಕೆ, ಚೆಂಡೆ ವಾದನ, ಬಹುಭಾಷಾ ಕವಿಗೋಷ್ಠಿ, ಒಪ್ಪನೆ, ದಫ್, ಭರತನಾಟ್ಯ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಎ.13ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಸಾಧಕರಿಗೆ ಸನ್ಮಾನ, ಅಂತರ್‌ರಾಷ್ಟ್ರೀಯ ಖ್ಯಾತಿಯ ಬಾಲಿವುಡ್, ರಾಕ್ ಮ್ಯೂಸಿಕ್, ಉನ್ನತ ತಂತ್ರಜ್ಞಾನದ ಶಬ್ದ, ಬೆಳಕು, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಮಂಗಳೂರು ಸಮೀಪದ ತುಂಬೆಯ ಪ್ರಖ್ಯಾತ ಬಿ. ಎ. ಗ್ರೂಪ್ ಆಯೋಜಿಸುತ್ತಿರುವ ಈ ಪೆಸ್ಟಿ‌ನ ಯಶಸ್ಸಿಗೆ ಪರಿಸರದ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸುತ್ತಿದೆ.

ಈ ಅಪೂರ್ವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ್ ತಂಗಡಗಿ, ಬಿ. ಎ. ಗ್ರೂಪಿನ ಸ್ಥಾಪಕಾಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಸಹಿತ ನಾಡಿನ ಅನೇಕ ನೇತಾರರು, ಸಾಹಿತಿಗಳು, ಕಲಾವಿದರು ಭಾಗವಹಿಸಲಿದ್ದಾರೆ.

ಪ್ರತಿಷ್ಠಿತ ತುಂಬೆ ಫೆಸ್ಟಿನ ಯಶಸ್ಸಿಗಾಗಿ ತುಂಬೆ ಪದವಿ ಪೂರ್ವ ಕಾಲೇಜಿನ ಕಚೇರಿ ಅಧೀಕ್ಷಕ ಬಿ.ಅಬ್ದುಲ್ ಕಬೀರ್, ತುಂಬೆ ಐಟಿಐ ಸಂಸ್ಥೆಯ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್‌., ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ನಾಯಕ್, ದೈಹಿಕ ಶಿಕ್ಷಕ ಜಗದೀಶ್ ರೈ ಮತ್ತು ಸಫೀದ್‌‌ರವರ ಮುಂದಾಳತ್ವದಲ್ಲಿ ನೂರಾರು ಯುವಕರ ಮತ್ತು ಉತ್ಸಾಹಿಗಳ‌ ತಂಡ ಬಿರುಸಿನ ಸಿದ್ದತೆಯಲ್ಲಿ ತೊಡಗಿಸಿಕೊಂಡಿದೆ

ಅತ್ಯುನ್ನತ ದೃಷ್ಟಿಕೋನದೊಂದಿಗೆ, ವಿನೂತನ ಶೈಲಿಯಲ್ಲಿ ನೆರವೇರಲಿರುವ ತುಂಬೆ ಫೆಸ್ಟ್‌ಗೆ ಮೂರು ದಿನಗಳ‌ ಅವಧಿಯಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಜನರು ಬೇಟಿ ನೀಡಲಿರುವರೆಂದು ನಿರೀಕ್ಷಿಸಲಾಗಿದೆ.

ತುಂಬೆ ಫೆಸ್ಟ್ 2025 ಯಶಸ್ವಿಯಾಗಲಿ ಎಂದು www.bearyinfo.com ಈ ಮೂಲಕ ತನ್ನ ತುಂಬುಹೃದಯದ ಶುಭಾಶಯಗಳನ್ನು ಸಲ್ಲಿಸುತ್ತದೆ.

CONTACT INFORMATION

THUMBAY FEST 2025
Phone/WhatsApp/Botim: 8494997333, 8484997444
Email: livin.ash@gmail.com

Scroll to Top