‘ಬೆಲಿಯೆ ಪಳ್ಳಿ’ ಎಂದೇ ಪ್ರಖ್ಯಾತವಾಗಿರುವ ಮಂಗಳೂರಿನ ಐತಿಹಾಸಿಕ ‘ಝೀನತ್ ಬಕ್ಷ್’ ಮಸೀದಿಯ ಇತಿಹಾಸ
ಲೇಖಕರು: ಇಸ್ಮತ್ ಪಜೀರ್

ಜಗತ್ತಿನಲ್ಲಿ ಎಲ್ಲೆಲ್ಲಾ ಮುಸ್ಲಿಮರಿದ್ದಾರೋ ಅಲ್ಲೆಲ್ಲಾ ಮಸೀದಿಗಳಿದ್ದೇ ಇರುತ್ತೆ. ಅದಕ್ಕೆ ಧಾರ್ಮಿಕ ಮಾತ್ರವಲ್ಲದೇ ಸಾಮಾಜಿಕ ಕಾರಣಗಳೂ ಇವೆ. ಪ್ರವಾದಿವರ್ಯರ ಕಾಲದಲ್ಲಿ ಮಸೀದಿಯೆಂದರೆ ಆರಾಧನಾಲಯ ಮಾತ್ರವಾಗಿರಲಿಲ್ಲ, ಮಸೀದಿಯೆಂದರೆ ನ್ಯಾಯಾಲಯವಾಗಿತ್ತು, ಮಸೀದಿಯೆಂದರೆ ಮುಸ್ಲಿಮರ ಅಸೆಂಬ್ಲಿಯಾಗಿತ್ತು.ಸಮಾಜದ ಎಲ್ಲಾ ವ್ಯಾಜ್ಯಗಳಿಗೂ ಮಸೀದಿಯಲ್ಲೇ ನ್ಯಾಯ ತೀರ್ಪು ಕೊಡಲಾಗುತ್ತಿತ್ತು. ಸಮಾಜದ ಯಾವುದೇ ವಿಧದ ಆಗುಹೋಗುಗಳು, ಸಾಮುದಾಯಿಕ ಒಳಿತಿನ ತೀರ್ಮಾನಗಳು, ಸಾಮಾಜಿಕ ಸಮಸ್ಯೆಗಳು ಇವುಗಳನ್ನೆಲ್ಲಾ ಪ್ರವಾದಿವರ್ಯರ ನೇತೃತ್ವದಲ್ಲಿ ಮಸೀದಿಯ ಹೊರಾಂಗಣದಲ್ಲಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತಿತ್ತು. ಪ್ರವಾದಿವರ್ಯರ ಕಾಲಾನಂತರವೂ ಇದು ಮುಂದುವರಿಯುತ್ತಾ ಬಂತು.
ಮುಸ್ಲಿಮರನ್ನು ಒಂದು ಸಮುದಾಯವಾಗಿ ಒಂದೆಡೆ ಸೇರಿಸುವಲ್ಲಿ ಮಸೀದಿಗಳ ಪಾತ್ರ ಬಹಳ ದೊಡ್ಡದಿದೆ.ಈ ವಾಸ್ತವ ಅರಿತುದರಿಂದಲೇ ಇಸ್ಲಾಮ್ ಧರ್ಮ ಪ್ರಚಾರಕರು ಹೋದಲ್ಲೆಲ್ಲಾ ಮಸೀದಿಗಳನ್ನು ಸ್ಥಾಪಿಸುವುದಕ್ಕೆ ಬಹಳ ಮಹತ್ವ ಕೊಟ್ಟರು.
ಭಾರತದಲ್ಲಿ ಮೊದಲ ಮಸೀದಿ ಸ್ಥಾಪನೆಯಾಗಿದ್ದು ಧರ್ಮ ಪ್ರಚಾರಕರಿಂದಲ್ಲ ಎಂಬುವುದೂ ಸತ್ಯ.
ಅರೇಬಿಯಾ ಮತ್ತು ಉಪಖಂಡದ ಮಧ್ಯೆ ಸಮುದ್ರ ವ್ಯಾಪಾರಗಳು ಸುಮಾರು ಮೂರು ಸಾವಿರ ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಲೋಕ ಚಕ್ರವರ್ತಿ ಪ್ರವಾದಿ ಸುಲೈಮಾನ್ (ಅ) ಕಾಲದಿಂದಲೂ ಇಂಡೋ- ಅರಬ್ ವ್ಯಾಪಾರಗಳು ನಡೆಯುತ್ತಿತ್ತೆಂದು ಇತಿಹಾಸಕಾರ ಜೋಸೆಫೀಸ್ ದಾಖಲಿಸಿದ್ದಾನೆ.ಆಗ ಮುಂಬೈ ಬಳಿ ಸಫಾಲಾ ಎಂಬ ಬಂದರೊಂದಿತ್ತು.ಅಲ್ಲಿ ವ್ಯಾಪಾರಿ ಹಡಗುಗಳು ಲಂಗರು ಹಾಕುತ್ತಿದ್ದವು.




Zeenath Baksh Masjid, Mangaluru
ಪ್ರವಾದಿವರ್ಯರು ಇಸ್ಲಾಮ್ ಧರ್ಮಪ್ರಚಾರಕರನ್ನು ಹಿಂದ್ ( ಭಾರತಕ್ಕೆ)ಗೆ ಕಳುಹಿಸುವ ಮುನ್ನವೂ ಅರಬ್ ವ್ಯಾಪಾರಿಗಳು ಉಪಖಂಡಕ್ಕೆ ವ್ಯಾಪಾರಕ್ಕೆ ಬರುತ್ತಿದ್ದರು.ಹಾಗೆ ಗುಜರಾತಿನ ಬಂದರುಗಳ ಮೂಲಕ ವ್ಯಾಪಾರಕ್ಕೆಂದು ಬರುತ್ತಿದ್ದ ಅರಬ್ ವ್ಯಾಪಾರಿಗಳು ತಮಗೆ ನಮಾಝ್ ಮಾಡಲೆಂದು ಗುಜರಾತಿನ ಭಾವ್‌ನಗರ ಜಿಲ್ಲೆಯ ಗೋಗಾ ಬಂದರ್ ಬಳಿಯ ಬಾರವಾಡ್ ಎಂಬ ಊರಲ್ಲಿ ಕ್ರಿ.ಶ.623ರಲ್ಲಿ ಒಂದು ಮಸೀದಿ ನಿರ್ಮಿಸಿದರು. ಅದು ಉಪಖಂಡದ ಮೊಟ್ಟ ಮೊದಲ ಮಸೀದಿ ಎಂದು ಸ್ಥಳೀಯರು ಪ್ರತಿಪಾದಿಸುತ್ತಾರೆ.
ಈಗಲೂ ಬಾರವಾಡ್ ಮಸೀದಿಯನ್ನು ಯಥಾ ಸ್ಥಿತಿಯಲ್ಲಿ ಸಂರಕ್ಷಿಸಲಾಗಿದೆಯಾದರೂ ಅಲ್ಲಿ ನಮಾಝ್ ಮತ್ತಿತರ ಇಸ್ಲಾಮೀ ಚಟುವಟಿಕೆಗಳು ನಡೆಯುತ್ತಿಲ್ಲ. ಅದಕ್ಕೆ ಸ್ಪಷ್ಟವಾದ ಕಾರಣಗಳನ್ನು ಕೊಡುವಲ್ಲಿ ಸ್ಥಳೀಯರು ವಿಫಲರಾಗಿದ್ದಾರೆ.
ಆದುದರಿಂದ ಹೆಚ್ಚಿನ ಇತಿಹಾಸಕಾರರು ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕ್ರಿ.ಶ.628ರಲ್ಲಿ ಮಾಲಿಕ್ ಬಿನ್ ದೀನಾರರ ನೇತೃತ್ವದ ದೀನಾರ್ ಮಿಶನರಿ ಕೇರಳದ ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರು ಕಡಲ ತೀರದಲ್ಲಿ ನಿರ್ಮಿಸಿದ ಚೇರಮಾನ್ ಮಸೀದಿಯನ್ನು ಭಾರತದ ಮೊದಲ ಮಸೀದಿ ಎಂದು ದಾಖಲಿಸುತ್ತಾರೆ.
ಚೇರ ವಂಶದ ಚೇರಮಾನ್ ಪೆರುಮಾಳ್ ರಾಜ ಉಪಖಂಡದ ನಿವಾಸಿಗಳಲ್ಲೇ ಮೊಟ್ಟ ಮೊದಲು ಇಸ್ಲಾಮ್ ಧರ್ಮ ಸ್ವೀಕರಿಸಿದವರಾದುದರಿಂದ ಅವರ ಪೂರ್ವಾಶ್ರಮದ ಹೆಸರನ್ನೇ ಆ ಮಸೀದಿಗೆ ಇಡಲಾಯಿತು.

ಪ್ರವಾದಿವರ್ಯರು ಜಗತ್ತಿನ ವಿವಿದ ದೇಶಗಳ ರಾಜರುಗಳಿಗೆ ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಪತ್ರ ಬರೆಯುವ ಪರಿಪಾಠ ಇಟ್ಟುಕೊಂಡಿದ್ದರು. ಅದರಂತೆಯೇ ಚೇರಮಾನ್ ಪೆರುಮಾಳ್ ರಾಜರಿಗೂ ಪತ್ರ ಬರೆದರು. ಆ ಪತ್ರವನ್ನು ಸಿಲೋನಿನ (ಶ್ರೀಲಂಕಾದ) ಆದಮ್ ಬೆಟ್ಟದ ಸಂದರ್ಶನಕ್ಕೆ ಸಮುದ್ರ ಮಾರ್ಗದ ಮೂಲಕ ಹೊರಟಿದ್ದ ಯಾತ್ರಿಕ ಶಹ್ರುದ್ದೀನ್ ಎಂಬವರ ಮೂಲಕ ಕೊಟ್ಟು ಕಳುಹಿಸಿದ್ದರು.ಅವರು ಸಿಲೋನಿಗೆ ಹೋಗುವ ದಾರಿ ಮಧ್ಯೆ ಕೊಡಂಗಲ್ಲೂರಿನಲ್ಲಿ ಹಡಗಿಗೆ ಲಂಗರು ಹಾಕಿ ಇಳಿದು ಚೇರಮಾನ್ ರಾಜರನ್ನು ಭೇಟಿಯಾಗಿ ಪ್ರವಾದಿವರ್ಯರ ಪತ್ರವನ್ನು ತಲುಪಿಸಿದರು. ಚೇರಮಾನ್ ರಾಜರಿಗೆ ಪ್ರವಾದಿವರ್ಯರು ಪೂರ್ಣಚಂದ್ರನನ್ನು ಇಬ್ಬಾಗ ಮಾಡಿದ್ದ ಅದ್ಭುತ ಸಿದ್ಧಿಯ ಬಗ್ಗೆ ತಿಳಿದಿತ್ತು. ಅವರು ಶಹ್ರುದ್ದೀನ್ ಮತ್ತು ಸಂಗಡಿಗರಲ್ಲಿ ಆ ಬಗ್ಗೆ ವಿಚಾರಿಸಿ ಅರಿತರು. ಶಹ್ರುದ್ದೀನ್‌ರನ್ನು ಬಹಳ ಗೌರವಪೂರ್ವಕವಾಗಿ ನಡೆಸಿಕೊಂಡ ರಾಜ ಅವರನ್ನು ಬೀಳ್ಕೊಡುವಾಗ ಸಿಲೋನಿನಿಂದ ವಾಪಸಾಗುವಾಗ ಮತ್ತೆ ತನ್ನನ್ನು ಭೇಟಿಯಾಗಬೇಕೆಂದೂ, ನಾನು ನಿಮ್ಮ ಪ್ರವಾದಿಯವರನ್ನೊಮ್ಮೆ ನೋಡಬೇಕೆಂದು ಹೇಳಿದರು.ಆ ಪ್ರಕಾರ ಸಿಲೋನಿನಿಂದ ಮರಳುವಾಗ ಮತ್ತೆ ಚೇರಮಾನ್ ರಾಜರನ್ನು ಶಹ್ರುದ್ದೀನ್ ಭೇಟಿಯಾದರು. ಚೇರಮಾನ್ ರಾಜ ಅವರೊಂದಿಗೆ ಪ್ರವಾದಿವರ್ಯರನ್ನು ಕಾಣಲೆಂದು ಅರೇಬಿಯಾಕ್ಕೆ ಹೊರಟರು.ಅಲ್ಲಿ ಪ್ರವಾದಿವರ್ಯರನ್ನು ಭೇಟಿಯಾಗಿ ಪ್ರವಾದಿವರ್ಯರ ಸಮ್ಮುಖದಲ್ಲಿ ಇಸ್ಲಾಮ್ ಧರ್ಮ ಸ್ವೀಕರಿಸಿದರು. ಪ್ರವಾದಿ ಮುಹಮ್ಮದ್ (ಸ) ಚೇರಮಾನ್ ರಾಜರಿಗೆ ತಾಜುದ್ದೀನ್ (ಧರ್ಮದ ಕಿರೀಟ) ಎಂದು ಮರುನಾಮಕರಣ ಮಾಡಿದರು.ಅವರನ್ನು ಅಲ್ಲಿಂದ ಬೀಳ್ಕೊಡುವಾಗ ಪ್ರವಾದಿವರ್ಯರು ಮಾಲಿಕ್ ಬಿನ್ ದೀನಾರ್ (ರ) ನೇತೃತ್ವದಲ್ಲಿ ಧರ್ಮ ಪ್ರಚಾರಕರ ತಂಡವೊಂದನ್ನು ಅವರೊಂದಿಗೆ ಕಳುಹಿಸಿದರು. ಅಲ್ಲಿಂದ ಮರಳುವ ದಾರಿ ಮಧ್ಯೆ ಒಮಾನಿನ ಸಲಾಲಾ ಎಂಬಲ್ಲಿ ಚೇರಮಾನ್ ರಾಜರು ತೀವ್ರ ಖಾಯಿಲೆಪೀಡಿತರಾದರು. ಅವರಿಗೆ ತನ್ನ ಅಂತ್ಯ ಸಮೀಪಿಸಿದ್ದು ಮನವರಿಕೆಯಾಯಿತು. ಅವರು ಒಂದು ಪತ್ರವನ್ನು ಬರೆದು ಮಾಲಿಕ್ ಬಿನ್ ದೀನಾರರ ಕೈಯಲ್ಲಿ ಕೊಟ್ಟು, ನೀವು ಯಾತ್ರೆ ಮುಂದುವರಿಸಬೇಕೆಂದೂ, ತನ್ನ ನಾಡಲ್ಲಿ ಇಸ್ಲಾಮ್ ಧರ್ಮ ಪ್ರಚಾರ ಮಾಡಬೇಕೆದು ಸೂಚಿಸುತ್ತಾರೆ. ನಂತರ ಅಲ್ಲೇ ಕೊನೆಯುಸಿರೆಳೆದ ಚೇರಮಾನ್ ರಾಜರ ಅಂತ್ಯ ಸಂಸ್ಕಾರವನ್ನು ಸಲಾಲಾ ಪಟ್ಟಣದಲ್ಲೇ ಮುಗಿಸಿ ಮಾಲಿಕ್ ಬಿನ್ ದೀನಾರ್ ಮತ್ತವರ ತಂಡ ಯಾತ್ರೆ ಮುಂದುವರಿಸುತ್ತದೆ.
ಅವರು ಕೊಡಂಗಲ್ಲೂರಿಗೆ ಬಂದು ರಾಜಪರಿವಾರವನ್ನು ಭೇಟಿಯಾಗಿ ನಡೆದ ವರ್ತಮಾನವನ್ನು ತಿಳಿಸಿ, ರಾಜ ಕೊಟ್ಟ ಪತ್ರವನ್ನು ಅವರ ಪರಿವಾರದವರಿಗೆ ಹಸ್ತಾಂತರಿಸುತ್ತಾರೆ. ಪತ್ರದಲ್ಲಿ ರಾಜ ತಾಜುದ್ದೀನ್ ನಡೆದ ಘಟನೆಗಳನ್ನು ವಿವರಿಸುತ್ತಾರೆ.ರಾಜ ಪರಿವಾರ ಮಾಲಿಕ್ ಬಿನ್ ದೀನಾರ್ ಮತ್ತವರ ತಂಡವನ್ನು ಆಧರಿಸಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿ ಕೊಡುತ್ತದೆ. ಕೊಡಂಗಲ್ಲೂರಿನಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನನ್ನೂ ನೀಡುತ್ತಾರೆ. ಕ್ರಿ.ಶ.628ರಲ್ಲಿ ಮಾಲಿಕ್ ಬಿನ್ ದೀನಾರರ ನೇತೃತ್ವದಲ್ಲಿ ಕೊಡಂಗಲ್ಲೂರಿನಲ್ಲಿ ಮಸೀದಿಯೊಂದು ನಿರ್ಮಾಣವಾಗುವ ಮೂಲಕ ಉಪಖಂಡದಲ್ಲಿ ಇಸ್ಲಾಮಿನ ಚಟುವಟಿಕೆ ಅಧಿಕೃತವಾಗಿ ಆರಂಭಗೊಳ್ಳುತ್ತದೆ.
ಮಾಲಿಕ್ ಬಿನ್ ದೀನಾರ್ ನೇತೃತ್ವದ ಮಿಶನರಿ ತಂಡವು ಅರೇಬಿಯಾದಿಂದ ಬರುವಾಗ ಅತ್ಯಮೂಲ್ಯವಾದ ಹತ್ತು ಅಮೃತಶಿಲೆಯನ್ನು ತಂದಿರುತ್ತದೆ. ಅವುಗಳಲ್ಲಿ ಮೊದಲ ಅಮೃತಶಿಲೆಯನ್ನು ಕೊಡಂಗಲ್ಲೂರು ಮಸೀದಿಯ ಶಿಲಾನ್ಯಾಸಕ್ಕೆ ಬಳಸಲಾಗುತ್ತದೆ.ಚೇರಮಾನ್ ಪೆರುಮಾಳ್ ರಾಜರು ಭಾರತದಲ್ಲಿ ಇಸ್ಲಾಮ್ ಧರ್ಮದ ಬೀಜ ಬಿತ್ತಲು ಅವಕಾಶಗಳನ್ನು ತೆರೆದುಕೊಟ್ಟವರು ಮತ್ತು ಭಾರತ ಮೂಲದ ಮೊದಲ ಸ್ವಹಾಬಿಯಾದುದರಿಂದ ಸೂರ್ಯ ಚಂದ್ರರಿರುವ ಕಾಲದವರೆಗೂ ಚೇರಮಾನ್ ರಾಜರ ಹೆಸರು ಅಜರಾಮರವಾಗುಳಿಯಬೇಕೆಂದು ಕೊಡಂಗಲ್ಲೂರಿನ ಮಸೀದಿಗೆ ಚೇರಮಾನ್ ರಾಜರ ಹೆಸರನ್ನೇ ಇಡಲಾಗುತ್ತದೆ.ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದ ಬಳಿಕ ತಾಜುದ್ದೀನ್ ಆಗಿದ್ದರೂ ಅವರ ಪೂರ್ವಾಶ್ರಮದ ಹೆಸರನ್ನೇ ಮಸೀದಿಗಿಡುತ್ತಾರೆ.ಯಾಕೆಂದರೆ ಭಾರತದ ನೆಲದಲ್ಲಿ ಅವರು ಚೇರಮಾನ್ ಎಂಬ ಹೆಸರಲ್ಲಿಯೇ ಪ್ರಸಿದ್ಧರಾದವರು. ತಾಜುದ್ದೀನ್ ಎಂಬ ಹೆಸರು ಇಲ್ಲಿ ಯಾರಿಗೂ ಗೊತ್ತಿರಲಿಲ್ಲವಾದ್ದರಿಂದ ಮಸೀದಿಗೆ ಚೇರಮಾನ್ ಎಂಬ ಹೆಸರಿಟ್ಟರೆ ಆ ಹೆಸರೇ ಚರಿತ್ರೆಯನ್ನು ಹೇಳುತ್ತದಾದ್ದರಿಂದ ಚೇರಮಾನ್ ಮಸೀದಿಯೆಂದೇ ನಾಮಕರಣ ಮಾಡಲಾಯಿತು.
ಕೊಡಂಗಲ್ಲೂರು ಚೇರಮಾನ್ ಮಸೀದಿಯನ್ನು ಕೇಂದ್ರವಾಗಿರಿಸಿಕೊಂಡು ದೀನಾರ್ ಮಿಶನರಿ ಇಸ್ಲಾಮಿನ ಚಟುವಟಿಕೆಗಳನ್ನು ಆರಂಭಿಸುತ್ತದೆ.ನಂತರ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತದೆ. ನಂತರದ ಮಸೀದಿಯನ್ನು ಕೊಯ್ಲಾಂಡಿ ಕೊಲ್ಲಂ ಎಂಬಲ್ಲೂ, ತದನಂತರದ ಮಸೀದಿಯನ್ನು ಮಾಡಾಯಿ ಎಂಬಲ್ಲಿಯೂ ನಿರ್ಮಿಸಲಾಗುತ್ತದೆ.
ಅದಾದ ಬಳಿಕ ಮಾಲಿಕ್ ಬಿನ್ ದೀನಾರರು ತನ್ನ ಸೋದರ ಪುತ್ರ ಮಾಲಿಕ್ ಬಿನ್ ಹಬೀಬರ ನೇತೃತ್ವದ ತಂಡವೊಂದನ್ನು ತುಳುನಾಡಿಗೆ ಕಳುಹಿಸುತ್ತಾರೆ. ಆಗ ಏನಿದ್ದರೂ ಸಂಪರ್ಕ ಮಾರ್ಗ ಜಲಮಾರ್ಗ ಮಾತ್ರ. ಬಾರ್ಕೂರು ಬಂದರಿನಲ್ಲಿಳಿದ ದೀನಾರ್ ಮಿಶನರಿಯ ತಂಡವು ಅಲ್ಲಿ ಇಸ್ಲಾಮಿನ ಚಟುವಟಿಕೆಗಳನ್ನು ಆರಂಭಿಸುತ್ತದೆ. ಅಂದು ಬಾರ್ಕೂರು ಇನ್ನೂ ತುಳುನಾಡಿನ ರಾಜಧಾನಿಯಾಗಿರಲಿಲ್ಲ. ಆಗ ಬಾರ್ಕೂರಿನಲ್ಲಿ ಯಾವ ಧಾರ್ಮಿಕ ಕ್ಷೇತ್ರಗಳೂ ಇರಲಿಲ್ಲ.ಇದನ್ನು ಹೇಗೆ ಇಷ್ಟು ಸ್ಪಷ್ಟವಾಗಿ ಹೇಳುತ್ತಿದ್ದೇನೆಂದರೆ “ಬಾರ್ಕೂರಿನಲ್ಲಿರುವ ಅತ್ಯಂತ ಪುರಾತನ ಧಾರ್ಮಿಕ ಕ್ಷೇತ್ರ ಕತ್ತಲೆ ಬಸದಿ. ಇತಿಹಾಸಕಾರರು ಮತ್ತು ಪ್ರಾಚ್ಯವಸ್ತು ತಜ್ಞರು ಕತ್ತಲೆ ಬಸದಿ ಸಾವಿರ ವರ್ಷಕ್ಕೂ ಹಳೆಯ ಬಸದಿ ಎನ್ನುತ್ತಾರೆ.ದೀನಾರ್ ಮಿಶನರಿಯು ಬಾರ್ಕೂರಿನಲ್ಲಿ ಮಸೀದಿ ನಿರ್ಮಿಸಿದ್ದು ಕ್ರಿ.ಶ.645ರಲ್ಲಿ ಅಥವಾ ಹಿಜಿರಾ 22ರಲ್ಲಿ ಎಂಬುವುದಕ್ಕೆ ಸ್ಪಷ್ಟ ದಾಖಲೆಗಳು ಈಗಲೂ ಲಭ್ಯವಿದೆ. ಬಾರ್ಕೂರನ್ನು ದೀನಾರ್ ಮಿಶನರಿ ಫಾಕನ್ನೂರ್ ಎಂದು ಹೆಸರಿಸಿತು.ಅರೇಬಿಯಾದಿಂದ ತಂದ ಅಮೃತಶಿಲೆಯಲ್ಲಿಯೇ ಫಾಕನ್ನೂರ್ ಮಸೀದಿಗೆ ಶಿಲಾನ್ಯಾಸ ಮಾಡಲಾಯಿತು.ಅಲ್ಲಿನ ಹಳೇ ಮಸೀದಿಯನ್ನು ಕಾಲ ಕಾಲಕ್ಕೆ ಮಸೀದಿಯನ್ನು ನವೀಕರಿಸುತ್ತಾ ಬರಲಾಗಿದೆ. ಮಸೀದಿಗೆ ಶಿಲಾನ್ಯಾಸ ಮಾಡಲಾದ ಅಮೃತಶಿಲೆಯನ್ನು ಇಂದಿಗೂ ಸಂರಕ್ಷಿಸಿಡಲಾಗಿದೆ.ಅದರಲ್ಲಿ ಅರೆಬಿಕ್ ಭಾಷೆಯಲ್ಲಿ ಸ್ಪಷ್ಟವಾಗಿ ಶಾಸನವನ್ನು ಬರೆಯಲಾಗಿದೆ.ಫಾಕನ್ನೂರಿನಲ್ಲಿ ಹಿಜಿರಾ 22ರಲ್ಲಿ ಮಸೀದಿ ನಿರ್ಮಿಸಲಾದ ಬಗ್ಗೆ ಸದ್ರಿ ಅಮೃತಶಿಲೆಯಲ್ಲಿ ಸ್ಪಷ್ಟವಾಗಿ ಕೆತ್ತಿಡಲಾಗಿದೆ.ಫಾಕನ್ನೂರು ಮಸೀದಿ ನಿರ್ಮಾಣದ ಹೊತ್ತಿಗೆ ಮಾಲಿಕ್ ಬಿನ್ ಹಬೀಬರು ಮಂಜರೂರಿಗೆ ಸಮುದ್ರ ಮಾರ್ಗದ ಮೂಲಕ ತಲುಪಿದರು. ಮಂಗಳೂರನ್ನು ಅರೆಬಿಕ್ ಗ್ರಂಥಗಳಲ್ಲಿ ಮಂಜರೂರು ಎಂದೇ ದಾಖಲಿಸಲಾಗಿದೆ.ಮಂಜರೂರಿನಲ್ಲೂ ಮಸೀದಿ ನಿರ್ಮಾಣಕ್ಕೆ ಒಂದು ಪ್ರಶಸ್ತ ತಾಣದ ಹುಡುಕಾಟ ನಡೆದು ಬಂದರನ್ನು ಆಯ್ಕೆ ಮಾಡಲಾಯಿತು. ಭಾರತದಲ್ಲಿ ಇಸ್ಲಾಮಿನ ಆರಂಭದ ದಿನಗಳಲ್ಲಿ ನಿರ್ಮಿಸಲಾದ ಎಲ್ಲಾ ಮಸೀದಿಗಳನ್ನು ಕಡಲ ತೀರದಲ್ಲಿ ಅಥವಾ ನದೀ ತೀರದಲ್ಲಿಯೇ ನಿರ್ಮಿಸಲಾದದ್ದು ಕಾಣುತ್ತದೆ. ಉದಾಹರಣೆಗೆ : ಕಾಸರಗೋಡಿನ ತಳಂಗರೆಯಲ್ಲಿರುವ ಮಾಲಿಕ್ ದೀನಾರ್ ಮಸೀದಿ, ಇಚ್ಲಂಗೋಡು ಮಸೀದಿ, ಅಕ್ಕರಂಗಡಿ, ವಳವೂರು, ಅಜಿಲ ಮೊಗರು, ಪೊಳಲಿ ಇತ್ಯಾದಿ ಮಸೀದಿಗಳು. ಯಾಕೆಂದರೆ ಆ ಕಾಲದ ಬಹುತೇಕ ಸಂಪರ್ಕ ಮಾರ್ಗಗಳು ಜಲಮಾರ್ಗಗಳಾಗಿತ್ತು.ಈಗಿನಂತೆ ದೂರ ದೂರದ ಊರುಗಳಿಗೆ ಭೂ ಮಾರ್ಗ ಅಭಿವೃದ್ಧಿಯಾಗಿರಲಿಲ್ಲ.
ಬಂದರ್ ಮಸೀದಿಗೂ ಅರೇಬಿಯಾದಿಂದ ತಂದ ಅಮೃತ ಶಿಲೆಯಲ್ಲೇ ಶಿಲಾನ್ಯಾಸ ಮಾಡಲಾಯಿತು. ಬಾರ್ಕೂರು ಮಸೀದಿ ಉದ್ಘಾಟನೆಯಾದ ವರ್ಷವೇ ಅರ್ಥಾತ್ ಹಿಜಿರಾ 22, ಕ್ರಿ.ಶ.645ರಲ್ಲಿ ಮಂಗಳೂರು ಬಂದರಿನ ಮಸೀದಿಯೂ ಉದ್ಘಾಟನೆಯಾಯಿತು.ಮಾಲಿಕ್ ಬಿನ್ ದೀನಾರರ ನೇತೃತ್ವದ ಧರ್ಮಪ್ರಚಾರಕರಲ್ಲೊಬ್ಬರಾದ ಮೂಸಾ ಎಂಬವರನ್ನು ಮಂಗಳೂರಿನ ಮೊದಲ ಖಾಝಿಯಾಗಿ ನೇಮಕ ಮಾಡಲಾಯಿತು. ಅವರ ನೇತೃತ್ವದಲ್ಲಿ ಇಸ್ಲಾಂ ಧರ್ಮ ಪ್ರಚಾರ ಕಾರ್ಯ ಮಂಗಳೂರು ಸುತ್ತ ಮುತ್ತಲ ಪ್ರದೇಶದಲ್ಲಿ ಆರಂಭವಾಯಿತು. ಆಗಷ್ಟೇ ಮಂಗಳೂರಿಗೆ ಇಸ್ಲಾಮ್ ಧರ್ಮ ಕಾಲಿಟ್ಟಿತ್ತು.ನಿಧ ನಿಧಾನಕ್ಕೆ ಮಂಗಳೂರಿನಲ್ಲಿ ಮುಸ್ಲಿಮರ ಸಂಖ್ಯೆ ಬೆಳೆಯುತ್ತಾ ಹೋಯಿತು. ಆರಂಭಿಕ ಕಾಲ ಘಟ್ಟದಲ್ಲಿ ಇಸ್ಲಾಮಿನ ಕಾರ್ಯಚಟುವಟಿಕೆಗಳಿಗೆ ಎಲ್ಲೆಡೆಯಂತೆಯೇ ಮಂಗಳೂರಲ್ಲೂ ಈ ಮಸೀದಿಯೇ ಕೇಂದ್ರ ಕಚೇರಿಯಾಯಿತು. ಆರಂಭದಲ್ಲಿ ಇದಕ್ಕೆ ಮಂಜರೂರು ಮಸ್ಜಿದ್ ಎಂದೂ, ಬಾರ್ಕೂರಿನ ಮಸೀದಿಗೆ ಫಾಕನ್ನೂರು ಮಸ್ಜಿದ್ ಎಂದೇ ಹೆಸರಿತ್ತು.ಆಗಿನ್ನೂ ಇಲ್ಲೆಲ್ಲಾ ಇಸ್ಲಾಮ್ ಶೈಶವಾವಸ್ಥೆಯಲ್ಲಿದ್ದುದರಿಂದ ಊರ ಹೆಸರಿಂದಲೇ ಮಸೀದಿಗಳು ಅರಿಯಲ್ಪಡುತ್ತಿತ್ತು.
ಅರೇಬಿಯಾದಿಂದ ಸಮುದ್ರ ಮಾರ್ಗವಾಗಿ ವ್ಯಾಪಾರಕ್ಕೆ ಬರುತ್ತಿದ್ದ ಅರಬ್ ವರ್ತಕರು ಸ್ಥಳೀಯವಾಗಿ ಕನಿಷ್ಠ ಮನುಷ್ಯರೆಂಬ ಘನತೆಯೂ ಇರದಿದ್ದ ಇಲ್ಲಿನ ಶೋಷಿತ ವರ್ಗದ ಮಹಿಳೆಯರನ್ನು ಮದುವೆಯಾಗತೊಡಗಿದರು. ಹಾಗೆ ಅರೇಬಿಯನ್ ತಂದೆಗೂ ಸ್ಥಳೀಯ ತಾಯಿಗೂ ಹುಟ್ಟಿದ ಮಕ್ಕಳು ಮಾಪ್ಲಾಗಳೆಂದು ಗುರುತಿಸಲ್ಪಟ್ಟರು. ಮಾಪ್ಲಾಗಳು ಭಾರತದ ಮೊದಲ ಮುಸ್ಲಿಂ ಜನಾಂಗವಾಗಿ ಗುರುತಿಸಲ್ಪಡುತ್ತಾರೆ. ಅದೇ ಮಾಪ್ಲಾದಿಂದ ಕವಲೊಡೆದ ಜನಾಂಗವೇ ಬ್ಯಾರಿ ಜನಾಂಗ. ಅಥವಾ ಮಾಪ್ಲಾ ಜನಾಂಗದ ತುಳುನಾಡ ವರ್ಶನ್ ಬ್ಯಾರಿ ಜನಾಂಗ.
ಮಂಗಳೂರಿನಲ್ಲಿ ಕ್ರಿ.ಶ.645ರಲ್ಲಿ ಆರಂಭವಾದ ಇಸ್ಲಾಮಿನ ಪಯಣ ಮಂಗಳೂರಿನ ಸುತ್ತ ಮುತ್ತಲ ಹಳ್ಳಿಗಳಿಗೆಲ್ಲಾ ತಲುಪಿತು. ಇಸ್ಲಾಮ್ ಬೆಳೆಯುತ್ತಾ ಅಲ್ಲೊಂದು ಇಲ್ಲೊಂದು ಮಸೀದಿಗಳು ತಲೆಯೆತ್ತಲಾರಂಭವಾದವು. ಹನ್ನೆರಡನೆಯ ಶತಮಾನಕ್ಕಾಗುವಾಗ ಪುತ್ತೂರಿನ ಪಡುಮಲೆ, ಕಲ್ಲೇಗ, ಬಂಟ್ವಾಳದ ಪಾಣೆಮಂಗಳೂರು (ಅಕ್ಕರಂಗಡಿ) , ಮಳಲಿ ಮಸೀದಿ ವಳವೂರು ಮಸೀದಿ. ಹದಿಮೂರನೇ ಶತಮಾನದ ಹೊತ್ತಿಗೆ ಬೆಳ್ಮ ರೆಂಜಾಡಿ, ಮಂಜನಾಡಿ,ವಿಟ್ಲ ಪರ್ತಿಪ್ಪಾಡಿ,ಅಮ್ಮುಂಜೆ, ಹದಿನಾಲ್ಕನೇ ಶತಮಾನಕ್ಕಾಗುವಾಗ ಬಂಟ್ವಾಳದ ಅಜಿಲಮೊಗರು, ಪೊಳಲಿ, ಉಳ್ಳಾಲ, ಮುಂತಾದೆಡೆಗಳಲ್ಲೆಲ್ಲಾ ಒಂದೊಂದಾಗಿ ಮಸೀದಿಗಳು ತಲೆಯೆತ್ತ ತೊಡಗಿದವು. ಇದರರ್ಥ ಹಳ್ಳಿ ಹಳ್ಳಿಗಳಿಗೂ ಇಸ್ಲಾಮ್ ಹಬ್ಬತೊಡಗಿತು. ವಿವಿದೆಡೆ ಮಸೀದಿಗಳಾದಾಗ ಬಂದರ್‌ನಲ್ಲಿ ದೀನಾರ್ ಮಿಶನರಿ ಸ್ಥಾಪಿಸಿದ ಮಸೀದಿಯನ್ನು ಬ್ಯಾರಿಗಳು ಬೆಲಿಯೆ ಪಳ್ಳಿ ( ದೊಡ್ಡ ಮಸೀದಿ) ಎನ್ನತೊಡಗಿದರು. ವಯಸ್ಸಿನಲ್ಲಿ ಹಿರಿಯ ಮಸೀದಿಯಾದುದರಿಂದ ಈ ಮಸೀದಿ ಬೆಲಿಯೆ ಪಳ್ಳಿ ಎಂದು ಗುರುತಿಸಲ್ಪಟ್ಟಿರುವ ಸಾಧ್ಯತೆಯೇ ಹೆಚ್ಚು.
1343ರಲ್ಲಿ ಮಂಗಳೂರಿಗೆ ಬಂದಿಳಿದ ಮೊರಕ್ಕೋ ದೇಶದ ಟ್ಯಾಂಜೀರ್ ಪಟ್ಟಣದ ವಿಶ್ವ ಸಂಚಾರಿ ವಿದ್ವಾಂಸ ಇಬ್ನ್ ಬತೂತ ತನ್ನ ರಿಹ್ಲತ್ ಇಬ್ನ್ ಬತೂತ ಎಂಬ ಪ್ರಸಿದ್ಧ ಗ್ರಂಥದಲ್ಲಿ ಮಂಗಳೂರಿನ ಮುಸ್ಲಿಮರ ಕುರಿತು ಹೀಗೆ ದಾಖಲಿಸಿದ್ದಾರೆ. ” ನನ್ನ ಮಂಜರೂರು ಭೇಟಿಯ ವೇಳೆಗೆ ಅಲ್ಲಿ ನಾಲ್ಕು ಸಾವಿರದಷ್ಟು ಮುಸ್ಲಿಮರಿದ್ದರು. ಬದ್ರುದ್ದೀನುಲ್ ಮಅಬರೀ ಎಂಬ ವಿದ್ವಾಂಸರು ಮಂಜರೂರಿನ ಖಾಝಿಯಾಗಿದ್ದರು. ಅವರು ಮಲಬಾರಿನ ಪೊನ್ನಾಣಿಯ ಮಕ್ದೂಮೀ ಪರಂಪರೆಯವರಾಗಿದ್ದರು. ಮಂಜರೂರಿನಲ್ಲಿ ಮದ್ರಸಾಗಳು (ಇಸ್ಲಾಮಿಕ್ ಪಾಠಶಾಲೆಗಳು) ಇದ್ದವು”
ಇಬ್ನ್ ಬತೂತ ಮಂಜರೂರಿನಲ್ಲಿ ನಾಲ್ಕು ಸಾವಿರ ಮುಸ್ಲಿಮರಿದ್ದರು ಎಂದು ಬರೆದಿದ್ದು ಮಂಗಳೂರು ನಗರಕ್ಕೆ ಸಂಬಂಧಿಸಿಯಾಗಿರಬಹುದು ಎನ್ನುವುದು ನನ್ನ ಅಭಿಮತ. ಕಾರಣವೇನೆಂದರೆ ಮೊದಲನೆಯದಾಗಿ ಆಗಿನ್ನೂ ದಕ್ಷಿಣ ಭಾರತದಲ್ಲಿ ಜಿಲ್ಲೆಯೆಂಬ ಪರಿಕಲ್ಪನೆಯೇ ಇರಲಿಲ್ಲ. ಎರಡನೆಯದಾಗಿ ಬಂದರು ಪಟ್ಟಣವಾದ ಮಂಗಳೂರಿಗೆ ಮಾತ್ರ ಅವರು ಭೇಟಿ ಕೊಟ್ಟ ದಾಖಲೆಯಿದೆಯೇ ಹೊರತು ಮಂಗಳೂರಿಗಿಂತ ದೂರವಿರುವ ಹಳ್ಳಿಗಳಲ್ಲಿರುವ ಮುಸ್ಲಿಮರ ಅಂದಾಜು ಲೆಕ್ಕ ಸಿಕ್ಕಿರುವ ಸಾಧ್ಯತೆ ಕಡಿಮೆ. ಇಬ್ನ್ ಬತೂತರ ಭೇಟಿಯ ಕಾಲಕ್ಕೆ ಪುತ್ತೂರಿನಲ್ಲಿ ಪಡುಮಲೆ, ಕಲ್ಲೇಗ, ಬಂಟ್ವಾಳದಲ್ಲಿ ವಳವೂರು, ಅಕ್ಕರಂಗಡಿ,ವಿಟ್ಲ ಪರ್ತಿಪ್ಪಾಡಿ, ಮಂಗಳೂರು ನಗರದ ದಕ್ಷಿಣಕ್ಕೆ ಬೆಳ್ಮ ರೆಂಜಾಡಿ, ಮಂಜನಾಡಿ, ಮಂಗಳೂರು ನಗರದ ಉತ್ತರಕ್ಕೆ ಮಳಲಿ (ಮನಾಲ್), ಅಮ್ಮುಂಜೆ, ಪೇರ ಮುಂತಾದ ಮಸೀದಿಗಳಿದ್ದರೂ ಇಬ್ನ್ ಬತೂತರ ದಾಖಲೆಗಳಲ್ಲಿ ಮಂಜರೂರು ಮಸೀದಿಯ ಉಲ್ಲೇಖ ಮಾತ್ರ ಕಾಣ ಸಿಗುತ್ತದೆ.
ಮಂಗಳೂರಿನ ಖಾಝಿಯಾಗಿದ್ದ ಬದ್ರುದ್ದೀನುಲ್ ಮಅಬರೀ ಎಂಬ ವಿದ್ವಾಂಸರು ಪೊನ್ನಾಣಿಯ ಮಕ್ದೂಮಿ ಪರಂಪರೆಯವರಾಗಿದ್ದರು ಎಂಬ ಇಬ್ನ್ ಬತೂತರ ಉಲ್ಲೇಖ ಇಸ್ಲಾಮಿನ ಆರಂಭ ಕಾಲದ ಮಲಬಾರ್- ಮಂಜರೂರು ಸಂಬಂಧ ಮುಂದುವರಿಯುತ್ತಾ ಬಂದಿದೆಯೆನ್ನುವುದಕ್ಕೆ ದಾಖಲೆಯೊದಗಿಸುತ್ತದೆ. ಮಂಗಳೂರಿನ ಬ್ಯಾರಿ ಮುಸ್ಲಿಮರು ಮೂಲತಃ ಮಾಪ್ಲಾಗಳು ಅರ್ಥಾತ್ ಮಾಪ್ಲಾ ಜನಾಂಗದಿಂದ ಕವಲೊಡೆದ ಜನಾಂಗ ಎನ್ನುವುದಕ್ಕೆ ಇಬ್ನ್ ಬತೂತರ ಉಲ್ಲೇಖಗಳು ಸಾಕ್ಷ್ಯವೊದಗಿಸುತ್ತದೆ.
ಮಂಗಳೂರಿನಲ್ಲಿ ಮುಸ್ಲಿಮರ ಜನಸಂಖ್ಯೆಯು ಏರುತ್ತಾ ಹೋದಂತೆ ಕಾಲ ಕಾಲಕ್ಕೆ ಮಸೀದಿಯನ್ನು ಸ್ಥಳೀಯ ಮುಸ್ಲಿಮರು ವಿಸ್ತರಿಸುತ್ತಾ ಹೋದರು.ಬೆಲಿಯೆ ಪಳ್ಳಿಯ ಪಕ್ಕದಲ್ಲೇ ಇರುವ ಕೆರೆಯೂ ಕ್ರಿ.ಶ.645ರಲ್ಲೇ ಸ್ಥಾಪಿಸಲಾದದ್ದು. ಮಸೀದಿ ನಿರ್ಮಾಣ ಕಾಮಗಾರಿಗೆ, ನಂತರದಲ್ಲಿ ವುಝಾವಿಗೆ ( ಅಂಗಸ್ನಾನಕ್ಕೆ), ಮಸೀದಿ ಸಿಬ್ಬಂದಿಗಳ ದಿನ ಬಳಕೆಗೆ ಇದೇ ಕೆರೆಯ ನೀರನ್ನು ಬಳಸಲಾಗುತ್ತಿತ್ತು. ಕಾಲಾಂತರದಲ್ಲಿ ಅಗತ್ಯಕ್ಕೆ ತಕ್ಕಂತೆ ಕೆರೆಯನ್ನು ವಿಸ್ತರಿಸಲಾಯಿತು.
ಬೆಲಿಯೆ ಪಳ್ಳಿ ಮಸ್ಜಿದ್- ಎ- ಝೀನತ್ ಬಕ್ಷ್ ಆದ ಚರಿತ್ರೆ.
ಈಗಿನ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮೂಲತಃ ತುಳುನಾಡಿನ ಚೌಟರಸರ ಅರಮನೆಯಾಗಿತ್ತು. ಅದನ್ನು ಕಾಲಾಂತರದಲ್ಲಿ ಪೋರ್ಚುಗೀಸರು,ಆ ಬಳಿಕ ಬ್ರಿಟಿಷರು ವಶಪಡಿಸಿಕೊಂಡು ತಮ್ಮ ಕೋಟೆಯನ್ನಾಗಿಸಿಕೊಂಡರು.ಆ ಬಳಿಕ ಟಿಪ್ಪು ಸುಲ್ತಾನರು ಬ್ರಿಟಿಷರನ್ನು ಸೋಲಿಸಿ ಕೋಟೆಯನ್ನು ವಶಪಡಿಸಿಕೊಂಡರು. ಸಹಜವಾಗಿಯೇ ಅಲ್ಲಿ ತನ್ನ ಸೈನ್ಯದ ತುಕಡಿಯನ್ನು ನಿಯೋಜಿಸಿದರು. ಅಲ್ಲಿನ ಸೈನಿಕರು ನಮಾಝಿಗಾಗಿ ಅಲ್ಲಿಂದ ಕೂಗಳತೆ ದೂರದಲ್ಲಿದ್ದ ಇತಿಹಾಸ ಪ್ರಸಿದ್ಧ ಮಂಗಳೂರು ಬಂದರಿನ ಬೆಲಿಯೆ ಪಳ್ಳಿಗೆ ಹೋಗುತ್ತಿದ್ದರು. ಟಿಪ್ಪು ಸುಲ್ತಾನರೂ ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಬೆಲಿಯೆ ಪಳ್ಳಿಗೆ ನಮಾಝಿಗೆ ಹೋಗುತ್ತಿದ್ದರು. ಹಾಗೆ ಆ ಮಸೀದಿಯ ಪ್ರಾಚೀನತೆ ಮತ್ತು ಇತಿಹಾಸವನ್ನರಿತು ಅದರ ಮರು ನಿರ್ಮಾಣ ಕಾರ್ಯವನ್ನು 1793ರ ಸುಮಾರಿಗೆ ಮಾಡಿಸಿದರು.ಅದು ಭಾರತದಲ್ಲಿ ಇಸ್ಲಾಮಿನ ಆರಂಭಕಾಲದ ಪ್ರಮುಖ ಹೆಜ್ಜೆ ಗುರುತಾದುದರಿಂದ ಅದನ್ನು ಅತ್ಯಂತ ಭವ್ಯವಾಗಿ ಮರುನಿರ್ಮಾಣ ಮಾಡಲು ಯೋಜನೆ ಹಾಕಿದರು. ಟಿಪ್ಪು ಸುಲ್ತಾನರ ಆಡಳಿತದಲ್ಲಿ ಮಂಗಳೂರು ಅಮಲ್ದಾರರಾಗಿದ್ದ ಸಾಯಿರಿ ಬ್ಯಾರಿ ಎಂಬವರಿಗೆ ಅದರ ಸಂಪೂರ್ಣ ಉಸ್ತುವಾರಿಯನ್ನು ವಹಿಸಿದರು. ಅದಕ್ಕಾಗಿ ತನ್ನ ರಾಜ್ಯದಲ್ಲಿ ಲಭ್ಯವಿದ್ದ ಅತ್ಯುತ್ಕೃಷ್ಟ ಗುಣಮಟ್ಟದ ಬೀಟಿ, ತೇಗದ ಮರಗಳನ್ನು ಮಂಗಳೂರಿಗೆ ಕಳುಹಿಸಿದರು.ರಾಜ್ಯದ ಮತ್ತು ವಿದೇಶಗಳ ಅತ್ಯುತ್ತಮ ಬಡಗಿಗಳನ್ನು, ಕೆತ್ತನೆ ಕೆಲಸಗಾರರನ್ನು ಮಂಗಳೂರಿಗೆ ಕಳುಹಿಸಿದರು. ಮಾತ್ರವಲ್ಲದೇ ರಾಜ್ಯದಲ್ಲಿ ಲಭ್ಯವಿದ್ದ ಉತ್ಕೃಷ್ಟ ಗುಣಮಟ್ಟದ ನಿರ್ಮಾಣ ಸಾಮಾಗ್ರಿಗಳ ವ್ಯವಸ್ಥೆ ಮಾಡಿದರು. ಕಾಮಗಾರಿಯ ಗುಣಮಟ್ಟದಲ್ಲೂ ಯಾವುದೇ ವಿಧದ ರಾಜಿ ಮಾಡಬಾರದೆಂದು ಉಸ್ತುವಾರಿ ಹೊತ್ತ ಅಮಲ್ದಾರ್ ಸಾಯಿರಿ ಬ್ಯಾರಿಗೆ ಆದೇಶ ನೀಡಿದ್ದರು.
ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ ಇದೇ ಐತಿಹಾಸಿಕ ಬೆಲಿಯೆ ಪಳ್ಳಿಗಿಂತ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ತನ್ನ ಸೈನಿಕರಿಗೆ ನಮಾಝ್ ನಿರ್ವಹಿಸಲೆಂದು ಟಿಪ್ಪು ಸುಲ್ತಾನರು ಇನ್ನೊಂದು ಮಸೀದಿಯನ್ನೂ ನಿರ್ಮಿಸಿಕೊಟ್ಟಿದ್ದರು.ಮಂಗಳೂರು ಪೋಲೀಸ್ ಲೇನ್ ಬಳಿ ಇರುವ ಆ ಮಸೀದಿಯ ಹೆಸರು ಫೌಝ್ ಮಸ್ಜಿದ್ ಅರ್ಥಾತ್ ಸೈನ್ಯದ ಮಸೀದಿ. ಅದನ್ನು ಬ್ಯಾರಿಗಳು ಲೈನ್‌ಡೆ ಪಳ್ಳಿ, ಫೌಝಿಯ ಮಸ್ಜಿದ್ ಎಂಬ ಹೆಸರುಗಳಿಂದ ಗುರುತಿಸುತ್ತಾರೆ.ಆದರೆ ಟಿಪ್ಪು ಸುಲ್ತಾನರು ಸ್ವತಃ ಕಟ್ಟಿಸಿದ ಆ ಮಸೀದಿಗೆ ಪುನರ್ನಿರ್ಮಾಣ ಮಾಡಿದ ಬೆಲಿಯೆ ಪಳ್ಳಿಗೆ ಖರ್ಚು ಮಾಡಿದುದರ ಸಣ್ಣ ಪಾಲನ್ನೂ ಖರ್ಚೂ ಮಾಡಿಲ್ಲ. ಯಾಕೆಂದರೆ ಇದು ಭಾರತದ ಇಸ್ಲಾಮಿನ ಆರಂಭಿಕ ಹೆಜ್ಜೆ ಗುರುತುಗಳಲ್ಲೊಂದಾಗಿದೆ.
ಮುಸ್ಲಿಂ ಜಗತ್ತಿನ ವಿಶ್ವಾಸದಂತೆ ಮಕ್ಕಾದ ಮಸ್ಜಿದುಲ್ ಹರಂ, ಮದೀನಾದ ಮಸ್ಜಿದುನ್ನಬವಿ ಮತ್ತು ಪ್ಯಾಲೆಸ್ತೀನಿನ ಮಸ್ಜಿದುಲ್ ಅಕ್ಸಾದ ಹೊರತಾದ ಜಗತ್ತಿನ ಬೇರೆಲ್ಲಾ ಮಸೀದಿಗಳಿಗೆ ಸಮಾನ ಗೌರವ. ಅದಾಗ್ಯೂ ಚಾರಿತ್ರಿಕವಾದ ಕಾರಣಗಳಿಗಾಗಿ ಟಿಪ್ಪು ಸುಲ್ತಾನರು ಬೆಲಿಯೆ ಪಳ್ಳಿಗೆ ಬಹಳ ಮಹತ್ವ ಕೊಟ್ಟರು.
ಪುನರ್ನಿರ್ಮಿತ ಮಸೀದಿ ಉದ್ಘಾಟನೆಗೆ ಸ್ವತಃ ಟಿಪ್ಪು ಸುಲ್ತಾನರು ಬಂದಿದ್ದರು. ವಾಸ್ತವದಲ್ಲಿ ಅದಕ್ಕೆ ಝೀನತ್ ಬಕ್ಷ್ ಮಸ್ಜಿದ್ ಎಂಬ ಹೆಸರಿಡುವ ತೀರ್ಮಾನವೇನೂ ಆಗಿರಲಿಲ್ಲ. ಸುಲ್ತಾನರು ಈ ಮಸೀದಿಯ ವಿಚಾರದಲ್ಲಿ ಯಾವುದೇ ವಿಧದಲ್ಲೂ ರಾಜಿ ಮಾಡಬಾರದು, ಎಲ್ಲದರಲ್ಲೂ ಉತ್ಕೃಷ್ಟತೆ ಕಾಯ್ದುಕೊಳ್ಳಬೇಕೆಂದು ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿದ್ದ ಸಾಯಿರಿ ಬ್ಯಾರಿಗೆ ಆದೇಶಿಸಿದ್ದರು. ಸಾಯಿರಿ ಬ್ಯಾರಿ ಮಾಡಿಸಿದ ಮರದ ಕೆತ್ತನೆ ಕೆಲಸಗಳು, ಕಲಾತ್ಮಕ ಕುಸುರಿ ಕೆಲಸಗಳ ಕಣ್ಣು ಕೋರೈಸುವ ಸೌಂದರ್ಯ ಕಂಡು ಅಚ್ಚರಿಗೊಳಗಾದ ಸುಲ್ತಾನರು “ಝೀನತ್ ಬಕ್ಷ್” ಎಂದು ಉದ್ಘರಿಸಿದರು.ಝೀನತ್ ಬಕ್ಷ್‌ಗೆ ಸೌಂದರ್ಯ ಸುರಿಯುತ್ತಿದೆ, ಸೌಂದರ್ಯವೇ ಮೈವೆತ್ತಿ ಎಂಬ ಅಲಂಕಾರಿಕ ಅರ್ಥ ನೀಡಬಹುದು. ಮುಂದೆ ಟಿಪ್ಪು ಸುಲ್ತಾನರ ಆ ಉದ್ಘಾರವೇ ಮಸೀದಿಗೆ ಹೆಸರಾಯಿತು. ಹಳೇ ತಲೆಮಾರಿನ ಬ್ಯಾರಿಗಳು ಅದನ್ನು ಸುಲ್ತಾನ್ ಪಳ್ಳಿ ಎನ್ನುತ್ತಿದ್ದರು. ಅದಕ್ಕೆ ಕಾರಣವಿಷ್ಟೆ, ಟಿಪ್ಪು ಸುಲ್ತಾನರು ಪುನರ್ ನಿರ್ಮಿಸಿದ ಮಸೀದಿ.
ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದ ಭಕ್ಷಿ ಗುಲಾಂ ಮುಹಮ್ಮದ್ ಅವರು ಈ ಮಸೀದಿಗೆ ಭೇಟಿ ಕೊಟ್ಟಿದ್ದಾಗೊಮ್ಮೆ ಇದರ ಸೌಂದರ್ಯ ಕಂಡು ” ನಾನು ಭಾರತದಲ್ಲೂ, ಭಾರತದ ಹೊರಗೂ ನೂರಾರು ಮಸೀದಿಗಳಿಗೆ ಭೇಟಿ ಕೊಟ್ಟಿದ್ದೇನೆ. ಇಂತಹ ಅದ್ಭುತ ಮರದ ಕೆತ್ತನೆ, ಕುಸುರಿ ಕೆಲಸದಿಂದ ಕಣ್ಮನ ಸೆಳೆಯುವ ಇನ್ನೊಂದು ಮಸೀದಿಯನ್ನು ನೋಡಿಲ್ಲ” ಎಂದಿದ್ದರು.
ಇಂದಿಗೂ ಮಸೀದಿಯ ಮಿಂಬರ್(ಪ್ರವಚನ ಪೀಠ), ದಾರಂದಗಳು,ಪಕ್ಕಾಸುಗಳು, ಅಟ್ಟ ( ಛಾವಣಿ)ಇದರಲ್ಲೆಲ್ಲಾ ಕಂಗೊಳಿಸುವ ಕೆತ್ತನೆ ಕೆಲಸಗಳಿಗೆ ಸಾಟಿಯೇ ಇಲ್ಲ. ದಾರಂದಗಳಲ್ಲಿ ಸೂಕ್ಷ್ಮವಾಗಿ ಅರೆಬಿಕ್ ಕ್ಯಾಲಿಗ್ರಫಿಯಲ್ಲಿ ಕೆತ್ತಲಾದ ಪವಿತ್ರ ಖುರ್‌ಆನಿನ ಶ್ಲೋಕಗಳು, ಅಲ್ಲಾಹನ ಹೆಸರು, ಪ್ರವಾದಿ ಮುಹಮ್ಮದ್ (ಸ)ರ ಹೆಸರು ಇವನ್ನೆಲ್ಲಾ ನೋಡುವಾಗ ಇದರ ಕೆತ್ತನೆ ಕೆಲಸಕ್ಕೆ ವಿದೇಶಗಳಿಂದ ಕೆತ್ತನೆ ಕೆಲಸಗಾರರನ್ನು ತರಿಸಿದ್ದರು ಎನ್ನುವುದೂ ಸ್ಪಷ್ಟವಾಗುತ್ತದೆ. ಮಸೀದಿಯ ಗೋಡೆಕಪಾಟು, ಖುರ್‌ಆನ್ ಇಡಲು ಮಾಡಲಾಗಿರುವ ಸಾಲು ಸಾಲು ಶೆಲ್ಫ್‌ಗಳು ಹೀಗೆ ಎಲ್ಲೆಡೆಯೂ ಶಿಲ್ಪಿಗಳ ತಾಧ್ಯಾತ್ಮತೆ, ಶ್ರಮ ಮತ್ತು ಪ್ರತಿಭೆಗಳು ಎದ್ದು ಕಾಣುತ್ತವೆ. ಮಸೀದಿಯ ಒಳಭಾಗದಲ್ಲಿರುವ ವುಝೂ ಮಾಡುವ ತೊಟ್ಟಿ, ಮತ್ತು ಒಳ ಮಸೀದಿಯ ಎತ್ತರದ ಭಾಗವೇರಲು ಪಕ್ಕಾಸಿಗೆ ನೇತು ಹಾಕಲಾಗಿರುವ ಹಿಡಿ ಹಗ್ಗಗಳು ಇವೆಲ್ಲವನ್ನೂ ನೋಡುತ್ತಾ ಒಳ ಮಸೀದಿಗೆ ಪ್ರವೇಶಿಸುತ್ತಿದ್ದಂತೆಯೇ ವಿಶ್ವಾಸಿಯೊಳಕ್ಕೆ ಒಂದು ಪಾಸಿಟಿವ್ ಎನರ್ಜಿ ಪ್ರವೇಶಿಸುತ್ತದೆ.
ಮಂಗಳೂರಿಗೆ ಹಿಂದಿನಿಂದಲೂ ಲಕ್ಷದ್ವೀಪದೊಂದಿಗೆ ವ್ಯಾವಹಾರಿಕ ಸಂಬಂಧವಿತ್ತು. ಜೊತೆ ಜೊತೆಗೆ ಆಧ್ಯಾತ್ಮಿಕ ಸಂಬಂಧವೂ ಇತ್ತೆನ್ನುವುದಕ್ಕೆ ಸಾಕ್ಷಿ ಮಸೀದಿಯ ಪ್ರಾಂಗಣದಲ್ಲೇ ಅಂತ್ಯ ವಿಶ್ರಮಗೊಳ್ಳುತ್ತಿರುವ ಸೂಫಿ ಸಂತರು. ಅವರೆಲ್ಲಾ ಇಸ್ಲಾಮೀ ಆಧ್ಯಾತ್ಮದ ದೀವಿಗೆ ಹಿಡಿದುಕೊಂಡು ಸಮುದ್ರ ಮಾರ್ಗದ ಮೂಲಕ ಮಂಗಳೂರಿನ ಬಂದರ್‌ಗೆ ಬಂದಿಳಿದರು.ಈ ಅತ್ಯಂತ ಪುರಾತನ ಮಸೀದಿಯು ಅವರಿಗೆಲ್ಲಾ ಆಧ್ಯಾತ್ಮ ಸಿದ್ಧಿಯ ತಾಣವಾಗಿತ್ತು. ಅವರಲ್ಲಿ ಪ್ರಮುಖರಾದ ಜಲಾಲ್ ಮಸ್ತಾನ್ (ಖ.ಸಿ) ಅವರ ಹೆಸರಿನೊಂದಿಗೆ ಬಂದರ್‌ನ ಹೆಸರೂ ಚಿರಸ್ಥಾಯಿಯಾಗುಳಿದು ಅವರು ಇಂದಿಗೂ ವಿಶ್ವಾಸಿಗಳ ಮಾತಿನಲ್ಲಿ ಬಂದರ್ ಮೌಲಾ ಎಂಬ ಅಪರ ನಾಮದಿಂದ ಗುರುತಿಸಲ್ಪಡುತ್ತಿದ್ದಾರೆ ಈ ಸೂಫಿ ಸಂತ.
ವಿವಿದೆಡೆಯಿಂದ ಆಗಮಿಸುತ್ತಿದ್ದ ಸೂಫಿ ಸಂತರಿಗೆ, ದರ್ವೇಶಿಗಳಿಗೆಲ್ಲಾ ಝೀನತ್ ಬಕ್ಷ್ ಮಸೀದಿ ಬಹಳ ಹಿಂದಿನಿಂದಲೂ ಒಂದು ಆಶ್ರಯ ತಾಣವಾಗಿತ್ತು. ಮಂಗಳೂರಿಗೆ ಭೇಟಿ ಕೊಡುವ ಈ ಮಸೀದಿಯ ಚರಿತ್ರೆ ಅರಿತ ಪರವೂರಿನ ಮುಸ್ಲಿಮರು ಈ ಮಸೀದಿಯನ್ನು ಸಂದರ್ಶಿಸದೇ ಮರಳುವುದು ತೀರಾ ವಿರಳ. ಶಿಲ್ಪ ಕಲೆಗಳ ಕುರಿತು ಆಸಕ್ತಿಯಿರುವ ಯಾರೇ ಆದರೂ ಒಮ್ಮೆ ಈ ಮಸೀದಿಗೆ ಭೇಟಿ ಕೊಟ್ಟರೆ ಪದೇ ಪದೇ ಭೇಟಿ ಕೊಡಬಯಸುತ್ತಾರೆ.
2019ರಲ್ಲಿ ಝೀನತ್ ಬಕ್ಷ್ ಮಸೀದಿಯ ಪುನರ್ನಿರ್ಮಾಣ ಕಾರ್ಯ ನಡೆಯಿತಾದರೂ ಹಳೇ ವಿನ್ಯಾಸಗಳಿಗೆ ಇನಿತೂ ಚ್ಯುತಿಯಾಗದಂತೆ ಜಾಗ್ರತೆ ವಹಿಸಲಾಗಿತ್ತು. ಯಾಕೆಂದರೆ ಇದು ಭಾರತದ ಮುಸ್ಲಿಂ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಮಸೀದಿ ಮತ್ತು ಭಾರತದ ಮುಸ್ಲಿಂ ಚರಿತ್ರೆಯ ಆರಂಭಿಕ ಹೆಜ್ಜೆ ಗುರುತುಗಳಲ್ಲೊಂದಾಗಿದೆ.
ಆಕರ :
castes and tribes of southern India : Thirstan
Malabar Manual : William Logan
Rihlath Ibn Battuta: Ibn Battuta
Thuhfathul Mujahideen : Zainuddeen Maqdoom
ಮೈಕಾಲ : ಅಬೂ ರೈಹಾನ್ ನೂರಿ
ಮೈಕಾಲದ ನಿನ್ನೆಗಳು : ಮೊಯ್ಲಾಂಜಿ ಪತ್ರಿಕೆಯಲ್ಲಿ ಪ್ರಕಟವಾದ ಕೆ.ಎಂ.ಸಿದ್ದೀಕ್ ಮೋಂಟುಗೋಳಿಯವ ಗದ್ಯರ ಲೇಖನ (ಒಕ್ಟೋಬರ್, 1999)
ತುಳುನಾಡಿನ ಬ್ಯಾರಿಗಳು : ಪ್ರೊ.ಬಿ.ಎಂ.ಇಚ್ಲಂಗೋಡು
ಲೇಖಕರ ಪರಿಚಯ : ಇಸ್ಮತ್ ಪಜೀರ್

ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಪಜೀರಿನಲ್ಲಿ ಹುಟ್ಟಿ ಬೆಳೆದ ಇಸ್ಮತ್ ಪಜೀರ್ ತನ್ನ ಅಧ್ಯಯನ ಶೀಲ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ದಾರಿಯನ್ನು ಕಂಡು ಕೊಂಡು ಜನ ಮನ್ನಣೆಯನ್ನು ಗಳಿಸಿಕೊಂಡವರು. ಅವರ ಪ್ರಬಂಧಗಳು ಮಂಗಳೂರು, ತುಮಕೂರು ಮತ್ತು ಯೆನಪೋಯ ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿ ಪಠ್ಯಗಳಾಗಿವೆ. ಇವರು ಬರೆದ ವ್ಯಕ್ತಿ ಚಿತ್ರವೊಂದನ್ನು ಕೇರಳ ಫ್ರೌಡ ಶಿಕ್ಷಣ ಇಲಾಖೆ ಕೇರಳ ಫ್ರೌಡ ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಂಡಿದೆ. ಹೈದ್ರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ 2019ರಲ್ಲಿ ನಡೆದ south India history colloquium ಬ್ಯಾರಿ ಜನಾಂಗವನ್ನು ಪ್ರತಿನಿಧಿಸಿದ ಇಸ್ಮತ್ ಬ್ಯಾರಿ ಜನಾಂಗ ಇತಿಹಾಸಕ್ಕೆ ಅಕಾಡೆಮಿಕ್ ಮೆರುಗು ಕೊಟ್ಟವರಲ್ಲೊಬ್ಬರು.
ಏಳು ಕನ್ನಡ ಪುಸ್ತಕಗಳು, ಒಂದು ಇಂಗ್ಲಿಷ್ ಮತ್ತು ಎರಡು ಬ್ಯಾರಿ ಕೃತಿಗಳನ್ನು ಇಸ್ಮತ್ ಬರೆದಿದ್ದಾರೆ. ಎರಡು ಕೃತಿಗಳನ್ನು ಸಂಪಾದಿಸಿದ್ದಾರೆ. ಪುರಾತನ ಮಸೀದಿಗಳು, ಸೂಫಿ ಸಂತರು, ಟಿಪ್ಪು ಸುಲ್ತಾನರ ಸ್ಮಾರಕಗಳು, ವನ್ಯಜೀವಿಗಳು ಇಸ್ಮತ್ ಪಜೀರ್‌ರ ಆಸಕ್ತಿ ಕ್ಷೇತ್ರಗಳು.
History of the legendary ‘Zeenath Baksh Mosque’ in Mangalore, popularly known as ‘Beliye Palli’
Author : Ismath Pajeer
Wherever Muslims reside around the world, mosques hold a central place in their lives. These structures are more than just places of worship; they are institutions of immense social and cultural significance. During the era of Prophet Muhammad (PBUH), mosques were multifunctional spaces. They served as courts of law, venues for communal gatherings, and centers for addressing societal issues. Within the walls of these mosques, disputes were resolved, and decisions for the welfare of the community were made under the Prophet’s guidance. This tradition of mosques serving as pillars of community life continued even after the Prophet’s time.
Mosques have played a unifying role in bringing Muslims together as a single, cohesive community. Understanding this significance, Islamic missionaries prioritized the establishment of mosques wherever they traveled. However, the establishment of the first mosque in India marks a unique chapter in history. Unlike the mosques built by missionaries in other regions, India’s first mosque was established not by preachers but by traders.
The roots of this story lie in the age-old trade relations between Arabia and the Indian subcontinent. For over 3,000 years, commerce linked these distant lands. Historical references, including accounts by Josephus, detail thriving Indo-Arab trade networks dating back to the reign of Prophet Solomon. A prominent port known as Sopara, located near present-day Mumbai, served as a bustling hub where trading ships from Arabia anchored, bringing goods and ideas that bridged two vibrant civilizations.
Before the arrival of Islamic missionaries sent by Prophet Muhammad (PBUH) to India, Arab traders had already established frequent contact with Indian ports. Around 623 CE, a group of Arab traders who landed in Gujarat for commerce constructed a mosque near Gogha Bandar in Bharuch district, at a place called Barwada. This mosque is often considered the first in the Indian subcontinent. Though this Mosque still stands today, it is no longer in active use. Due to this, many historians debate its status as the first mosque in India, instead favoring the Cheraman Juma Masjid, built in 628 CE under the leadership of Malik Bin Dinar in Kodungallur, Kerala, as the first officially recognized mosque in India.
The Cheraman Juma Masjid derives its name from Cheraman Perumal, a ruler of the Chera dynasty, who is believed to be the first Indian to embrace Islam. Prophet Muhammad (PBUH) had a tradition of sending letters to rulers across the world, inviting them to accept Islam. Cheraman Perumal reportedly received one such letter through a traveler named Shahruddin, who was passing through India on his way to Sri Lanka. Intrigued by the stories of Prophet Muhammad’s miracles, particularly the splitting of the moon, the king welcomed Shahruddin, learned more about Islam, and eventually traveled to Arabia. There, he embraced Islam in the presence of the Prophet himself, who renamed him Tajuddin, meaning “Crown of Faith.”
On his return journey, Tajuddin fell gravely ill in Oman. Sensing his end was near, he wrote a letter to his kin, instructing them to support Malik Bin Dinar and his team of Islamic missionaries. Tajuddin passed away in Salalah, Oman, before reaching his homeland. Following his instructions, Malik Bin Dinar continued his mission and traveled to Kodungallur with the letter. Upon arrival, he presented the letter to the royal family, who granted him land to construct a mosque. Thus, in 628 CE, the Cheraman Juma Masjid was established, officially marking the beginning of Islamic activities in the Indian subcontinent.
The missionaries who established the Cheraman Juma Masjid carried with them ten sacred stones from Arabia, believed to symbolize the spiritual foundation of their mission. The first of these stones was used to lay the foundation of the mosque. In honor of Cheraman Perumal, the ruler who played a pivotal role in introducing Islam to India, the mosque was named after him. Although he had adopted the name Tajuddin after embracing Islam, the mosque retained the name Cheraman, reflecting the local community’s familiarity and respect for their former king.
With the Cheraman Juma Masjid serving as their base, Malik Bin Dinar and his team expanded their missionary activities across Kerala. Their efforts led to the establishment of mosques in various locations, including Kollam and Madayi. These mosques became key centers for Islamic teachings and community building, laying a strong foundation for the growth and spread of Islam in southern India.
Beliye Palli: The Origin Point of Islamic History in Mangaluru
The Islamic journey in Tulu Nadu began in the 7th century CE with the arrival of the Deenar Missionary from Arabia. This group, led by Malik bin Deenar, set out to spread the message of Islam, reaching the coastal regions of Barkur and Mangaluru. Barkur, which had not yet developed into the capital of Tulu Nadu, became one of the mission’s earliest centers for Islamic activities.
Historical evidence places the establishment of Barkur’s Fakanur Masjid around 645 CE (Hijri 22). This mosque, founded with sacred stones carried from Arabia, is believed to be one of the first Islamic establishments in the region. Though the mosque underwent several renovations over the centuries, the original foundation stone with Arabic inscriptions remains preserved, a testimony to its historical significance.
Another group of the missionary, led by Malik bin Habib, advanced to Mangaluru, known in Arabic texts as Manjarur. Recognizing its strategic importance as a coastal hub, the missionaries built a mosque near the port. Like the Fakanur Masjid, the Manjarur Masjid, also established in 645 CE, served as a critical base for Islamic activities. Both mosques laid the groundwork for the spread of Islam along the coastal belt. One of the apostles under Malik Bin Dinar named Moosa was appointed as the first Quazi of Mangalore. Under his leadership, the work of promoting Islam began in and region around Mangalore.
As Arab traders frequented these regions, they began integrating into the local communities through marriage, particularly with women from oppressed backgrounds. The descendants of these unions, known as Mapillas, became the first Muslim community in India. In Tulu Nadu, the Beary community evolved as a localized adaptation of the Mapilla heritage.
The spread of Islam from Mangaluru extended to nearby villages. By the 12th century, mosques had been built in places such as Padumale and Kallege in Puttur, Akkarangadi and Panemangaluru in Bantwal, and Malali. By the 14th century, Islamic centers emerged in regions like Belma Renjadi, Manjanadi, and Vittla Parthipadi, which became hubs for Islamic learning and worship.
Among these historic mosques, the Beliye Palli in Bandar, now known as Masjid-e-Zeenath Baksh, holds a distinguished place. Its foundational role in the early Islamic era earned it the title “Beliye Palli,” meaning “Big Mosque.” A pond adjacent to the mosque, believed to have been created in 645 CE, served as a vital resource for construction, ablution, and daily activities.
In 1343, the renowned Moroccan traveler and scholar Ibn Battuta visited Manjarur. His writings mention a thriving Muslim population of nearly 4,000 in the area and highlight the presence of the Khazi of Manjarur, Badruddin al-Maabari. This scholar, from the Maqdumi lineage of Ponani, underscored the strong cultural and religious ties between Mangaluru and Malabar during the early days of Islam in the region.
The Beliye Palli remains a symbol of the rich Islamic heritage in Mangaluru, marking the city’s pivotal role in the early history of Islam in southern India.
The History of Beliye Palli Masjid-e-Zeenath Baksh
The site of the current Deputy Commissioner’s office in Mangaluru holds a fascinating history. It was originally the palace of the Chowta rulers of Tulu Nadu. Over time, the palace fell under Portuguese and later British control, transforming into a fort. However, Tipu Sultan, the ruler of Mysore, recaptured the fort from the British and stationed a division of his army there. Soldiers stationed at the fort would make their way to the historic Beliye Palli, located near the Mangaluru port, to offer their prayers.
Tipu Sultan himself held the mosque in high regard. During his visits to Mangaluru, he would pray at Beliye Palli. Understanding its historical significance as one of the earliest Islamic establishments in the region, he undertook its renovation in 1793. Tipu envisioned reconstructing the mosque on a grand scale to honor its legacy as a prominent symbol of Islam’s early presence in India. To accomplish this, he entrusted Sayyed Beary, the then administrator of Mangaluru under his rule, with overseeing the task.
Tipu Sultan spared no effort in ensuring the mosque’s renovation was executed with the finest materials and craftsmanship. He arranged for high-quality teakwood and rosewood from across his kingdom to be sent to Mangaluru. Skilled artisans, carpenters, and engravers from within his domain and abroad were summoned to contribute to the reconstruction effort. Moreover, he ensured that superior-grade construction materials were made available. Tipu Sultan personally instructed Sayyed Beary to uphold the highest standards of quality throughout the process.
The renovated Beliye Palli, now known as Masjid-e-Zeenath Baksh, stands as a testament to Tipu Sultan’s dedication to preserving the region’s rich Islamic heritage and his commitment to honoring the historical and spiritual significance of this mosque.
Around the same time as the renovation of Beliye Palli, Tipu Sultan constructed another mosque approximately 1.5 kilometers away to serve as a prayer space for his soldiers. Located near Mangaluru’s Police Lane, this mosque is known as Fauj Masjid or the “Military Mosque.” Among the local Beary community, it is referred to as Line Dē Palli or Fauj-e-Masjid. However, the resources Tipu Sultan allocated for this mosque were modest compared to the significant expenditure on Beliye Palli, which held greater historical value as a foundational marker of Islam in India.
Muslims universally view all mosques as sacred, with three exceptions that hold unparalleled religious importance: Masjid al-Haram in Mecca, Masjid an-Nabawi in Medina, and Al-Aqsa Mosque in Palestine. Despite this egalitarian view, Tipu Sultan attributed exceptional importance to Beliye Palli due to its historical legacy as one of the earliest Islamic establishments in the region.
The reopening ceremony of Beliye Palli was graced by Tipu Sultan’s presence. At the time, the mosque did not carry the name Masjid-e-Zeenath Baksh. During the event, Tipu Sultan was captivated by the intricate wooden carvings and the exceptional artistry supervised by Sayyed Beary. Overwhelmed by its beauty, he reportedly exclaimed, “Zeenath Baksh”—a phrase meaning “a gift of beauty.” The phrase resonated and became the mosque’s official name. Among the older generation of the Beary community, the mosque was also affectionately called Sultan Palli, in recognition of Tipu Sultan’s extensive contributions to its reconstruction.
The mosque’s magnificence has left a lasting impression on all who visit it. During one visit, Bakshi Ghulam Muhammad, the Chief Minister of Kashmir, remarked, “I have visited hundreds of mosques across India and abroad, but I have never seen another mosque with such mesmerizing wooden carvings and craftsmanship.” These words underline the unique artistic and cultural significance of Masjid-e-Zeenath Baksh.
To this day, the artistic features of Masjid-e-Zeenath Baksh stand as a testament to its architectural brilliance. The minbar (pulpit), doors, windows, roof, and wooden carvings remain unrivaled in their craftsmanship. Adorned with Quranic verses, the names of Allah, and the name of Prophet Muhammad (PBUH) inscribed in exquisite Arabic calligraphy, the doors highlight the expertise of artisans, some of whom are believed to have been brought in from overseas. Every detail, from the carved walls to the shelves designed for holding Qurans, reflects the precision and dedication of the skilled craftsmen involved.
The mosque’s ablution pond and the ropes hanging from the high ceiling, which assist worshippers in accessing the elevated prayer area, add to its serene and spiritual ambiance. Visitors often speak of the tranquility and positive energy that envelops them upon entering the mosque’s sacred premises.
Mangaluru’s deep historical connections with Lakshadweep are evident in the mosque’s significance as a spiritual center. Many Sufi saints who carried the light of Islam to this region found their final resting place within its grounds. These saints traveled to Mangaluru through the Bandar port, and the mosque became a focal point of their spiritual endeavors. Among them, Jalal Mastan (RA) holds a place of honor, and the Bandar area remains synonymous with his legacy. Reverently referred to as “Bandar Maula” by devotees, his presence continues to be a spiritual beacon for many.
For centuries, Masjid-e-Zeenath Baksh has welcomed countless Sufi saints and dervishes, serving as a sanctuary for their spiritual journeys. Even today, Muslims from Paravoor and other regions make it a point to visit the mosque during their travels to Mangaluru. Its historical legacy and unparalleled captivate devotees and art enthusiasts alike, often leaving them eager to return.
In 2019, the mosque underwent a thoughtful renovation to ensure the preservation of its original design and architectural heritage. As one of the most significant landmarks in the history of Islam in India, Masjid-e-Zeenath Baksh continues to hold an esteemed position in the nation’s Muslim heritage, serving as a bridge between the past and present for generations to come.
Sources:
- Castes and Tribes of Southern India by Thurston
- Malabar Manual by William Logan
- Rihlath Ibn Battuta by Ibn Battuta
- Thuhfathul Mujahideen by Zainuddin Maqdoom
- Mykala by Abu Raihan Noori
- Mykalada Ninnegalu (article by K.M. Siddiq Montugoli, published in Moylanji magazine, October 1999)
- Tulu Nadina Bearygalu by Prof. B.M. Ichlangodu
About Author : Ismath Pajeer
Ismath Pajeer, a native of the quaint village of Pajeer in Dakshina Kannada district, has carved a niche for himself in Kannada literature through his thoughtful essays and writings. Known for his academic depth and literary talent, his essays have been included in the syllabi of undergraduate courses at prestigious institutions such as Mangalore University, Tumkur University, and Yenepoya University. Additionally, a character sketch penned by him has been featured in a Kerala State Board textbook, further showcasing the relevance of his work beyond Karnataka.
In 2019, Ismath Pajeer represented the Beary community at the South India History Colloquium held at Osmania University in Hyderabad. His contributions to chronicling and analyzing Beary history have significantly enhanced the academic understanding of the community’s rich cultural and historical heritage.
A prolific writer, Ismath has authored seven books in Kannada, one in English, and two in the Beary language. Besides, he has edited two notable works. His diverse interests include the study of ancient mosques, Sufi saints, monuments related to Tipu Sultan, and wildlife, reflecting a unique blend of historical, spiritual, and ecological fascinations.
Ismath Pajeer’s contributions to literature and academia have earned him widespread recognition, making him a respected voice in Kannada literature and Beary cultural studies.